SUDDIKSHANA KANNADA NEWS/ DAVANAGERE/ DATE:12-09-2023
ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿಯು ಈಗ ಒಡೆದ ಮನೆಯಂತಾಗಿದೆ. ಅದರಲ್ಲಿಯೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ಹೇಳಿಕೆಗಳು, ಇಡುತ್ತಿರುವ ನಡೆ ಬಿಜೆಪಿಗೆ ತುಂಬಾನೇ ಇರಿಸು ಮುರಿಸು ತಂದಿದೆ. ಈ ಬೆಳವಣಿಗೆ ನಡುವೆಯೇ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ (G. M. Siddeshwara) ಅವರು 2 ತಿಂಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ:
M. P. Renukacharya: ಎಂ. ಪಿ. ರೇಣುಕಾಚಾರ್ಯ ಉರುಳಿಸುತ್ತಿದ್ದಾರೆ ದಾಳ… ದಾವಣಗೆರೆ ಬಿಜೆಪಿಯಲ್ಲಿ ಶುರುವಾಗಿದೆ ತಳಮಳ… ಬಂಡಾಯದ ಬೇಗೆಯಲ್ಲಿ ಬೇಯುತಿದೆ ಬಿಜೆಪಿ…!
ಅಮರ್ ಜವಾನ್ ಉದ್ಯಾನದಲ್ಲಿ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎರಡರಿಂದ ಮೂರು ತಿಂಗಳ ಕಾಲ ಯಾವ ವಿಚಾರದ ಬಗ್ಗೆಯೂ ಮಾತನಾಡುವುದಿಲ್ಲ. ಮೌನವಾಗಿರುತ್ತೇನೆ. ಸಮಯ ಬಂದೇ ಬರುತ್ತದೆ. ಆಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ನಾನು ನಾಲ್ಕು ಬಾರಿ ಸಂಸದನಾಗಿದ್ದೇನೆ. ಜಿಲ್ಲೆಯ ಜನತೆ ಗೆಲ್ಲಿಸಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವ ಶಕ್ತಿ ನನ್ನಲ್ಲಿದೆ. ಯಡಿಯೂರಪ್ಪ ಅವರು ಹೇಳಿರುವ ಕಾರಣದಿಂದ ಏನನ್ನೂ ಮಾತನಾಡುತ್ತಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಆರೂವರೆ ತಿಂಗಳು ಇದೆ. ಈಗಲೇ ಏನನ್ನೂ ಮಾತನಾಡಲು ಹೋಗುವುದಿಲ್ಲ ಎಂದು ಜಿ. ಎಂ. ಸಿದ್ದೇಶ್ವರ (G. M. Siddeshwara) ಹೇಳಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡುತ್ತೇನೆ. ರಾಜಕಾರಣ, ಸ್ವಪಕ್ಷದವರ ವಿರುದ್ಧ ಎಂ. ಪಿ. ರೇಣುಕಾಚಾರ್ಯರ ಟೀಕೆ ಕುರಿತಂತೆ ಯಾವುದೇ ಉತ್ತರ ನೀಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಇನ್ನು ಮೂರು ತಿಂಗಳ ಕಾಲ ಯಾವ ವಿಚಾರದ ಬಗ್ಗೆಯೂ ಹೇಳಿಕೆ ನೀಡಬೇಡಿ ಎಂಬ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಕಾರ್ಯಕ್ರಮದ ವಿಚಾರ ಬಿಟ್ಟು ಬೇರೆ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.