SUDDIKSHANA KANNADA NEWS/ DAVANAGERE/ DATE:28-08-2023
ದಾವಣಗೆರೆ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಬಿಜೆಪಿಯ ಅಭ್ಯರ್ಥಿ ನಾನೇ. ನನಗೆ ಟಿಕೆಟ್ ನೀಡುವ ವಿಶ್ವಾಸ ಇದೆ. ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಂಸದ ಜಿ. ಎಂ. ಸಿದ್ದೇಶ್ವರ (G. M. Siddeshwara) ಹೇಳಿದರು.
ಜಿಎಂಐಟಿ ವಸತಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಹೇಳಿಕೆ ಕುರಿತಂತೆ ನನ್ನನ್ನು ಏನೂ ಕೇಳಬೇಡಿ. ಅವರ ಅಭಿಪ್ರಾಯ ಹೇಳಿರುತ್ತಾರೆ. ನಾನೇನೋ ಹೇಳುವುದು, ನೀವು ಇನ್ನೇನೋ ಮಾಡುವುದು ಬೇಡ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಎಲ್ಲರ ಜೊತೆ ಚೆನ್ನಾಗಿದ್ದೇನೆ. ವಿನಾಕಾರಣ ತಿಕ್ಕಾಟ ತಂದಿಡಬೇಡಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು.
ಗೆದ್ದವನು ಸೋಲ್ತಾನೆ, ಸೋತವನು ಗೆಲ್ತಾನೆ. ನಾಲ್ಕು ಬಾರಿ ಸಂಸದನಾಗಿ ಆಯ್ಕೆಯಾಗಿದ್ದಾನೆ. ಜನಸೇವೆ ಮಾಡಿದ್ದೇನೆ. ಮುಂದಿನ ಬಾರಿಯೂ ಜನರು ಆಶೀರ್ವಾದ ಮಾಡಿದರೆ ಜನಸೇವೆ ಮಾಡುತ್ತೇನೆ. ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕೆ ತಯಾರಿ ನಡೆಯುತ್ತಿದೆ. ಎಲ್ಲಾ ಕಡೆ ಓಡಾಡುತ್ತಿದ್ದೇನೆ. ನಾನು ಹೊಂದಾಣಿಕೆ ಹಾಗೂ ಸಾಫ್ಟ್ ರಾಜಕಾರಣ ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere ಲೋಕಸಭೆಗೆ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಆಲೋಚನೆ ಇಲ್ಲ, ಚರ್ಚೆಯೂ ನಡೆದಿಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವವರು ಆಗಲಿ. ಪಕ್ಷ ಬಿಟ್ಟು ಹೋಗುವವರನ್ನು ಮನವೊಲಿಸುವ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಎಲ್ಲಾ ರೀತಿಯ ಅವಕಾಶಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು ಸೋತಿರಬಹುದು. ಸೋತವನು ಗೆಲ್ಲುತ್ತಾನೆ, ಗೆದ್ದವನು ಸೋಲುತ್ತಾನೆ ಎಂಬ ಮಾತು ಸಹಜ. ಚುನಾವಣೆ ಎಂದ ಮೇಲೆ ಸೋಲು ಗೆಲುವ ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಎಸ್ಎಸ್ಎಂ- ಎಂಪಿಆರ್ ಭೇಟಿಗೆ ವಿಶೇಷ ಅರ್ಥ ಬೇಡ:
ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕು ಬರಪೀಡಿತ ಘೋಷಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ರೇಣುಕಾಚಾರ್ಯ ಭೇಟಿ ಮಾಡಿದ್ದಾರೆ.
ಇದಕ್ಕೆ ವಿಶೇಷ ಅರ್ಥ ಬೇಡ. ಯಡಿಯೂರಪ್ಪ ಅವರ ಅತ್ಯಾಪ್ತರಾಗಿದ್ದವರು ರೇಣುಕಾಚಾರ್ಯ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಅವರು. ಎಲ್ಲರಿಗೂ ಗೊತ್ತು. ರೇಣುಕಾಚಾರ್ಯರ ಎಲ್ಲಾ ಆರೋಪಕ್ಕೆ ಉತ್ತರ ಕೊಡಲು ಆಗದು. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದವರು. ಸಿದ್ದೇಶ್ವರ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರೇ ಹೇಳಿದ್ದಾರೆ. ನಾಯಕರು ಹೇಳಿದ ಮೇಲೆ ಮುಗಿಯಿತು ಎಂಬುದು ನಮ್ಮ ಭಾವನೆ. ರಾಜ್ಯದ ನಾಯಕರು ಯಾರ್ಯಾರು ಏನು ಹೇಳುತ್ತಾರೆ ಎಂಬುದನ್ನು ಗಮನಿಸುತ್ತಾರೆ. ಅವರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ವೀರೇಶ್ ಹನಗವಾಡಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಚರ್ಚೆಯಾಗಿಲ್ಲ, ಚನ್ನಗಿರಿ ಶಾಸಕರ ಅಸಮಾಧಾನ ಇಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಲ್ಲ, ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಉಪಮೇಯರ್ ಯಶೋಧಾ, ಜಿಲ್ಲಾ ಬಿಜೆಪಿ ವಕ್ತಾರ ಶಿವಶಂಕರ್, ಮಾಧ್ಯಮ ಪ್ರಮುಖ್ ವಿಶ್ವಾಸ್, ಮಂಜಾ ನಾಯ್ಕ್ ಮತ್ತಿತರರು ಹಾಜರಿದ್ದರು.