SUDDIKSHANA KANNADA NEWS/DAVANAGERE/DATE:28_10_2025
ದಾವಣಗೆರೆ: ಭಾರತ ದೇಶದಲ್ಲಿ ಯಾರೂ ಕರೆದು ನಮಗೆ ಅವಕಾಶ ಕೊಡುವುದಿಲ್ಲ. ಜ್ಞಾನ ಬೆಳೆಸಿಕೊಳ್ಳುವ ಮೂಲಕ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಕರೆ ನೀಡಿದರು.
ನಗರದ ಶ್ರೀಶೈಲ ಶಿಕ್ಷಣ ಟ್ರಸ್ಟ್, ಜಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿನ ಜಿ.ಎಂ. ಅಲ್ಲಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲವನ್ನೂ ವಿಶ್ವವಿದ್ಯಾಲಯ, ಕಾಲೇಜುಗಳಿಂದ ಮಾತ್ರ ಹೇಳಿಕೊಡಲು ಸಾಧ್ಯವಿಲ್ಲ. ತಂತ್ರಜ್ಞಾನದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ಜ್ಞಾನ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.
READ ALSO THIS STORY: ದಾವಣಗೆರೆ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಗಿರೀಶ್ ಆರ್. ನೇಸರ್ಗಿ ಅದ್ವಿತೀಯ ಸಾಧನೆ
ಪ್ರಸ್ತುತ ದೇಶ ವಿದೇಶಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಸಾಕಷ್ಟು ಅವಕಾಶಗಳು ಸಿಗುತ್ತವೆ. ಆದರೆ, ಅದೇ ರೀತಿಯಲ್ಲಿ ಉದ್ಯೋಗ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮ ಬೀರುತ್ತದೆ. ಇನ್ನು 30ರಿಂದ 40 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನು ಈಗಿನಿಂದಲೇ ಊಹಿಸಲು ಅಸಾಧ್ಯ. ಹಾಗಾಗಿ, ಭಾಷಾ ಪ್ರೌಢಿಮ್ಯ, ಕೌಶಲ್ಯ, ಪುಸ್ತಕ, ಪಠ್ಯೇತರ ಚಟುವಟಿಕೆ ಜ್ಞಾನ, ದೇಶ ಮತ್ತು ವಿದೇಶಗಳಲ್ಲಿನ ಆಗು ಹೋಗುಗಳ ಬಗ್ಗೆ ಪ್ರತಿನಿತ್ಯವೂ ತಿಳಿದುಕೊಳ್ಳುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೃಷಿ, ಕೈಗಾರಿಕೆ, ಶೈಕ್ಷಣಿಕ ಕ್ಷೇತ್ರಗಳ ಮೇಲೆ ಕೃತಕ ಬುದ್ದಿಮತ್ತೆ ಭಾರೀ ಪರಿಣಾಮ ಬೀರಲಿದೆ. ತಂತ್ರಜ್ಞಾನ ಬೆಳೆದಂತೆ ಕೌತುಕವೂ ಹೆಚ್ಚಾಗಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನದ ಬಗ್ಗೆ ಅರಿಯುವ, ಮಾಹಿತಿ ಪಡೆಯುವ ಅವಶ್ಯಕತೆ ತುಂಬಾನೇ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಹೇಳಿದರು.
ದಾವಣಗೆರೆಯಿಂದ 8 ಕಿಲೋಮೀಟರ್ ದೂರದಲ್ಲಿರುವ ಕಕ್ಕರಗೊಳ್ಳ ಗ್ರಾಮದಲ್ಲಿ ನಾನು ಹುಟ್ಟಿ ಬೆಳೆದಿದ್ದು. ನನ್ನ ತಂದೆ ಸಿರಿಗೆರೆ ಮಠದಲ್ಲಿ ಓದಿದ್ದರು. ಅಲ್ಲಿಂದಲೇ ಸಂಸ್ಕಾರ, ಪುಸ್ತಕ ಹವ್ಯಾಸ ಓದುವ ಬೆಳೆಸಿಕೊಂಡಿದ್ದರು. ಇದನ್ನು ನಮಗೂ ಚಿಕ್ಕಂದಿನಿಂದಲೇ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿದವರು. ಚಿಕ್ಕವರಿದ್ದಾಗ ಪುಟ್ಟದಾಗಿ ಮನೆಯಲ್ಲಿಟ್ಟಿದ್ದ ಪುಸ್ತಕಗಳನ್ನು ಇಲಿಗಳು ತಿಂದು ಹಾಕುತ್ತಿದ್ದವು. ತಂದೆ ಮನೆಗೆ ಬಂದು ನೋಡಿದಾಗ ಪುಸ್ತಕಗಳು ಹಾಳಾಗಿರುತ್ತಿದ್ದವು. ಆಗ ನಮಗೆ ಪುಸ್ತಕಗಳ ಮಹತ್ವ ಮತ್ತು ಜ್ಞಾನದ ಬಗ್ಗೆ ಅರಿವು ಮೂಡಿಸಿದರು. ಇದರಿಂದ ನಾನೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡೆ. ಇದರಿಂದ ಜ್ಞಾನ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಸ್ವಲ್ಪ ಮಟ್ಟಿಗೆ ಸಾಧನೆ ಮಾಡಿದ್ದೇನೆಂದರೆ ಅದಕ್ಕೆ ಕಾರಣ ಪುಸ್ತಕ, ಕಾದಂಬರಿ, ಮಹನೀಯರ ಸಾಧನೆ ಬಗ್ಗೆ ಓದುವ ಮೂಲಕ ತಿಳಿದುಕೊಂಡಿದ್ದರಿಂದ. ಹಾಗಾಗಿ, ಎಲ್ಲರೂ ಪುಸ್ತಕ ಓದುವ, ನಿರ್ಭೀತಿಯಿಂದ ಮುನ್ನಡೆಯುವ, ಸಾಧಿಸುತ್ತೇವೆಂಬ ಛಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಐದನೇ ತರಗತಿಯಲ್ಲಿ ನಾನು ಪರೀಕ್ಷೆ ಬರೆದು ಉತ್ತೀರ್ಣನಾಗಿ ಜವಾಹರ ನವೋದಯ ಶಾಲೆಗೆ ಸೇರಿಕೊಂಡೆ. ಹಳ್ಳಿಯಿಂದ ಬಂದರೂ ನಾನು ಅಲ್ಲಿಗೆ ಹೋದಾಗ ಗ್ರಂಥಾಲಯದಲ್ಲಿನ ಎಲ್ಲಾ ಪುಸ್ತಕಗಳನ್ನು ಓದಬೇಕು. ಎಲ್ಲಾ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಬೇಕು ಎಂಬ ನಿರ್ಧಾರ
ಮಾಡಿದೆ. ಅದರಂತೆ ದಿನಚರಿ ರೂಢಿಸಿಕೊಂಡೆ. ಇದು ತುಂಬಾನೇ ಸಹಕಾರಿಯಾಯಿತು. ಮೆಡಿಕಲ್, ಐಎಎಸ್ ಪಾಸ್ ಮಾಡಬೇಕೆಂಬ ಕನಸು ಕಂಡಿದ್ದೆ. ಬಡತನ ಇದ್ದ ಕಾರಣ ಸಾಧ್ಯವಾಗಲಿಲ್ಲ. ಹಾಗೆಂದು ಸುಮ್ಮನೆ ಕೂರಲಿಲ್ಲ. ಇನ್ ಸೈಟ್ಸ್ ಎಂಬ ಸಂಸ್ಥೆ ಸ್ಥಾಪಿಸಿ ಸಾವಿರಾರು
ವಿದ್ಯಾರ್ಥಿಗಳು ಇಂದು ಐಎಎಸ್, ಐಪಿಎಸ್ ಅಧಿಕಾರಿಗಳಾಗುವಂತೆ ಮಾಡಿದ್ದೇನೆ. ಇದೆಲ್ಲಾ ಸಾಧ್ಯವಾಗಿದ್ದು ಪುಸ್ತಕದಿಂದ ಬಂದ ಜ್ಞಾನದಿಂದ ಎಂದು ತಿಳಿಸಿದರು.
ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಅಧ್ಯಕ್ಷೆ, ಸಹಾಯಕ ಪ್ರಾಧ್ಯಾಪಕಿ ಡಾ. ಆಶಾ, ಎಂಎಲ್ ವಿಭಾಗದ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಕೀರ್ತಿ ಪ್ರಸಾದ್, ಫೋರಂ ಸಂಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕಿ ಮುಕ್ತಾ ಪೂಜಾರ್,ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.







