SUDDIKSHANA KANNADA NEWS/ DAVANAGERE/ DATE-13-06-2025
ದಾವಣಗೆರೆ: ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್ 16 ರಿಂದ 18 ರವರೆಗೆ ನಗರದ ವಿನೋಬನಗರದ 1ನೇ ಮುಖ್ಯರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
ಜೂನ್ 16 ರಂದು ಮಧ್ಯಾಹ್ನ 3 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೇಳದಲ್ಲಿ ಒಟ್ಟು 20-25 ಮಾರಾಟ ಮಳಿಗೆಗಳಲ್ಲಿ ನೈಸರ್ಗಿಕವಾಗಿ ಮಾಗಿಸಿದಂತಹ ಸುಮಾರು 10 ಹಲುವು ಬಗೆಯ ಮಾವಿನ ಹಣ್ಣಿನ ತಳಿಗಳಾದ ಬಾದಾಮಿ, ಸಿಂದೂರ, ಕೇಸರಿ, ರಸಪುರಿ, ದಶೇರಿ, ಹಿಮಾಪಸಂದ್, ಮಲಗೋವ, ಬಂಗನಪಲ್ಲಿ ಮಲ್ಲಿಕಾ ತಳಿಗಳನ್ನು ಕೋಲಾರ, ಚಿಕ್ಕಬಳ್ಳಾಪುರ ರಾಮನಗರ ಹಾಗೂ ಧಾರವಾಡ ಜಿಲ್ಲೆಯ ರೈತರಿಂದ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಿದ್ದು ರೈತರಿಂದ ನೇರವಾಗಿ ನಾಗರೀಕರು ಖರೀದಿಸಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತೋಟಗಾರಿಕೆ ಹಿರಿಯ ನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.