ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಿ.ಎಂ. ಸಿದ್ದೇಶ್ವರರಿಗೆ ಬಹುಪರಾಕ್: ರೇಣು ಅಂಡ್ ಟೀಂ ವಿರುದ್ಧ ವಾಗ್ಬಾಣಗಳ ಸುರಿಮಳೆ!

On: July 8, 2025 6:00 PM
Follow Us:
ಜಿ.ಎಂ. ಸಿದ್ದೇಶ್ವರ
---Advertisement---

SUDDIKSHANA KANNADA NEWS/ DAVANAGERE/ DATE_08-07_2025

ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮತ್ತವರ ತಂಡದ ವಿರುದ್ಧ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ  ಅವರ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ
ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ವಾಗ್ಬಾಣಗಳ ಸುರಿಮಳೆಯೇ ಆಯ್ತು.

READ ALSO THIS STORY: ಬಿ. ಎಸ್. ಯಡಿಯೂರಪ್ಪ ಅಧಿಕಾರಕ್ಕೇರಲು ಸಹಾಯ ಮಾಡಿದ್ದೇಗೆಂದು ಎಳೆ ಎಳೆಯಾಗಿ ಬಿಚ್ಚಿಟ್ಟ ಜಿ.ಎಂ. ಸಿದ್ದೇಶ್ವರ !

ಸಮಾರಂಭದಲ್ಲಿ ಮಾತನಾಡಿದ ಬಹುತೇಕ ನಾಯಕರು ಜಿ. ಎಂ. ಸಿದ್ದೇಶ್ವರ ಅವರನ್ನು ಕೊಂಡಾಡಿದರು. ಸಂಸದರಾಗಿ, ಕೇಂದ್ರ ಸಚಿವರಾಗಿ, ಶಿಕ್ಷಣೋದ್ಯಮಿಯಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಮಾಡಿರುವ ಸೇವೆಯನ್ನು ಸ್ಮರಿಸಿದರು. ಅದೇ ರೀತಿಯಲ್ಲಿ ಎಂ. ಪಿ. ರೇಣುಕಾಚಾರ್ಯ ಮತ್ತು ಅವರ ತಂಡದವರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಲಕ್ಷಾಂತರ ಕಾರ್ಯಕರ್ತರು ಹಾಗೂ ಜನರ ಸೇವೆ ಮಾಡಲು ಉಸಿರು ಗಟ್ಟಿಯಾಗಿಟ್ಟುಕೊಂಡಿದ್ದೇನೆ. ಋಣ ತೀರಿಸುವ ಕೆಲಸ ಮಾಡುತ್ತೇನೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಭ್ರಷ್ಟಾಚಾರ ರಹಿತ ವ್ಯಕ್ತಿ ಮುಖ್ಯಮಂತ್ರಿಯನ್ನಾಗಿಸೋಣ. ಮತ್ತೆ ನಾವು ಅಧಿಕಾರ ಪಡೆಯುತ್ತೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 6 ಲಕ್ಷದ 9 ಸಾವಿರ ಮತಗಳು ಬಂದಿವೆ. ಜನಪರ ಕೆಲಸ ಮಾಡದಿದ್ದರೆ ಇಷ್ಟೊಂದು ಮತಗಳು ಬರಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.

ಚನ್ನಗಿರಿ, ಹೊನ್ನಾಳಿಗೆ ಸಂಸದನಾಗಿ ಹೋಗಿದ್ದಾಗ ಜಿ. ಎಂ. ಸಿದ್ದೇಶ್ವರ ಅಭಿವೃದ್ಧಿಯ ಹರಿಕಾರ, ಅನುದಾನ ತಂದವರು, ಯೋಜನೆಗಳ ಸಾಕಾರಗೊಳಿಸಿದವರು ಎಂದು ಭಾಷಣ ಮಾಡುತ್ತಿದ್ದರು. ಆದ್ರೆ, ಲೋಕಸಭೆ ಚುನಾವಣೆ ವೇಳೆ ಕೆಲಸ ಮಾಡಿಲ್ಲ, ಸೀಟ್ ಕೊಡಬೇಡಿ, ಅವರ ಕುಟುಂಬಕ್ಕೆ ಕೊಡಬೇಡಿ ಎಂದು ಲಗಾನ್ ಟೀಂ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ದೇವರಾಣೆ ನಾನು ಟಿಕೆಟ್ ಬೇಡಿಕೊಂಡಿಲ್ಲ, ಕೇಳಿಲ್ಲ. ಅಮಿತ್ ಶಾ ಅವರೇ ಮಾತನಾಡಿದ್ದರು. ಆ ಜಾಗದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್ ಇದ್ದರು. ಒಂದು ವರ್ಷ ಮುಂಚೆನೇ ನಾನು ನಿಲ್ಲಲ್ಲ ಎಂದು ಹೇಳಿದ್ದೆ. ಆರೋಗ್ಯ ಸಮಸ್ಯೆ ಆಗಲೂ ಇತ್ತು. ಈಗಲೂ ಇದೆ. ಚುನಾವಣೆ ವೇಳೆ ಆರೋಗ್ಯದ ಸಮಸ್ಯೆ ಇತ್ತು. ಚುನಾವಣೆ ವೇಳೆ ಆರೋಗ್ಯ ಸಮಸ್ಯೆಯಿಂದ ಹೆಚ್ಚು ಓಡಾಡಲು ಆಗಲಿಲ್ಲ. ದುರುಪಯೋಗಪಡಿಸಿಕೊಂಡು ಮಾರ್ಚ್ 6ರಂದು ದಾವಣಗೆರೆ ಬಂತು. ಅಮಿತ್ ಶಾ ಅವರೇ ಖುದ್ದು ಫೋನ್ ಮಾಡಿದ್ದರು. ತಮ್ಮ, ಮಗ, ಪತ್ನಿ ಯಾರಿಗೆ ನೀಡಬೇಕೆಂದರು. ಕಾಂಗ್ರೆಸ್ ನವರು ಮಹಿಳೆಗೆ ಕೊಡುತ್ತಾರೆ.ಹಾಗಾಗಿ ಪತ್ನಿಗೆ ನೀಡಿ ಎಂದೆ. ಪತ್ನಿಗೆ ಕೇಳಿದೆ. ಸೀಟ್ ಕೊಟ್ಟಿದ್ದಾರೆ ಯಾಕೆ ನಿಲ್ಲೋದು ಬೇಡ ಎಂದರು. ನಾನು ಸುಮ್ಮನಾದೆ. ಚುನಾವಣೆ ಮಾಡಿದೆವು. ಯಾರು ವಿರೋಧ ಮಾಡಿದೆವು ಎಂದು ಗೊತ್ತಿದೆ. ಕ್ಷೇತ್ರದ ಜನರು, ಕಾರ್ಯಕರ್ತರು ಕೈಹಿಡಿದಿದ್ದಾರೆ, ಆರು ಲಕ್ಷ 9 ಸಾವಿರ ಮತ ನೀಡಿದ್ದಾರೆ. ಗಟ್ಟಿಯಾಗಿ ನಿಂತಿದ್ದೇನೆ. ಕಾರ್ಯಕರ್ತರ ಸೇವೆ ಮಾಡಬೇಕು. ಜೊತೆಗೆ ಇರಬೇಕು ಎಂಬ ದೃಷ್ಟಿಯಿಂದ ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ನಾನು ಸಾಯುವವರೆಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಗೋವಿಂದ ಕಾರಜೋಳ ಏನಂದ್ರು

ಸಂಸದ ಗೋವಿಂದ ಕಾರಜೋಳ ಮಾತನಾಡಿ ಸಿದ್ದೇಶ್ವರ ಅವರು ಚಿತ್ರದುರ್ಗದ ಬೀಮನಸಮುದ್ರದಲ್ಲಿ ಹುಟ್ಟಿ ಬೆಳದವರು. ಜನ್ಮ ಭೂಮಿ ಚಿತ್ರದುರ್ಗ ಭೀಮನಸಮುದ್ರವಾದರೆ ಕರ್ಮಭೂಮಿ ದಾವಣಗೆರೆ. ದಾವಣಗೆರೆ ಅಭಿವೃದ್ಧಿಗೆ ನಾಲ್ಕು ಬಾರಿ ಸಂಸದರಾಗಿ ಜಿ. ಎಂ. ಸಿದ್ದೇಶ್ವರ ಹಾಗೂ ಅವರ ತಂದೆ ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ಸಂಸದರಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೆ. ಹೆಚ್. ಪಟೇಲ್ ಅವರ ಆಶಯದಂತೆ ದಾವಣಗೆರೆ ಜಿಲ್ಲೆಯಾದ ಬಳಿಕ ಸಿದ್ದೇಶ್ವರರು ಮಾಡಿರುವ ಅಭಿವೃದ್ಧಿ ಅಪಾರ. ಬಿ. ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಅನೇಕ ಯೋಜನೆಗಳನ್ನು ತರುವುದಷ್ಟೇ ಅಲ್ಲ, ಹೆಚ್ಚು ಅನುದಾನ ತಂದು ಜಿಲ್ಲೆ ಅಭಿವೃದ್ಧಿಪಡಿಸಿರುವ ಕೀರ್ತಿ ಸಿದ್ದೇಶ್ವರ ಅಣ್ಣರಿಗೆ ಸಲ್ಲುತ್ತದೆ ಎಂದರು.

ರಾಜಕೀಯದಲ್ಲಿ ಸೋಲು ಗೆಲುವು ಸ್ವಾಭಾವಿಕ. ಸಂದರ್ಭಕ್ಕನುಗುಣವಾಗಿ ಆಗುತ್ತದೆ. ಅವಕಾಶ ಇತ್ತು, ಅದೃಷ್ಟ ಇಲ್ಲ. ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನಾನು ಮತ್ತು ಅರವಿಂದ ಲಿಂಬಾವಳಿ ಅಖಂಡ ಬಿಜಾಪುರ ಜಿಲ್ಲೆಯಿದ್ದಾಗ
ಅಲ್ಲೇ ಹುಟ್ಟಿ ಬೆಳೆದವರು. ಬೆಂಗಳೂರು ರಾಜಕಾರಣಕ್ಕೆ ಲಿಂಬಾವಳಿ ಹೋದರೆ ನಾನು ನಾಲ್ಕು ನೂರು ಕಿಲೋಮೀಟರ್ ದೂರದ ಚಿತ್ರದುರ್ಗಕ್ಕೆ ಬಂದು ಎಂಪಿ ಆದೆ. ಅದಕ್ಕೆ ಕಾರಣ ಅದೃಷ್ಟ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ
ಪುತ್ರ ಬಂದು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಪ್ರತಾಪ್ ಸಿಂಹ:

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ ದಾವಣಗೆರೆಯಲ್ಲಿ ಜಲಸಿರಿ ಯೋಜನೆಗೆ 620 ಕೋಟಿ ರೂಪಾಯಿ ತಂದವರು ಸಿದ್ದೇಶ್ವರರು. ದಾವಣಗೆರೆ – ಚಿತ್ರದುರ್ಗ – ತಮಕೂರು ರೈಲ್ವೆ ಯೋಜನೆಗೆ 1800 ಕೋಟಿ ರೂಪಾಯಿ ಅನುದಾನ, ವಂದೇ ಭಾರತ್ ರೈಲು ಸೇರಿದಂತೆ ರೈಲ್ವೆ ಯೋಜನೆಗಳಿಗೆ ಸಾಕಷ್ಟು ಒತ್ತು ನೀಡಿದವರು. ಕಾಂಗ್ರೆಸ್ ನ ಹುತ್ತದಲ್ಲಿ ಕಮಲ ಅರಳಿಸಿದವರು ಮಲ್ಲಿಕಾರ್ಜುನಪ್ಪ. ಅವರ ಮಗನಾಗಿ ಬಂದು ನಾಲ್ಕು ಬಾರಿ ಗೆದ್ದರು. ಸಿದ್ದೇಶ್ವರ ಅವರ ರಿಪೋರ್ಟ್ ಕಾರ್ಡ್ ನೋಡಿದರೆ ಸಾಧನೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಯಶವಂತರಾವ್ ಜಾಧವ್:

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಅಧಿಕಾರ ಇಲ್ಲದಿದ್ದರೂ ಸಿದ್ದೇಶ್ವರರ ಜೊತೆ ಜನರಿದ್ದಾರೆ. ಬಹಳಷ್ಟು ಜನರು ಸಿದ್ದೇಶಣ್ಣ ಸೋತರು, ಅಳುತ್ತಾ ಕುಳಿತಿದ್ದಾರೆ, ಆಲದ ಮರದ ಕೆಳಗಡೆ ಕೂರಿಸಬೇಕು, ನಮ್ಮ ಜಿಲ್ಲೆಯವರೇ ಅಲ್ಲ ಅಂದೆಲ್ಲಾ ಹೇಳಿದರು. ಸಿದ್ದೇಶ್ವರ ಅವರ ಕುಟುಂಬವು ಎಂಟು ಬಾರಿ ಸಂಸತ್ ಪ್ರವೇಶಿಸಿದೆ. ಅವರಿಗೆ ಟಿಕೆಟ್ ಕೊಡಬಾರದು ಎಂದವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ನಾವೆಂದು ಸೋಲಿಗೆ ಹೆದರಿಲ್ಲ. ನಾನು ನಾಲ್ಕು ವಿಧಾನಸಭೆ ಚುನಾವಣೆ ಸೋತಿದ್ದೇನೆ. ಬೆನ್ನು ತೋರಿಸಿ ನಾನು ಶತ್ರುಗಳಿಗೆ ಓಡಿ ಹೋಗಿಲ್ಲ. ನಾನು ಪಕ್ಷದ ಜೊತೆಗಿದ್ದೇನೆ. ಪಕ್ಷಕ್ಕೆ ಕಷ್ಟ ಬಂದಾಗ ಬಿಗಿಯಾಗಿ ನಿಂತ ನಾಯಕರೆಂದರೆ ಅದು ಸಿದ್ದೇಶಣ್ಣ ಮಾತ್ರ ಎಂದರು.

ಹೆಚ್. ಎಸ್. ಶಿವಶಂಕರ್ ಮಾತನಾಡಿ ಸಿದ್ದೇಶ್ವರ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಗೆದ್ದಾಗ ಜೊತೆಗೆ ಇದ್ದವರೇ ಅವರಿಗೆ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ನಮಗೆ ಸೋತು ಅನುಭವವಿದೆ. ಸಿದ್ದೇಶಣ್ಣ ಯಾವಾಗಲೂ ಗೆಲ್ಲುತ್ತಾ ಬಂದಿದ್ದರು. ಅವರಿಗೆ ಈಗ ಗೊತ್ತಾಗಿದೆ ಯಾರೂ ನಮ್ಮವರು, ನಮಗೆ ಚೂರಿ ಹಾಕುವವರು ಎಂದು ಹೇಳಿದರು.

ಶಾಸಕ ಬಿ. ಪಿ. ಹರೀಶ್, ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಎಸ್. ವಿ. ರಾಮಚಂದ್ರ, ಹೆಚ್. ಪಿ. ರಾಜೇಶ್, ಜಿ. ಎಸ್. ಅನಿತ್ ಕುಮಾರ್, ಬಿ. ವಿ. ನಾಯಕ್, ವೀರೇಶ್ ಹನಗವಾಡಿ, ಶಾಂತರಾಜ್ ಪಾಟೀಲ್,
ಜೀವನ್ ಮೂರ್ತಿ, ದೂಡಾ ಮಾಜಿ ಅಧ್ಯಕ್ಷರಾದ ಎ. ವೈ. ಪ್ರಕಾಶ್, ದೇವರಮನಿ ಶಿವಕುಮಾರ್, ಹಿರಿಯ ಮುಖಂಡ ಮುರುಗೇಶ್ ಆರಾಧ್ಯ, ಬಿಜೆಪಿಯ ಗುಲ್ಬರ್ಗಾ ಭಾಗದ ಮುಖಂಡ ರವಿ ಬಿರಾದಾರ್, ಹೊನ್ನಾಳಿ ಕ್ಷೇತ್ರದ ಎ. ಬಿ. ಹನುಮಂತಪ್ಪ, ಎಂ. ಆರ್. ಮಹೇಶ್, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಸಂಗನಗೌಡರು, ಅಜಿತ್ ಸಾವಂತ್, ಲಿಂಗರಾಜ್, ಸೊಕ್ಕೆ ನಾಗರಾಜ್, ಹನುಮಂತ್ ನಾಯ್ಕ್, ದೇವೇಂದ್ರಪ್ಪ, ಹಾಲೇಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ. ಎಸ್. ಶ್ಯಾಮ್, ಜಯಮ್ಮ, ಸಿ. ಆರ್. ನಾಸೀರ್ ಅಹ್ಮದ್, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಜಿ. ಪಂ., ತಾ.ಪಂ., ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment