SUDDIKSHANA KANNADA NEWS/ DAVANAGERE/ DATE:04-11-2023
ಬೆಂಗಳೂರು: 2021ನೇ ಸಾಲಿನ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.
ಇದೀಗ, ಅಂದರೆ ದಿನಾಂಕ 04.11.2023 ರಂದು ವಿಶೇಷ ರಾಜ್ಯ ಪತ್ರಿಕೆಯ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2020 ರನ್ವಯ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಮತ್ತು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.
ಇದರಲ್ಲಿ 2015ರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಭರ್ತಿಯಾಗದಿರುವ ಹುದ್ದೆಗಳಿಗೆ ಮತ್ತು ಪುಸ್ತುತ ನೇಮಕಾತಿಯಲ್ಲಿನ ವಿಷಯವಾರು, ಸ್ಥಳೀಯ ವೃಂದ, ಮಿಕ್ಕುಳಿದ ವೃಂದ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ‘ಸಿ’ ವರ್ಗದ ಸಿಬ್ಬಂದಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಆಯ್ಕೆಯಾದ ಸಿಬ್ಬಂದಿಗಳ ಪ್ರತ್ಯೇಕ ಆಯ್ಕೆ ಪಟ್ಟಿ ಇರುತ್ತದೆ.
ಈ ಮೂಲಕ ಪುಕಟಿಸಲಾದ ಆಯ್ಕೆ ಪಟ್ಟಿಯು ಹಾಗೂ ಅದರನ್ವಯ ಕೈಗೊಳ್ಳುವ ನೇಮಕಾತಿ ಪ್ರಕ್ರಿಯೆಯು ನೇಮಕಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಅಧಿನಿಯಮಗಳು/ಆದೇಶಗಳು/ಅಧಿಸೂಚನೆಗಳು/ಸುತ್ತೋಲೆಗಳಲ್ಲಿನ ಷರತ್ತು, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಹಾಗೂ ಈ ಬಗ್ಗೆ ಮಾನ್ಯ ಸಕ್ಷಮ ನ್ಯಾಯಾಲಯಗಳು ನೀಡುವ ನೀಡಿರುವ ತೀರ್ಪುಗಳಿಗೆ/ಆದೇಶಗಳಿಗೆ ಒಳಪಟ್ಟಿರುತ್ತದೆ.
ವಿಷಯವಾರು ಪ್ರತ್ಯೇಕ ಆಯ್ಕೆ ಪಟ್ಟಿಯ ಕೊನೆಯಲ್ಲಿ ನಮೂದಿಸಿರುವ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಆಗುವ ಅಂತಿಮ ತೀರ್ಮಾನದ ಪಾಲನೆಯ ಷರತ್ತಿಗೆ ಈ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಅಭ್ಯರ್ಥಿತನವು ಒಳಪಟ್ಟಿರುತ್ತದೆ.
ಈ ಮೂಲಕ ಪುಕಟಿಸಲಾದ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪೂರ್ವಚರಿತ್ರೆಯು ತೃಪ್ತಿಕರವಾಗಿರುವ ಕುರಿತಂತೆ ಮತ್ತು ಇತರೆ ಅವಶ್ಯಕವೆನಿಸುವ ಅಗತ್ಯ ವಿಚಾರಣೆ/ತಪಾಸಣೆಯ ನಂತರ ಅಭ್ಯರ್ಥಿತನವು ತೃಪ್ತಿಕರವಾಗಿದೆ ಎಂದು ನೇಮಕಾತಿ ಪ್ರಾಧಿಕಾರ ತೀರ್ಮಾನಿಸಿದಲ್ಲಿ ಮಾತ್ರ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕೆ ಅರ್ಹರಾಗುತ್ತಾರ ಹೊರತು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ನಮೂದಾಗಿದೆ ಎಂಬ ಕಾರಣದಿಂದಾಗಿ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿದಂತಾಗುವುದಿಲ್ಲ.
ಅಭ್ಯರ್ಥಿಗಳ ಅಭ್ಯರ್ಥಿತನವು ಮತ್ತು ನೇಮಕಾತಿ ಆದೇಶ ಪಡೆಯಲು ಅರ್ಹತೆಯು ಈ ಕೆಳಕಂಡ ಷರತ್ತುಗಳಿಗೊಳಪಟ್ಟಿದೆ.
1. ಸದರಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ ಕರ್ನಾಟಕ ಆಡಳಿತ ನ್ಯಾಯಮಂಡಳಿ/ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಅರ್ಜಿ/ರಿಟ್ ಅರ್ಜಿಗಳಲ್ಲಿ ಆಗುವ ಅಂತಿಮ ತೀರ್ಮಾನ.
2. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ದಾಖಲೆಗಳಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಲ್ಲಿ ಅವರ ಅಭ್ಯರ್ಥಿತನ ತಂತಾನೆ ರದ್ದಾಗುತ್ತದೆ.
3, ಅಭ್ಯರ್ಥಿಗಳ ಮೀಸಲಾತಿ, ಜಾತಿ ಮತ್ತು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಸಿಂಧುವಾಗಿವೆ ಎಂದು ಸಂಬಂಧಪಟ್ಟ ಇಲಾಖೆ / ಪ್ರಾಧಿಕಾರವು ದೃಢೀಕರಿಸಬೇಕು;
4. ಅಭ್ಯರ್ಥಿಗಳ ಅಭ್ಯರ್ಥಿತನ ಮತ್ತು ಆಯ್ಕೆಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರದ ತೀರ್ಮಾನವು ಅಂತಿಮವಾಗಿರುತ್ತದೆ.
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕಾಲೇಜು ಶಿಕ್ಷಣ ಇಲಾಖೆಯಲ್ಲಿ 1,242 ಸಹಾಯಕ ಪ್ರಾಧ್ಯಾಪಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು 2021ರಲ್ಲಿ ಆದೇಶಿಸಲಾಗಿತ್ತು. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಿತ್ತು.
ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಯ ಹೇಳಿಕೆ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಲು ಗೆಜೆಟ್ ಆಗಬೇಕಿತ್ತು. ಇದಕ್ಕಾಗಿ ವರ್ಷದಿಂದಲೂ ಕಾಯುತ್ತಿದ್ದೆವು. ಹೋರಾಟವನ್ನೂ ಸಹ ಮಾಡಿದ್ದೆವು. ಉನ್ನತ ಶಿಕ್ಷಣ ಸಚಿವರು ಸಕಾರತ್ಮಕವಾಗಿ ಸ್ಪಂದಿಸಿದರು. ಅವರು ನುಡಿದಂತೆಯೆ ನಡೆದಿದ್ದರಿಂದ ಈಗ ನಮಗೆಲ್ಲ ಆತಂಕ ದೂರವಾಗಿ, ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಗೆಜೆಟ್ ನಂತರ ಆಗಬೇಕಿರುವ ಪ್ರಕ್ರಿಯೆಗಳು ಶೀಘ್ರವಾಗಿ ಮುಗಿದು, ಆದೇಶ ಪ್ರತಿ ಸಿಗುವಂತಾಗಲಿ ಎಂದು ಶಿವಮೊಗ್ಗದ ಡಾ. ರವಿ ಎಂ. ಸಿದ್ಲಿಪುರ ಒತ್ತಾಯಿಸಿದ್ದಾರೆ.