SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ : ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರಿನಡಿಯ ಜಿಎಂ ಲೀಗ್ ನಡಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಪಂದ್ಯಾವಳಿಗಳು ಶುಭಾರಂಭಗೊಂಡಿದೆ.
ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಬರುವ ಫೆಬ್ರವರಿ 4 ರಿಂದ 16 ರವರೆಗೆ ಜಿಎಂ ವಿಶ್ವವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ನಡೆಯಲಿರುವ ಜಿಎಂ ಲೀಗ್ ಕ್ರೀಡಾ ಹಬ್ಬಕ್ಕೆಕುಸ್ತಿ ಪಟು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಾದ ಕಾರ್ತಿಕ್ ಜಿ ಕಾಟೆ ಚಾಲನೆ ನೀಡಿದರು.
ಕ್ರೀಡಾಪಟುಗಳ ಉದ್ದೇಶಿಸಿ ಕಾರ್ತಿಕ್ ಜಿ ಕಾಟೆ ಮಾತನಾಡಿ, ನಿಮ್ಮಲ್ಲಿರುವ ಕ್ರೀಡಾ ಕೌಶಲ್ಯವು ಕೇವಲ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಅಷ್ಟೇ ಅಲ್ಲದೇ ಅದರಿಂದ ಆಚೆಯೂ ರಾಜ್ಯ, ರಾಷ್ಟ್ರಮಟ್ಟದಲ್ಲೂ ಸಹ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ತಂದೆ ತಾಯಿಯರ ಹೆಸರಿನಿಂದ ಬದುಕುವುದರ ಬದಲಿಗೆ ತಂದೆ ತಾಯಿಯರ ಹೆಸರು ಬೆಳೆಸಿ ಉಳಿಸುವಂತಹ ಮಕ್ಕಳಾಗಿ ನಾವು ಬೆಳೆಯಬೇಕು. ನಮ್ಮ ಮರಣದ ನಂತರವೂ ನಮ್ಮ ಹೆಸರು ಉಳಿಯುವಂತಹ ಸಾಧನೆಯನ್ನು ನಾವು ಮಾಡಬೇಕು. ಅವಕಾಶಗಳನ್ನು ನಾವು ಹುಡುಕೋದಕ್ಕಿಂತ ಅವಕಾಶಗಳು ನಮ್ಮನೆ ಹುಡುಕಿಕೊಂಡು ಬರುವಂತೆ ನಾವು ಬೆಳೆಯಬೇಕು ಎಂದ ಅವರು, ಕುಸ್ತಿ ಪಂದ್ಯದಲ್ಲಿನ ತಮ್ಮ ಏಳು- ಬೀಳು ಮತ್ತು ಸಾಧನೆಗಳ ಬಗ್ಗೆ ವಿವರಿಸುತ್ತಾ ಕ್ರೀಡಾಪಟುಗಳಲ್ಲಿ ಪ್ರೋತ್ಲಾಹ ತುಂಬಿದರು.
ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿ, ಜಿಎಂ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಕ್ರೀಡೆಯನ್ನು ಕಲಿಯುವಂತೆ, ಭಾಗವಹಿಸುವಂತೆ ಅಥವಾ ಅಭ್ಯಾಸ ಮಾಡುವಂತೆ ಮಾಡಬೇಕು. ಜಿಎಂ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸಹ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಆಶಿಸಿದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಕೇವಲ ಸ್ವಲ್ಪ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಆದರೆ ಮುಂದಿನ 3 ಅಥವಾ 4 ವರ್ಷಗಳಲ್ಲಿ ಸುಮಾರು 16,000 ವಿದ್ಯಾರ್ಥಿಗಳಿರುತ್ತಾರೆ. ಹಾಗಾಗಿ ಇತ್ತೀಚಿಗೆ ಅತ್ಯಂತ ಪ್ರಮುಖವಾಗಿರುವ ಕ್ರೀಡೆಗಳನ್ನು ಕಡ್ಡಾಯಗೊಳಿಸಿ, ಪಠ್ಯಕ್ರಮದ ಭಾಗವಾಗಿ ಕ್ರೀಡಾ ಕ್ರೆಡಿಟ್ ಅನ್ನು ಸೇರಿಸಿ. ಕನಿಷ್ಠ ಒಂದು ಕ್ರೀಡೆಯನ್ನು ಆಯ್ಕೆ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.
ದಿನದ 24 ತಾಸು ಕಂಪ್ಯೂಟರ್ ಮುಂದೆ ಕುಳಿತು ಮನೆಯಲ್ಲಿ ಕೆಲಸ ಮಾಡುವುದರಿಂದ ದೇಹ ದಂಡನೆ ಮಾಡಿದಂತಾಗುವುದಿಲ್ಲ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಅನಾರೋಗ್ಯ ಕಾಡುವುದು ಸಹಜ. ಆದ್ದರಿಂದ
ಕನಿಷ್ಠ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾ ಕೌಶಲ್ಯವನ್ನು ಹೊಂದಿದರೆ ವಾರದಲ್ಲಿ ಒಂದು ದಿನವಾದರೂ ಎಲ್ಲರೂ ಸೇರಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಜಿಎಂ ವಿಶ್ವವಿದ್ಯಾಲಯವು ಅತ್ಯುತ್ತಮವಾದಂತಹ ಕ್ಯಾಂಪಸ್ ಅನ್ನು ಹೊಂದಿದ್ದು, ಶೈಕ್ಷಣಿಕವಾಗಿ ಮತ್ತು ಕ್ರೀಡಾತ್ಮಕವಾಗಿ ಉತ್ತಮ ವಾತಾವರಣವನ್ನು ಒಳಗೊಂಡಿದೆ. ಅಂತರವಿವಿ ಮಟ್ಟದ ಕ್ರೀಡೆಯನ್ನು ಆಯೋಜಿಸಲು ಹೇಳು ಮಾಡಿಸಿದೆ. ಈ ರೀತಿಯ ವಾತಾವರಣವಿರುವ ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಅದೃಷ್ಟವಂತರು ಎಂದ ಅವರು, ಜಿಎಂ ಲೀಗ್ ಮುಖೇನ ನಮ್ಮ ವಿವಿಯ 25 ಮಂದಿ ಅಧ್ಯಾಪಕರು, ಮುಖ್ಯಸ್ಥರು, ಡೀನ್ ಗಳು ತಂಡ ಕಟ್ಟಿ ಮುನ್ನಡೆಸುವ ಜಾಣ್ಮೆ, ನಾಯಕತ್ವ ಬೆಳವಣಿಗೆ, ಪಂದ್ಯ ಆಯೋಜನೆ ಸೇರಿದಂತೆ ಸಮಗ್ರ ಕ್ರೀಡಾ ಕೌಶಲ್ಯ ಬೆಳೆಯುವಂತಾಗಿದೆ. ಈ ರೀತಿ ಚಟುವಟಿಕೆಯಿಂದ ತಲೆಗೂ ಕೆಲಸ ಕೊಟ್ಟಂತಾಗಿ ಮೆದುಳು ಸಕ್ರಿಯವಾಗಲಿದೆ. ಸ್ಪರ್ಧೆಗಿಂತ ಕ್ರೀಡೆಯನ್ನು ಎಂಜಾಯ್ ಮಾಡಿ. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ವೈರತ್ವ ಬದಲಿಗೆ ಬ್ರಾತೃತ್ವ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್ ಆರ್ ಶಂಕಪ್ಪ ಅವರ ಚಿಂತನೆಯಂತೆ ಜಿಎಂ ಲೀಗ್ ಕ್ರೀಡಾ
ಪಂದ್ಯಾವಳಿ ಆಯೋಜಿಸಿ, ಅಧ್ಯಾಪಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಗಳು ಸೇರಿದಂತೆ 9 ತಂಡಗಳ ಕಟ್ಟಿ ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸಲಾಗುತ್ತಿದೆ. ಈ ಮುಖೇನ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಿ ಜಿಎಂ ಯೂನಿವರ್ಸಿಟಿ ತಂಡ ಅಥವಾ ಜಿಎಂ ಲೀಗ್ ತಂಡ ಕಟ್ಟಿ ಅಂತರ ವಿವಿ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಕ್ರೀಡೆಗಳಲ್ಲಿ ಭಾಗವಹಿಸಿ ತಂದೆ-ತಾಯಿ ಜೊತೆಗೆ ನಮ್ಮ ವಿವಿಗೆ ಹೆಸರು ತನ್ನಿ ಎಂದು ಶುಭ ಹಾರೈಸಿದರು.
ಜಿ.ಎಂ. ಲಿಂಗರಾಜು ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಶುಭ ಕೋರಿದರು.
11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಕೋ ಕೋ, ಥ್ರೋ ಬಾಲ್ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 9 ತಂಡಗಳಿದ್ದು, ಪ್ರತಿ ತಂಡದಲ್ಲಿ 20 ಆಟಗಾರರಿದ್ದಾರೆ. ವಾಲಿಬಾಲ್ ನಲ್ಲಿ ಒಟ್ಟು 8 ತಂಡಗಳಿದ್ದು, ಪ್ರತಿ ತಂಡದಲ್ಲಿ 10 ಆಟಗಾರರು ಇದ್ದಾರೆ. ಕೋ ಕೋ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದಲ್ಲಿ ತಲಾ ೪ ತಂಡಗಳಿದ್ದು, ಈ ಎರಡು ವಿಭಾಗಗಳ ಪ್ರತಿ ತಂಡಗಳಲ್ಲಿ 12 ಆಟಗಾರರು ಇದ್ದಾರೆ.
ಥ್ರೋಬಾಲ್ ನ ಮಹಿಳಾ ವಿಭಾಗದಲ್ಲಿ 6 ತಂಡಗಳಿದ್ದು, ಪ್ರತಿ ತಂಡದಲ್ಲೂ 8 ಆಟಗಾರರು ಇದ್ದಾರೆ. ಈ ಲೀಗ್ ನಲ್ಲಿ ಹೊರಗಿನ ಇತರೆ ಕಾಲೇಜುಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಹಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್., ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಕ್ಯಾನ್ಸರ್ ಹೋರಾಟಗಾರ ಆರ್.ಟಿ. ಅರುಣ್ ಕುಮಾರ್, ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ಸೇರಿದಂತೆ ಪ್ರಾಂಶುಪಾಲರು, ವಿವಿಧ ವಿಭಾಗಗಳ ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರುಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು, ಕ್ರೀಡಾ ಸಂಯೋಜಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.