SUDDIKSHANA KANNADA NEWS/ DAVANAGERE/DATE:03_09_2025
ದಾವಣಗೆರೆ: ಶಾಮನೂರು ಶಿವಶಂಕರಪ್ಪರ ಕುಟುಂಬದ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಹಗುರವಾಗಿ ಮಾತನಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಪಕ್ಷಗಳಿಂದ ಪಕ್ಷಕ್ಕೆ ಜಿಗಿಯುತ್ತಾ ಪಕ್ಷಾಂತರಿ ಎಂಬ ಕುಖ್ಯಾತಿ ಹೊಂದಿರುವ ಹರೀಶ್ ಮೊದಲು ತಾನೊಬ್ಬ ಜನಪ್ರತಿನಿಧಿ ಎಂದರಿತು ಮಾತನಾಡಲಿ. ಬಾಯಿ ಚಪಲಕ್ಕೆ ಏನೇನೋ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಗಡಿಗುಡಾಳ್ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
READ ALSO THIS STORY: ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!
ದಾವಣಗೆರೆಯಲ್ಲಿ ಶಾಂತಿ ನೆಲೆಸಲು ಎಲ್ಲಾ ರೀತಿಯಲ್ಲಿಯೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕ್ರಮ ಕೈಗೊಂಡಿದ್ದಾರೆ. ಎಸ್ಪಿ ಉಮಾ ಪ್ರಶಾಂತ್ ಅವರೂ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗಲಾಟೆ ಆದ ಬಳಿಕ ರಾಜಕೀಯ
ಬೇಳೆ ಬೇಯಿಸಿಕೊಳ್ಳಲು ಬರುವ ಬಿ. ಪಿ. ಹರೀಶ್ ಎರಡು ಕೋಮಿನವರು ಸಾಮರಸ್ಯ ಜೀವನ ನಡೆಸುವುದು ಬೇಡ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಎಸ್ಪಿ ಕುರಿತಾಗಿ ಅವಹೇಳನ ಮತ್ತು ಕೇವಲವಾಗಿ ಮಾತನಾಡಿದ್ದು, ಜನಪ್ರತಿನಿಧಿಯಾಗಿ ಯಾವ ರೀತಿ ಮಾತನಾಡಬೇಕೆಂಬ ಅರಿವೇ ಇಲ್ಲದಂತ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಅಥವಾ ಹಿಂದೂಗಳಾಗಲೀ ಶಾಂತಿ ಕದಡಿದರೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದರಲ್ಲಿ ತಪ್ಪೇನಿದೆ? ಗಣೇಶೋತ್ಸವ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಲು ಸಂಚು ರೂಪಿಸುವಂತೆ ಹರೀಶ್ ಮಾತನಾಡಿರುವುದು
ಸ್ಪಷ್ಟವಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಕುರಿತಾಗಿ ಆಡಿರುವ ಮಾತುಗಳು ಶಾಸಕ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ. ಇದೇ ರೀತಿಯ ಧೋರಣೆ ಮುಂದುವರಿಸಿದರೆ ನಾವು ಸೂಕ್ತ ರೀತಿಯಲ್ಲಿ
ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಎಂಐಟಿಯಲ್ಲಿ ಸಭೆ ನಡೆಸಿರುವುದನ್ನೇ ಮರೆತಿದ್ದಾರೆ. ಜಿಲ್ಲಾಡಳಿತ ಬಿಟ್ಟು ಜಿಎಂಐಟಿಯಲ್ಲಿ ಸಭೆ ನಡೆಸಿಲ್ಲವಾ? ಸಿಎಂ, ಸಚಿವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಅಧಿಕಾರಿಗಳು ಇರುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅಧಿಕಾರಿಗಳನ್ನು ಕೂರಿಸಿಕೊಂಡು ರಾಜಕೀಯ ಮಾತನಾಡಿದ್ದನ್ನು ಮರೆತಿರುವ ಬಿ. ಪಿ. ಹರೀಶ್ ಆಗ ಯಾಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ರಾಜಕೀಯ ಬಂದಾಗ ಅಧಿಕಾರಿಗಳು ಎದ್ದು ಹೋಗಿ ಜಿಲ್ಲೆಯ ಅಭಿವೃದ್ಧಿ ವಿಚಾರ ಕೇಳಿದರೆ ಪದೇ ಪದೇ ಹೋಗಿ ಬರಲು ಆಗುತ್ತದೆಯಾ? ಇಷ್ಟು ಸಾಮಾನ್ಯ ಜ್ಞಾನ ಬಿಜೆಪಿ ಶಾಸಕರಿಗೆ ಇಲ್ಲದಿರುವುದು ದುರಂತವೇ ಸರಿ ಎಂದು ಗಡಿಗುಡಾಳ್ ಮಂಜುನಾಥ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.