ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆಗಸ್ಟ್ 14,2026 ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮಟ್ಟದ ‘ಹೆಚ್.ಆರ್ ಕಾನ್ಕ್ಲೇವ್’ (HR Conclave) ಸಮ್ಮೇಳನವು ಅತ್ಯಂತ ಯಶಸ್ವಿಯಾಯಿತು. ಇದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಸಾಟಿಯಾಯಿತು.
ಮಧ್ಯ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯದಲ್ಲೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಹೆಚ್.ಆರ್ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಸಣ್ಣ ಪ್ರಯತ್ನಕ್ಕೆ ಜಿಎಂ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ. ಕಾರ್ಯಕ್ರಮದಲ್ಲಿ ದೇಶದ ಐಟಿ ರಂಗ, ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಎಸ್‌ಟಿಪಿಐ (STPI) ಡೈರೆಕ್ಟರ್ ಮಹಾದೇಶ ವಿ, ಭಾರತವು 2032ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಧಾವಿಸುತ್ತಿದ್ದು, ದೇಶದ ಜಿಡಿಪಿಗೆ (GDP) ಐಟಿ-ಬಿಪಿಎಂ ಕ್ಷೇತ್ರವು ಶೇ. 8 ರಿಂದ 10 ರಷ್ಟು ಕೊಡುಗೆ ನೀಡುತ್ತಿದೆ. 2026ರ ವೇಳೆಗೆ ಭಾರತದ ಐಟಿ ಉದ್ಯಮವು ಸುಮಾರು 315 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಎಸ್‌ಟಿಪಿಐ ಘಟಕಗಳಿಂದ ನಡೆಯುವ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ. 42.5 ರಷ್ಟಿದ್ದು, ರಾಜ್ಯವು ಐಟಿ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದೆ. 2022ರಲ್ಲಿ ದಾವಣಗೆರೆಯಲ್ಲಿ ಸ್ಥಾಪನೆಯಾದ ಎಸ್‌ಟಿಪಿಐ ಕೇಂದ್ರವು ಡಾ. ಜಿ.ಎಂ. ಸಿದ್ಧೇಶ್ವರ ಅವರ ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಲ್ಲಿನ ಘಟಕಗಳಿಂದ ಸುಮಾರು 3.8 ಕೋಟಿ ರೂಪಾಯಿ ಮೌಲ್ಯದ ರಫ್ತು ವಹಿವಾಟು ನಡೆದಿದ್ದು, ದಾವಣಗೆರೆಯು ತಂತ್ರಜ್ಞಾನ ಕೇಂದ್ರವಾಗಿ ಬೆಳೆಯುವ ಸ್ಪಷ್ಟ ಸೂಚನೆ ನೀಡಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ರೋಬೋಟಿಕ್ಸ್, ಸೈಬರ್ ಸೆಕ್ಯುರಿಟಿ ಹಾಗೂ 5G/6G ಯಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸೂಕ್ತ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ (Upskilling) ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.
‘ಕರ್ನಾಟಕ ಐಟಿ ನೀತಿ 2025-2030’ ಹಾಗೂ ‘ಸ್ಟಾರ್ಟ್‌ಅಪ್ ನೀತಿ’ಯ ಮೂಲಕ ಬೆಂಗಳೂರಿನ ಹೊರತಾದ ಜಿಲ್ಲೆಗಳಲ್ಲೂ 10,000ಕ್ಕೂ ಹೆಚ್ಚು ಹೊಸ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದ್ದು, ದಾವಣಗೆರೆ ಜಿಲ್ಲೆಯ ಯುವಜನತೆಗೆ ಇದು ಸುವರ್ಣ ಅವಕಾಶವಾಗಲಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯನ್ನು ಕೇವಲ ಶೈಕ್ಷಣಿಕ ಕೇಂದ್ರವನ್ನಷ್ಟೇ ಅಲ್ಲದೆ ಪ್ರಮುಖ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಹಬ್ (Innovation Hub) ಆಗಿ ಬೆಳೆಸುವ ಕುರಿತು ತಮ್ಮ ನೂತನ ದೃಷ್ಟಿಕೋನವನ್ನು ಹಂಚಿಕೊಂಡರು. ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಹ್ಯಾಕಥಾನ್‌ನಲ್ಲಿ (Hackathon) ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲ ಚಿಂತನೆ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿರುವ ಜಿಎಂ ವಿಶ್ವವಿದ್ಯಾಲಯದ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕೆ ಸೀಮಿತವಾಗದೆ, ಉದ್ಯಮ ಕ್ಷೇತ್ರದ ಹೊಸ ಬೇಡಿಕೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಅತ್ಯಗತ್ಯ. ಕೃತಕ ಬುದ್ಧಿಮತ್ತೆ (AI) ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಮೂಲಕ ಉನ್ನತ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಇಂತಹ ಸಮ್ಮೇಳನಗಳು ಸೂಕ್ತ ವೇದಿಕೆಯಾಗಲಿದೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮ ರಂಗದ ಜಂಟಿ ಸಹಯೋಗದೊಂದಿಗೆ ದಾವಣಗೆರೆ ಜಿಲ್ಲೆಯು ಕರ್ನಾಟಕದ ನಕ್ಷೆಯಲ್ಲಿ ಪ್ರಮುಖ ನಾವೀನ್ಯತೆ ಹಾಗೂ ಉದ್ಯಮಶೀಲತೆಯ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಲ್ಲಾ ಎಚ್‌ಆರ್ ಪ್ರತಿನಿಧಿಗಳಿಗೆ ವಿಶ್ವವಿದ್ಯಾಲಯದ ಪರವಾಗಿ ಹೃತ್ಪೂರ್ವಕ ಸ್ವಾಗತ ಹಾಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು. “ದಾವಣಗೆರೆಯಲ್ಲಿ ಏರ್‌ಪೋರ್ಟ್ ಇಲ್ಲದಿದ್ದರೂ, ಬೆಂಗಳೂರು ಮತ್ತು ಹುಬ್ಬಳ್ಳಿಯ ಮೂಲಕ ದೂರದ ದೆಹಲಿಯಿಂದಲೂ ಹೆಚ್.ಆರ್ ಮುಖ್ಯಸ್ಥರು ಆಗಮಿಸಿ ಸ್ಪಂದಿಸಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಗ್ರಾಮೀಣ ಮತ್ತು ದಾವಣಗೆರೆ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಸಿಗಬೇಕೆಂಬುದೇ ನಮ್ಮ ಮುಖ್ಯ ಉದ್ದೇಶ ಎಂದರು.
ಮಾಜಿ ಕೇಂದ್ರ ಸಚಿವರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಬಂದ ಮೇಲೆ ಕೆಲಸಗಳು ಹೊರಟುಹೋಗುತ್ತವೆ ಎಂಬ ವದಂತಿಗಳಿಗೆ ತೆರೆ ಎಳೆದು, ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಉದ್ದೇಶದ ಈ ಸಮ್ಮೇಳನವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಹೊಸ ಭರವಸೆ ಹಾಗೂ ಅತ್ಯುತ್ತಮ ಅವಕಾಶಗಳನ್ನು ತರಲಿದೆ. ಈ ಸಮ್ಮೇಳನದಲ್ಲಿ ಮೂಡಿಬಂದ ವಿಚಾರಗಳು ಹಾಗೂ ಹೊಸ ತಂತ್ರಜ್ಞಾನದ ಚರ್ಚೆಗಳು ಯುವ ಆವಿಷ್ಕಾರಕರಿಗೆ, ಉದ್ಯಮಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಹೊಸ ದಾರಿ ತೋರಿಸಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಇನ್ಫೋಸಿಸ್ ಫಿನಾಕಲ್- ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ & ಸ್ಟ್ರಾಟೆಜಿ ಗ್ಲೋಬಲ್ ಹೆಡ್ ಕೃಷ್ಣಸ್ವಾಮಿ ಸುಬ್ಬರಾವ್, “ಕೃತಕ ಬುದ್ಧಿಮತ್ತೆ (AI) ಬಂದ ತಕ್ಷಣ ಕೆಲಸಗಳು ಹೊರಟುಹೋಗುವುದಿಲ್ಲ, ಬದಲಿಗೆ ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ (Jobs are redefined). ಕೋರ್ ವಿಷಯಗಳ ಜೊತೆಗೆ ಸಾಫ್ಟ್‌ವೇರ್ ಅಳವಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡರೆ ಉದ್ಯೋಗಾವಕಾಶಗಳಿಗೆ ಯಾವುದೇ ಕೊರತೆಯಿಲ್ಲ” ಎಂಬ ವಿಶ್ವಾಸ ಮೂಡಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆಟೋರ್ಯಾಬಿಟ್ (AutoRabit) ಗ್ಲೋಬಲ್ ಹೆಡ್ ಸಂಕೇತ್ ರಾಮಕೃಷ್ಣ ಮೂರ್ತಿ, “ಟ್ಯಾಲೆಂಟ್ ಅಥವಾ ಪ್ರತಿಭೆ ಬರಿ ಬೆಂಗಳೂರು, ಮುಂಬೈಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ಪ್ರತಿಭೆ ಇದೆ. ಟೈರ್-2 (Tier-2) ನಗರಗಳ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸಿ, ಅವರಿಗೆ ಸಾರ್ಟ್-ಅಪ್ (Startups) ಹಾಗೂ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಗುರಿ” ಎಂದರು.
ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್ ಸೇರಿದಂತೆ ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಜಿಎಂ ಶೈಕ್ಷಣಿಕ ಸಮೂಹದವರು ಉಪಸ್ಥಿತರಿದ್ದರು.
ಈ ಬೃಹತ್ ಸಮಾವೇಶದ ಮೂಲಕ ಜಿಎಂ ವಿಶ್ವವಿದ್ಯಾಲಯವು ದಾವಣಗೆರೆ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಹೊಸ ಉದ್ಯೋಗದ ಹಾದಿಗಳನ್ನು ತೆರೆದಿಟ್ಟಿದೆ.
ಹೆಚ್.ಆರ್ ಪ್ರಮುಖರ ಅನಿಸಿಕೆಗಳು:
ರೋಬೋಸಾಫ್ಟ್ ಟೆಕ್ನಾಲಜೀಸ್ ಹೆಚ್.ಆರ್ ಹೆಡ್ ನದೀಮ್ ಪಾಷಾ, “ದಾವಣಗೆರೆಯಂತಹ ನಗರದಲ್ಲಿ ಇಂತಹ ದೊಡ್ಡ ಮಟ್ಟದ ಹೆಚ್.ಆರ್ ಕಾನ್ಫರೆನ್ಸ್ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅತ್ಯಂತ ಲಾಭದಾಯಕ.”ಮುಂಬೈ ಐಬಿಎಂ ಪ್ರತಿನಿಧಿ ಹರಿ, “ಜಿಎಂ ವಿಶ್ವವಿದ್ಯಾಲಯದ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ ಶಿಕ್ಷಣಕ್ಕೆ ನೆರವಾಗಲು ನಾವು ಸದಾ ಸಿದ್ಧ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವುದನ್ನು ಕಲಿಯಬೇಕು.”
ದೇಶಾದ್ಯಂತ ಆಗಮಿಸಿದ ಎಚ್‌ಆರ್ ಮುಖ್ಯಸ್ಥರು:
ವಿದ್ಯಾರ್ಥಿಗಳ ಭವಿಷ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಚರ್ಚೆ.
ಈ ಕಾನ್‌ಕ್ಲೇವ್‌ನಲ್ಲಿ ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಿಂದ 75ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಹೆಚ್.ಆರ್ (HR) ಪ್ರತಿನಿಧಿಗಳು ಹಾಗೂ ಉದ್ಯಮ ರಂಗದ ಪ್ರಮುಖರು, ಶಿಕ್ಷಣ ತಜ್ಞರು ಭಾಗವಹಿಸಿ, ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಉನ್ನತ ಶಿಕ್ಷಣದ ಭವಿಷ್ಯ, ಉದ್ಯೋಗಾವಕಾಶಗಳು ಹಾಗೂ ಪ್ರಸ್ತುತ ಕಾರ್ಪೊರೇಟ್ ಕ್ಷೇತ್ರದ ಅಗತ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ದಿಕ್ಸೂಚಿ ನೀಡಿದರು.
ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಿ, ಇಲ್ಲಿನ ಶೈಕ್ಷಣಿಕ ವಾತಾವರಣ ಮತ್ತು ಸೌಲಭ್ಯಗಳನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವ ಭರವಸೆ ನೀಡಿದರು. ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಪರಸ್ಪರ ಹೇಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ತಂತ್ರಜ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಹೇಗೆ ಎಂಬ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
- AI upskilling
- Davanagere technology hub
- GM Lingaraju
- GM Siddeshwara
- GM University Davanagere
- HR Conclave 2026
- IT industry growth Karnataka
- IT Policy 2025-2030
- job placements Karnataka
- Mahadesha V
- STPI Bengaluru
- ಉದ್ಯೋಗಾವಕಾಶ
- ಎಸ್‌ಟಿಪಿಐ ಬೆಂಗಳೂರು
- ಐಟಿ ವಲಯ
- ಕರ್ನಾಟಕ ಐಟಿ ನೀತಿ
- ಕೌಶಲ್ಯಾಭಿವೃದ್ಧಿ
- ಜಿ ಎಮ್ ಲಿಂಗರಾಜು
- ಜಿ ಎಮ್ ಸಿದ್ಧೇಶ್ವರ
- ಜಿಎಂ ವಿಶ್ವವಿದ್ಯಾಲಯ
- ದಾವಣಗೆರೆ ನ್ಯೂಸ್
- ದಾವಣಗೆರೆ ಸುದ್ದಿ
- ಮಹಾದೇಶ ವಿ
- ಹೆಚ್ಆರ್ ಕಾನ್ಕ್ಲೇವ್





Leave a comment