SUDDIKSHANA KANNADA NEWS/ DAVANAGERE/ DATE:28-08-2023
ದಾವಣಗೆರೆ: ಅವ್ರೇನೋ ಹೇಳ್ತಾರೆ, ನಾನೇನೋ ಹೇಳ್ತೀನಿ. ನೀವೇನೋ ಮಾಡ್ತೀರಾ. ಸುಮ್ನೇ ತಿಕ್ಕಾಟ ಆಗಿಬಿಡುತ್ತೆ. ಹಾಗಾಗಿ, ನಾನು ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ. ದಯವಿಟ್ಟು ಬೇರೆಯವರಿಗೆ ಸಂಬಂಧಿಸಿದ ಪ್ರಶ್ನೆ ಕೇಳಬೇಡಿ ಎಂದು ಸಂಸದ ಜಿ. ಎಂ. ಸಿದ್ದೇಶ್ವರ (G. M. Siddeshwara) ಮನವಿ ಮಾಡಿದರು.
ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.
ಮಲ್ಲಿಕಾರ್ಜುನ್ ರ ಕುರಿತಂತೆ ನನ್ನ ಬಳಿ ಕೇಳುತ್ತೀರಾ. ನಾನು ಹೇಳಿದ್ದನ್ನು ಅವರ ಬಳಿ ಕೇಳುತ್ತೀರಾ. ಅವ್ರೇನೋ ಹೇಳುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಅದೇನೋ ಆಗುತ್ತೆ. ಸುಖಾಸುಮ್ಮನೆ ವಿವಾದ ಬೇಡ ಎಂದು
ಹೇಳಿದರು.
Read Also This Story:
M. P. Renukacharya: ಎಲ್ಲೋ ಕುಳಿತು ರಾಜ್ಯ ಬಿಜೆಪಿ ಕಂಟ್ರೋಲ್ ಮಾಡಿದ್ರೆ ಲೋಕಸಭೆಯಲ್ಲಿ ಗೆಲ್ಲೋದು ಕಷ್ಟ: ಸ್ವಪಕ್ಷೀಯರ ವಿರುದ್ಧ ಮತ್ತೆ ಬೆಂಕಿಯುಗುಳಿದ ರೇಣುಕಾಚಾರ್ಯ…!
ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಅವರದ್ದು. ನಮ್ಮ ಪಕ್ಷದ ತತ್ವ, ಸಿದ್ಧಾಂತ ನಮ್ಮದು. ರಾಜಕೀಯವಾಗಿ ಹೋರಾಡುತ್ತೇನೆ. ಯಾರಿಗೆ ಜನರು ಮತ ನೀಡುತ್ತಾರೋ ಅವರು ಗೆಲ್ಲುತ್ತಾರೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್.
ಮಲ್ಲಿಕಾರ್ಜುನ್ ಅವರು ನನ್ನ ಬಗ್ಗೆ ಹೇಳಿದರು ಎಂದು ನೀವು ಪ್ರಶ್ನೆ ಕೇಳೋದು. ನಾನು ಅದಕ್ಕೇನೋ ಹೇಳೋದು. ಮತ್ತೆ ನೀವು ಅವರಿಗೆ ಪ್ರಶ್ನೆ ಹಾಕೋದು. ಅದು ಇನ್ನೋನೋ ಆಗುವುದು ಬೇಡ. ನಾನು ಯಾರ ಬಗ್ಗೆಯೂ ಮಾತನಾಡಲು
ಹೋಗುವುದಿಲ್ಲ. ಮಾಧ್ಯಮದವರು ಕೆದಕಿ ಕೆದಕಿ ಪ್ರಶ್ನೆ ಕೇಳಿ ಸಮಸ್ಯೆ ತಂದೊಡ್ಡುವುದು ಬೇಡ ಎಂದರು.
ಎಸ್ ಎಸ್ಎಂ- ಎಸ್ಎಆರ್ ಉತ್ತಮ ಸ್ನೇಹಿತರು:
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ, ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಎಲ್ಲವನ್ನೂ ಮಾಡಿದ್ದು ಶಾಸಕರು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಸ್. ಎ. ರವೀಂದ್ರನಾಥ್ ಹಾಗೂ ಮಲ್ಲಿಕಾರ್ಜುನ್
ಉತ್ತಮ ಸ್ನೇಹಿತರು. ಕುಂದುವಾಡ ಕೆರೆ ಅಭಿವೃದ್ಧಿಪಡಿಸಿದ್ದು ರವೀಂದ್ರನಾಥ್ ಅವರು ಶಾಸಕರಾಗಿದ್ದಾಗ. ಅವರನ್ನೇ ಕೇಳಲಿ. ಸಂಸದರು ಈ ಕೆಲಸ ಮಾಡುವುದಿಲ್ಲ. ನನ್ನ ವ್ಯಾಪ್ತಿಯಲ್ಲಿ ಬರುವಷ್ಟೇ ಕೆಲಸ ಮಾಡುತ್ತೇನೆ. ದಾವಣಗೆರೆ ಉತ್ತರದಲ್ಲಿ ಎಸ್. ಎ. ರವೀಂದ್ರನಾಥ್, ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪರು ಶಾಸಕರಾಗಿದ್ದರು. ಆಶ್ರಯ ನಿವೇಶನ ಹಂಚಿಕೆ ಕುರಿತಂತೆ ಅವರನ್ನೇ ಕೇಳಬೇಕು. ಯಾಕೆಂದರೆ ಆಶ್ರಯ ಸಮಿತಿ ಅಧ್ಯಕ್ಷರು ಅವರೇ ಆಗಿರುತ್ತಾರೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ ಸೇರಿದಂತೆ ಯೋಜನೆಗಳ ವಿಚಾರ ಬಂದಾಗ ಅವರಿಗೆ ಬರುತ್ತೆ. ಉಸ್ತುವಾರಿಯೂ ಅವರದ್ದೇ ಇರುತ್ತೆ. ಲೋಕಸಭಾ ಸದಸ್ಯನಾಗಿ ನನ್ನ ವ್ಯಾಪ್ತಿಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು, ಯೋಜನೆ ಬಗ್ಗೆ ಕೇಳಿದರೆ ಉತ್ತರ
ಕೊಡುತ್ತೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನನ್ನು ದಯವಿಟ್ಟು ಪ್ರಶ್ನೆ ಕೇಳಬೇಡಿ ಎಂದರು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಗುರುತಿಸಿ ಘೋಷಿಸಿದ ಬಳಿಕ ಕೇಂದ್ರದ ಎನ್ ಡಿ ಎಫ್ ಈ ಬಗ್ಗೆ ಪರಿಶೀಲಿಸುತ್ತದೆ. ಆ ನಂತರ ನೆರವು ನೀಡುತ್ತದೆ. ಮೊದಲು ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು
ಸಿದ್ದೇಶ್ವರ ತಿಳಿಸಿದರು.
ಬಿಎಸ್ ವೈ ಸೈಡ್ಲೈನ್ ಮಾಡಿಲ್ಲ:
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿಯ ರಾಷ್ಟ್ರ ಕಾರ್ಯಕಾರಿಣಿ ಸದಸ್ಯರಿದ್ದಾರೆ. ಅವರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಟಿಕೆಟ್ ನೀಡುವ ಸಮಿತಿಯಲ್ಲಿದ್ದಾರೆ ಎಂದರೆ ಅವರನ್ನು ಕಡೆಗಣಿಸಿದ
ರೀತಿನಾ? ಆ ರೀತಿ ಏನೂ ಇಲ್ಲ. ಅವರ ಮಾರ್ಗದರ್ಶನ ಈಗಲೂ ಇದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಲ್ಲ, ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಉಪಮೇಯರ್ ಯಶೋಧಾ, ಜಿಲ್ಲಾ ಬಿಜೆಪಿ ವಕ್ತಾರ ಶಿವಶಂಕರ್, ಮಾಧ್ಯಮ ಪ್ರಮುಖ್ ವಿಶ್ವಾಸ್, ಮಂಜಾ ನಾಯ್ಕ್ ಮತ್ತಿತರರು ಹಾಜರಿದ್ದರು.