SUDDIKSHANA KANNADA NEWS/ DAVANAGERE/ DATE:07-07-2023
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ 20 ವರ್ಷ ಆದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡ ಡಾ. ಜಿ. ಎಂ. ಸಿದ್ದೇಶ್ವರ (G. M. Siddeshwara) ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗೆ ದಾವಣಗೆರೆ ಆಯ್ಕೆಯಾಗಲು ಕಾರಣ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಕೇವಲ ಜಾಹೀರಾತು ಕೊಟ್ಟು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನೆಲ್ಲಾ ತಾನೇ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡದ್ದು ಯಾವ ಪುರುಷಾರ್ಥಕ್ಕೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್ ಪ್ರಶ್ನಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಗೆ ದಾವಣಗೆರೆ ಆಯ್ಕೆಯಾಗಲು ಪ್ರಮುಖ ಕಾರಣ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು. 2018ರ ಮುಂಚೆ ಈ ಯೋಜನೆಗೆ ದಾವಣಗೆರೆ ಆಯ್ಕೆಯಾಗಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್. ನಾಯಕರ ಸತತ ಪರಿಶ್ರಮ, ಸೂಕ್ತ ವರದಿ, ಯಾಕೆ ಆಯ್ಕೆಯಾಗಬೇಕೆಂಬ ಬಗ್ಗೆ ಸಕಾರಣ ಕೊಟ್ಟ ಕಾರಣ ಆಯ್ಕೆಯಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ ಸಿಟಿಗೆ ಕೇವಲ ದಾವಣಗೆರೆ ಮಾತ್ರವಲ್ಲ ಕೆಲವು ಜಿಲ್ಲೆಗಳು ಆಯ್ಕೆಯಾಗಿದ್ದವು. ಹಾಗೆಂದ ಮಾತ್ರಕ್ಕೆ ಅಲ್ಲಿರುವ ಸಂಸದರೆಲ್ಲರೂ ಈ ಕೆಲಸ ಇಟ್ಟುಕೊಂಡು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆಯೇ. ಸಿದ್ದೇಶ್ವರ ಅವರು ದಾವಣಗೆರೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ, ಇತ್ತ ತಿರುಗಿ ನೋಡುವಂಥ ಯಾವ ಯೋಜನೆ ರೂಪಿಸಿದ್ದಾರೆ ಎಂದು ಬಹಿರಂಗಡಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:
Santhebennur Pushkarini: ಪುಷ್ಕರಣೆಯ ಸೊಬಗು ನೋಡಿ ಬನ್ನಿ: ಪಿಯು, ಡಿಗ್ರಿ ಕಾಲೇಜು ಹುಡುಗಿಯರು ಹೆಚ್ಚಾಗಿ ಬರಲು ಕಾರಣವೇನು ಗೊತ್ತಾ…?
ದಾವಣಗೆರೆಯಲ್ಲಿ ಹಳೆಯ ಖಾಸಗಿ ನಿಲ್ದಾಣ, ಅಶೋಕ್ ಗೇಟ್ ಹತ್ತಿರುವ ಮಾಡಿರುವ ಕಾಮಗಾರಿ ನೋಡಿದರೆ ಗೊತ್ತಾಗುತ್ತದೆ ಸಂಸದ ಜಿ. ಎಂ. ಸಿದ್ದೇಶ್ವರರ ದೂರದೃಷ್ಟಿತ್ವ. ಬಸ್ ನಿಲ್ದಾಣದಲ್ಲಿ ಬಸ್ ಗಳ ನಿಲುಗಡೆಗೆ ಜಾಗವಿಲ್ಲದ ರೀತಿಯಲ್ಲಿ ಕಾಂಪ್ಲೆಕ್ಸ್ ಮುಂದೆ ವಾಹನಗಳ ಪಾರ್ಕ್ ಜಾಗ ಮಾಡಲು ಇರುವಂತೆ ನಿರ್ಮಾಣ ಮಾಡಲಾಗಿದೆ. ಇನ್ನು ರೈಲ್ವೆ ಗೇಟ್ ಬಳಿ ಮಾಡಿರುವ ಕಾಮಗಾರಿಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕುಂದುವಾಡ ಕೆರೆ ಹೂಳೆತ್ತಲು 15 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿರುವುದಷ್ಟೇ ಹೆಗ್ಗಳಿಕೆ. ಕಾಮಗಾರಿಯೂ ಸರಿಯಾಗಿಲ್ಲ. ಕೇವಲ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕೆರೆಯ ಹೂಳೆತ್ತುವುದಕ್ಕೆ ಇಷ್ಟೊಂದು
ಹಣ ಬೇಕಿತ್ತಾ ಎಂಬುದು ಸಾರ್ವಜನಿಕರ ಪ್ರಶ್ನೆ. ಇಷ್ಟೊಂದು ಹಣ ವ್ಯಯಿಸಿದ್ದರೂ ಕಾಮಗಾರಿಯೂ ಸರಿಯಾಗಿಲ್ಲ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪಾರದರ್ಶಕತೆಗೆ ಬಗ್ಗೆ
ಅನುಮಾನ ವ್ಯಕ್ತಪಡಿಸಿದ್ದರು. ಹಣ ಲೂಟಿ ಹೊಡೆಯಲು ಮಾಡಿದ ಯೋಜನೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಸಂಸದರು ಬೇರೆ ಯಾರೋ ಮಾಡಿದ ಕೆಲಸಕ್ಕೆ ತಮ್ಮ ಹೆಸರು ಹಾಕಿಕೊಂಡು ಜಾಹೀರಾತು ಕೊಟ್ಟರೆ ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲಾ ಜಿಲ್ಲೆಗಳಿಗೂ ತಲುಪಿವೆ. ಕೇವಲ ದಾವಣಗೆರೆಗೆ ಮಾತ್ರ ಬಂದಿಲ್ಲ. ಸಿದ್ದೇಶ್ವರ ಅವರು ಸ್ವಂತ ಪರಿಶ್ರಮ, ವೈಯಕ್ತಿಕ ವರ್ಚಸ್ಸಿನಿಂದ ತಂದಿರುವ ಯೋಜನೆಗಳು ಯಾವುವು? ಎಷ್ಟರ ಮಟ್ಟಿಗೆ ಕಾರ್ಯ ರೂಪಕ್ಕೆ ಬಂದಿವೆ ಎಂಬುದನ್ನು ಸ್ಪಷ್ಟಪಡಿಸಲಿ. ಹೆದ್ದಾರಿ ಅಭಿವೃದ್ಧಿಯಾಗಿದೆ ಎನ್ನುತ್ತಾರೆ. ದಾವಣಗೆರೆ ಮೂಲಕ ಹಾದುಹೋಗುವ ಹೆದ್ದಾರಿ ಆಗಿದ್ದರೂ ಸರ್ವೀಸ್ ರಸ್ತೆಯ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಎಲ್ಲಾ ಅರ್ಧಂಬರ್ಧ ಕೆಲಸ ಮಾಡಿ ಎಲ್ಲಾ ಕೆಲಸವನ್ನೂ ನಾನೇ ಮಾಡಿದೆ ಎಂದುಹೇಳಿಕೊಳ್ಳುತ್ತಿರುವುದನ್ನು ನೋಡಿದರೆ 20 ವರ್ಷದ ವೈಫಲ್ಯ ಮರೆಮಾಚಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ತಂದೆಯವರ ಅನುಕಂಪ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಗೆದ್ದು ಬಂದಿರುವ ಸಿದ್ದೇಶ್ವರ ಅವರು, ತಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗಿಂತ, ಕೇಂದ್ರ ಸರ್ಕಾರವು ದೇಶದ ಎಲ್ಲಾ ಜಿಲ್ಲೆಗಳಿಗೆ ನೀಡುವ ಯೋಜನೆಗಳನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದ್ರೆ, ಈ ಬಾರಿ ಯಾವ ಅಲೆಯೂ ಕೆಲಸ ಮಾಡಲ್ಲ ಎಂದರಿತು, ಸುಳ್ಳು ಹೇಳಿ, ಜನರನ್ನು ದಾರಿ ತಪ್ಪಿಸಿ ಮತ್ತೆ ಗೆಲ್ಲಬೇಕೆಂಬ ದೃಷ್ಟಿಯಲ್ಲಿ ಮಾತನಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗಡಿಗುಡಾಳ್ ಮಂಜುನಾಥ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಯ ಸಂಸದರು ತಾವು ಮಾಡಿದ ಕೆಲಸ ಹೇಳಿಕೊಂಡರೆ, ಸಿದ್ದೇಶ್ವರ ಮಾತ್ರ ಬೇರೆ ಯಾರೋ ಮಾಡಿದ ಕೆಲಸದ ಪ್ರಚಾರ ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಕೈಗಾರಿಕೆಗಳು, ಮೂಲಭೂತ ಸೌಲಭ್ಯ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಬಿಜೆಪಿ ಸಂಸದರು ಮಾಡಿದ್ದರೂ, ಸ್ಮಾರ್ಟ್ ಸಿಟಿ ಕೆಲಸಗಳ ಪ್ರಚಾರ ಪಡೆದುಕೊಂಡಿಲ್ಲ. ಸಿದ್ದೇಶ್ವರ ಅವರು ಕೇವಲ ಬಾಯಿಯಲ್ಲಿ ಹೇಳಿದ್ದು ಬಿಟ್ಟರೆ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಮುಂದಾದರೂ ಇಂಥ ಪ್ರಚಾರದ ಗಿಮಿಕ್ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.