SUDDIKSHANA KANNADA NEWS/ DAVANAGERE/DATE:21_09_2025
ದಾವಣಗರೆ: ದೇವಸ್ಥಾನ, ಹಬ್ಬಗಳಿಗೆ ದೇಣಿಗೆ ಕೇಳುವಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯಕ್ಕಾದರೂ ಈ ಕಾರ್ಯ ಮುತುವರ್ಜಿಯಿಂದ ಆಗಬೇಕಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಪ್ರತಿಪಾದಿಸಿದರು.
ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆರೆಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆಯ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ
ಭಾಗವಹಿಸಿ ಅವರು ಮಾತನಾಡಿದರು.
READ ALSO THIS STORY: ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮವೆಂದ್ರು ಎಸ್. ಮಧು ಬಂಗಾರಪ್ಪ
ಹಳ್ಳಿಗಳಲ್ಲಿ ಶುದ್ಧ ಗಾಳಿ, ಸಮೃದ್ಧವಾದ ಕೆರೆ ಹಾಗೂ ನೈರ್ಮಲ್ಯವೂ ಪರಿಶುದ್ಧವಾಗಿರಬೇಕು. ನಾವು ಅಷ್ಟೇ ಆದ್ಯತೆ ಶಿಕ್ಷಣಕ್ಕೂ ನೀಡಬೇಕಾಗಿದೆ. ಹಳ್ಳಿ ಎಂದ ಮೇಲೆ ಸುಸಜ್ಜಿತ ಗ್ರಂಥಾಲಯ ಇರಬೇಕು. ಎಷ್ಟೋ ಗ್ರಾಮಗಳಲ್ಲಿ ಲೈಬ್ರರಿ
ಇರುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾರೇ ಹಣ ಕೇಳಿದಾಗ ಕೈಯಲ್ಲಾದಷ್ಟು ಸಹಾಯವನ್ನು ಖಂಡಿತವಾಗಿಯೇ ಮಾಡಿಯೇ ಮಾಡುತ್ತೇನೆ. ಈ ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಸಾಧ್ಯವಾದಷ್ಟು ಸಹಾಯಕ್ಕೆ
ಸಿದ್ಧನಿದ್ದೇನೆ ಎಂದು ತಿಳಿಸಿದರು.
ಶಾಲೆಗಳಿಗೆ ಡೆಸ್ಕ್, ಗ್ರಂಥಾಲಯಕ್ಕೆ ಪುಸ್ತಕ ಕೊಡಿಸುವುದು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಸಹಾಯ ಮಾಡಿದ್ದೇನೆ. ಹಳ್ಳಿಗಳು ಅಭಿವೃದ್ಧಿ ಆಗಬೇಕು. ಯಾಕೆಂದರೆ ಮುಂದಿನ ಪೀಳಿಗೆ ಚೆನ್ನಾಗಿರಲಿ ಎಂದು ಪೋಷಕರು ಕನಸು ಕಂಡಿರುತ್ತಾರೆ. ಇದು ಸಾಧ್ಯವಾಗಬೇಕಾದರೆ ಬೇಕಾಗಿರುವುದು ಅತ್ಯುತ್ತಮ ಶಿಕ್ಷಣ. ಮುಂದೊಂದು ದಿನ ತಮ್ಮ ಮಕ್ಕಳು ಸರ್ಕಾರಿ ಉದ್ಯೋಗ, ವೈದ್ಯರು, ಎಂಜಿನಿಯರ್ ಆಗಬೇಕೆಂಬ ಕನಸು ಕಂಡ ಪೋಷಕರ ಕನಸು ನನಸು ಮಾಡಲು ಮಕ್ಕಳು ಚೆನ್ನಾಗಿ ಓದಿ ಉನ್ನತ ಹುದ್ದೆಗೆ ಹೋಗುವ ಮೂಲಕ ನನಸಾಗಿಸಬೇಕು ಎಂದು ಕರೆ ನೀಡಿದರು.
ಈ ಗ್ರಾಮದಲ್ಲಿ ಸಾಮರಸ್ಯ ನೋಡಿ ಖುಷಿಯಾಯಿತು. ಗೌಡರು, ಹರಿಜನ, ಸವಿತಾ, ಬೋವಿ, ಕಮ್ಮಾರ ಸೇರಿದಂತೆ ಎಲ್ಲಾ ಜಾತಿಯವರು ಮತ್ತು ಧರ್ಮದವರು ಪಾಲ್ಗೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಜಿ. ಬಿ. ವಿನಯ್ ಕುಮಾರ್
ಅವರು ಹೇಳಿದರು.
ಕೃಷಿ ಮತ್ತು ನೀರಾವರಿ, ಅಂತರ್ಜಲ ಪುನರ್ಬತಿ, ಪ್ರವಾಹ ನಿಯಂತ್ರಣ, ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಆರ್ಥಿಕ ಚಟುವಟಿಕೆಗಳ ಮೂಲವಾಗಿರುವ ಕೆರೆಗಳ ಉಳಿವು ಆಗಬೇಕು. ಈ ನೀರು ಸಂರಕ್ಷಿಸಬೇಕು. ಅನಾವಶ್ಯಕವಾಗಿ ನೀರು
ಪೋಲಾಗುವುದನ್ನು ತಪ್ಪಿಸಬೇಕು. ಯುವ ಸಮುದಾಯದ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದರು.
ಮಟ್ಟೂರು ಶ್ರೀ ಓಂಕಾರೇಶ್ವರ ಮಠದ ಶ್ರೀ ಷ|| ಬ್ರ|| ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮವನ್ನು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಗಳೂರು ತಾಲೂಕು ಘಟಕದ ಎನ್. ಸಿ. ಅಜ್ಜಯ್ಯ ನಾಡಿಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರ, ಹೆಚ್.ಪಿ. ರಾಜೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಪಿ. ಪಾಲಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಬರ್ಕತ್ ಅಲಿ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಮಹಾಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದ್ರಾ ರಾಮಚಂದ್ರಪ್ಪ ಹಾಜರಿದ್ದರು. ನಿರಂಜನ ಭರಮಸಮುದ್ರ ನಿರೂಪಿಸಿದರು.