SUDDIKSHANA KANNADA NEWS/ DAVANAGERE/ DATE:04-06-2024
ದಾವಣಗೆರೆ: 42 ಸಾವಿರಕ್ಕೂ ಹೆಚ್ಚು ಜನರು ಮತ ಚಲಾಯಿಸಿದ್ದು, ಅವರಿಗೆ ಧನ್ಯವಾದಗಳು. ಅನೇಕ ಆಮೀಷ, ಒತ್ತಡ, ಬೆದರಿಕೆ ಇದ್ದರೂ ಸಹ ಮತಗಟ್ಟೆಗೆ ತೆರಳಿ ನನಗೆ ಮತ ಚಲಾಯಿಸಿ ನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನನಗೆ ಒಂದೂವರೆಯಿಂದ ಎರಡು ಲಕ್ಷ ಮತಗಳು ಬರಬಹುದು ಎಂಬ ನಿರೀಕ್ಷೆ ಇತ್ತು. ಈ ಚುನಾವಣೆಯಲ್ಲಿ ಒಂದೂ ರೂಪಾಯಿ ಹಂಚಿಲ್ಲ. ದುಡ್ಡು ತೆಗೆದುಕೊಳ್ಳದೇ ಇಷ್ಟೊಂದು ಪ್ರಮಾಣದಲ್ಲಿ ಮತ ನೀಡಿದ್ದಾರೆ. ರಾಜಕಾರಣದಲ್ಲಿ ಮುಂದುವರಿಯಲು ಪ್ರೇರಣೆ ನೀಡಿದ್ದಾರೆ. ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುತ್ತೇನೆ. ನಿಮ್ಮ ಜೊತೆಗೆ ನಾನು ಇರುತ್ತೇನೆ. ಕಾರ್ಯಕ್ರಮಗಳು, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.
1946 ಬೂತ್ ಗಳ ಪೈಕಿ 150 ಬೂತ್ ಹೊರತುಪಡಿಸಿದರೆ ಮತಗಳು ಬಂದಿವೆ. ಒಳ್ಳೆಯ ಬದಲಾವಣೆ ಎಂದು ಭಾವಿಸುತ್ತೇನೆ. ಹೊನ್ನಾಳಿ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಹೆಚ್ಚಿನ ಮತಗಳು ಬಂದಿವೆ ಎಂದು ಹೇಳಿದರು.
ಹನ್ನೊಂದು ತಿಂಗಳ ಹಿಂದೆ ರಾಜಕೀಯ ಶುರು ಮಾಡಿದೆ. ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇನೆ. ದುಡ್ಡು, ಆಮೀಷಕ್ಕೆ ಬಲಿಯಾಗಿ ಎರಡು ಲಕ್ಷಗಳು ಬರಬೇಕಿತ್ತಾದರೂ ಬಂದಿಲ್ಲ. ಇದಕ್ಕೆ ನನಗೆ ಬೇಸರ ಇಲ್ಲ. ರಾತ್ರಿ- ಹಗಲು ಪದ್ಧತಿ ಚುನಾವಣೆಯಿಂದ ಹೋಗಬೇಕು. ಮುಂದೆ ಬರುವ ನಾಲ್ಕು ವರ್ಷದಲ್ಲಿ ಇದು ತಕ್ಕ ಮಟ್ಟಿಗೆ ಸಾಧ್ಯವಾಗುತ್ತದೆ ಎಂದುಕೊಂಡಿದ್ದೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಶುಭಾಶಯ ಹೇಳುತ್ತೇನೆ. ಗೆಲುವಿಗೆ ಶ್ರಮಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೂ ಅಭಿನಂದನೆ ಹೇಳುತ್ತೇನೆ. ಒಳ್ಳೆಯ ರಾಜಕಾರಣ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದಾರೆ. ನನ್ನ ಜೊತೆ ಗುರುತಿಸಿಕೊಂಡವರಿಗೆ ಗೌರವ ಕೊಡಿ, ಅವರ ಕೆಲಸಗಳನ್ನು ಮಾಡಿಕೊಡಿ ಎಂದು ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ರಾಜಕಾರಣದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಎಂಬ ಮನೋಭಾವನೆಯಿಂದ ನನ್ನ ಜೊತೆಗೆ ಬಂದಿದ್ದರು. ಹೊಸ ಯುವಕ ಬೆಳೆಯಲಿ ಎಂದುಕೊಂಡು ಬಂದಿದ್ದು, ನಿಮ್ಮ ಸಹಕಾರ ಎಂದೆಂದಿಗೂ ಇರಲಿ ಎಂದರು.