ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ

On: September 1, 2025 6:51 PM
Follow Us:
ಸಮಾಜ
---Advertisement---

SUDDIKSHANA KANNADA NEWS/ DAVANAGERE/DATE:01_09_2025

ದಾವಣಗೆರೆ: ಒಳ್ಳೆಯ ಸ್ಥಾನ ಮಾನ ಬಯಸಿ ಬರುತ್ತೇವೆಂದರೆ ತಡೆಯಲು ಸಾವಿರಾರು ಪಡೆಗಳು ಇರುವ ದುಷ್ಟ ಸಮಾಜ. ದುಷ್ಟ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಧರ್ಮ ಮೀರಿ ಬೆಳೆಯಬೇಕಾದರೆ ಐಎಎಸ್, ಐಪಿಎಸ್ ನಂಥ ಉನ್ನತ ಹುದ್ದೆಗೆ ಹೋಗುವುದೇ ನಮಗಿರುವ ಮಾರ್ಗ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

READ ALSO THIS STORY: ಪಾಕಿಸ್ತಾನ ನಕ್ಷೆ ವಿರೋಧಿಸಿ ಶೃಂಗಸಭೆಯಿಂದ ಹೊರನಡೆದಿದ್ದ ‘ಸೂಪರ್ ಸ್ಪೈ’ ಅಜಿತ್ ದೋವಲ್!

ಜಗಳೂರಿನ ಹೆಚ್.ಸಿ.ಬಿ. ಕಾಲೇಜು ಸಭಾಂಗಣದಲ್ಲಿ ದಾವಣಗೆರೆ ವಿವಿ, ಜಗಳೂರು ತಾಲೂಕು ನಾಯಕರ ಸಂಘ, ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾ., ಪ.ಪಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನ್ಯಾಕ್,
ಐ.ಕ್ಯೂ.ಎ.ಸಿ, ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್ ಮತ್ತು ಎಲ್ಲಾ ಕೋಶಗಳ ಸಹಯೋಗದೊಂದಿಗೆ ಅಕ್ಷರ ಮಾಲೆ ಸರಣಿ ಕಾರ್ಯಕ್ರಮ- 6 ಪ್ರಯುಕ್ತ ಏರ್ಪಡಿಸಲಾಗಿದ್ದ ನೀವು ಯುಪಿಎಸ್ ಸಿ, ಐಎಎಸ್ ಗೆ ಏಕೆ ತಯಾರಿ ನಡೆಸಬೇಕು ಮತ್ತು ಅದನ್ನು ಹೇಗೆ ಪಾಸ್ ಮಾಡುವುದು” ಎಂಬ ಕುರಿತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ದೇಶಕ್ಕೆ ಟಿನಾ ಡಾಗಿ ಎಂಬ ದಲಿತ ಸಮುದಾಯಕ್ಕೆ ಸೇರಿದ ಯುವತಿ 2017ರಲ್ಲಿ ಮೊದಲ ಸ್ಥಾನ ಪಡೆದಿದ್ದರು. 10 ಲಕ್ಷ ಅಭ್ಯರ್ಥಿಗಳಿಂತ ಹೆಚ್ಚು ಅಂಕ ಪಡೆದು ದೇಶದ ಗಮನ ಸೆಳೆದಿದ್ದಲ್ಲದೇ ಆಮೇಲೆ ಸಮಸ್ಯೆಗಳನ್ನು ಎದುರಿಸಿ
ಉನ್ನತ ಹುದ್ದೆಗೆ ಏರಿದರು. ಇಂದಿಗೂ ತಳ ಸಮುದಾಯದವರಿಗೆ ಮಾದರಿ ಎಂದರೆ ಉತ್ಪ್ರೇಕ್ಷೆಯಾಗದು. ನಿಮ್ಮ ಹಸಿವು ಜ್ಞಾನದ ಕಡೆಗೆ ಇರಲಿ. ಹಳ್ಳಿ ಮಕ್ಕಳು, ಶೋಷಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಆಗಬೇಕು. ಈ ನಿಟ್ಟಿನಲ್ಲಿ ದೊಡ್ಡದಾದ ಮಹತ್ವಾಕಾಂಕ್ಷೆ ಹೊಂದುವಂತೆ ಸಲಹೆ ನೀಡಿದರು.

ಯುಪಿಎಸ್ ಸಿಯಲ್ಲಿ ನೂರರ ಟಾಪ್ ಸ್ಥಾನಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳು ಬರುವುದು ತುಂಬಾನೇ ಕಡಿಮೆ. ಇದಕ್ಕೆ ಕಾರಣ ಉತ್ಕೃಷ್ಟ ಮತ್ತು ಗುಣಮಟ್ಟದ ಶಿಕ್ಷಣ ಸಿಗದಿರುವುದೇ ಕಾರಣ. ಇಂಥ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ನಮಗೆ ಯಾವ ರೀತಿ ಶಿಕ್ಷಣ ಸಿಗುತ್ತದೆ ಎಂಬ ಆಧಾರದ ಮೇಲೆ ಮುಂದಿನ ಭವಿಷ್ಯ ಅಡಗಿರುತ್ತದೆ. ದೇಶದಲ್ಲಿ ಇಂದಿಗೂ ಅಸಮಾನತೆ ರುದ್ರತಾಂಡವವಾಡುತ್ತಿದೆ. ಹಳ್ಳಿಗಳಲ್ಲಿ ಎಸ್ಸಿ, ಎಸ್ಟಿ, ದಲಿತ ಕಾಲೋನಿಗಳಲ್ಲಿ ಏನು ವಾಸ್ತವವಿದೆ ಎಂಬುದನ್ನು ಅರಿಯದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಇದು ದುರಂತದ ವಿಚಾರ ಎಂದು ತಿಳಿಸಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ದ್ವೇಷ, ಅಸೂಯೆ ಪ್ರವೃತ್ತಿ ಹೆಚ್ಚಾಗಿದೆ. ಇದು ತೊಲಗಬೇಕಾದರೆ ಐಎಎಸ್, ಕೆಎಎಸ್ ನಂಥ ಹುದ್ದೆಗೇರಬೇಕು. ಆಗ ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಪದವಿ ಓದಿದವರು ಡ್ರೈವರ್, ಗಾರೆ, ಪೇಟಿಂಗ್, ಕೃಷಿ, ಸಣ್ಣ ಸಣ್ಣ ಕಂಪೆನಿಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಅಷ್ಟು ಸಂಬಳ ತೆಗೆದುಕೊಂಡು ಕೆಲಸ ಮಾಡಿಕೊಂಡಿದ್ದರೆ ಸಮಾಜ ಹಾಗೂ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯವಾಗದು. ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಾಗದು. ನೀವು ಮಹತ್ವಾಕಾಂಕ್ಷಿಗಳಾಗಬೇಕು. ಇಂದಿನಿಂದಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ. ದೊಡ್ಡ ದೊಡ್ಡ ಕನಸು ಕಾಣುವ ಜೊತೆಗೆ ಸಾಧಿಸಲು ಸಜ್ಜಾಗಿ ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡ ಹಾಕಿದರೂ ಯುಪಿಎಸ್ ಸಿಯಲ್ಲಿ ಆಯ್ಕೆ ಮಾಡಲಾಗದು. ಭ್ರಷ್ಟಾಚಾರ, ರಾಜಕೀಯ ಒತ್ತಡ ಇಲ್ಲದೇ ದೇಶದಲ್ಲಿ ನಡೆಯುವ ಪರೀಕ್ಷೆ ಯುಪಿಎಸ್ ಸಿ. ಪ್ರಧಾನಿಗಳೇ ಕರೆ ಮಾಡಿ ಯುಪಿಎಸ್ ಯಲ್ಲಿ ಮೆರಿಟ್ ಮೇಲೆ ಉತೀರ್ಣರನ್ನಾಗಿ ಮಾಡಿ ಎಂದರೂ ಆಗದು. ಅಷ್ಟು ಪಾರದರ್ಶಕವಾಗಿ ಈ ಪರೀಕ್ಷೆ ನಡೆಯುತ್ತದೆ. ಯುಪಿಎಸ್ ಸಿಯಲ್ಲಿ ಯಶ ಸಾಧಿಸಬೇಕಾದರೆ ಜ್ಞಾನ, ಸತತ ಕಠಿಣ ಪರಿಶ್ರಮ, ಓದು, ಅಗಾಧವಾದ ಪಾಂಡಿತ್ಯ ಬೇಕು ಎಂದು ತಿಳಿಸಿದರು.

ಮೆರಿಟ್ ಮೂಲಕವೇ ಆಯ್ಕೆ ಮಾಡಲು ಭಾರತ ದೇಶದಲ್ಲಿ ಗಟ್ಟಿಯಾಗಿ ನಿಂತಿರುವುದು ಯುಪಿಎಸ್ ಸಿ ಮಾತ್ರ. ಈ ಪರೀಕ್ಷೆ ಯಾವಾಗ ನಡೆಯುತ್ತದೆ ಎಂಬುದನ್ನು ಒಂದು ವರ್ಷ ಮುಂಚಿತವಾಗಿ ಇರುತ್ತದೆ. ಏನೇ ಆದರೂ ನಿಗದಿತ ವೇಳೆಯಲ್ಲೇ ಪರೀಕ್ಷ ನಡೆದೇ ನಡೆಯುತ್ತದೆ. ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಕೋವಿಡ್ ಸೋಂಕು ಹೆಚ್ಚಾದಾಗ ಮಾತ್ರ 2 ತಿಂಗಳು ಮುಂದೂಡಲಾಗಿತ್ತು. ಇನ್ನುಳಿದಂತೆ ಯಾವಾಗಲೂ ತಪ್ಪಿಲ್ಲ. ಪರೀಕ್ಷೆ, ಮೇನ್ಸ್, ಇಂಟರ್ ವ್ಯೂನಲ್ಲಿ ಹೆಚ್ಚು ಅಂಕ ಪಡೆಯಬೇಕು. ನಿರರ್ಗಳವಾಗಿ, ಭಯವಿಲ್ಲದೇ ಗೊತ್ತಿರುವ ವಿಚಾರ ಸುಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಕಡಿಮೆ ಪದಗಳು ಮತ್ತು ಕಡಿಮೆ ಅವಧಿಯಲ್ಲಿ ಹೇಳಬೇಕು. 30ರಿಂದ 40 ಸೆಕೆಂಡ್ ಗಳಲ್ಲಿ ಸಂದರ್ಶನದ ವೇಳೆ ಕೇಳುವ ಪ್ರಶ್ನೆಗೆ ಉತ್ತರಿಸಬೇಕು. ಅಷ್ಟು ಸುಲಭವಲ್ಲ ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು. ಇದಕ್ಕೆ ಸಾಕಷ್ಟು ತಾಲೀಮು ಬೇಕೇ ಬೇಕು ಎಂದು ವಿವರಿಸಿದರು.

ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಇನ್ನು ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯ ಈಡೇರಿಲ್ಲ. ಕೇಂದ್ರ ನಾಗರಿಕ ಸೇವಾ ಹುದ್ದೆಗೆ ಬರಬೇಕಾದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಇದನ್ನು ಸಾಧಿಸಿದವರು ಸೆಲಬ್ರಿಟಿ ಆಗ್ತಾರೆ. ಸಮಾಜದ ಪರಿವರ್ತನೆ ತರಬಲ್ಲ ಶಕ್ತಿಯುಳ್ಳ ಶಕ್ತಿವಂತರಾಗುತ್ತಾರೆ. ತಂದೆ ತಾಯಿಗೂ ಗೌರವ ಸಿಗುತ್ತದೆ. ಸಮಾಜದಲ್ಲಿಯೂ ಸುಧಾರಣೆ ಆಗುತ್ತದೆ. ತನ್ನ ಸಮಾಜದ ಉನ್ನತೀಕರಣ, ಅಭಿವೃದ್ಧಿಗೆ ಕಾರ್ಯರೂಪ ರೂಪಿಸಬಹುದು. ಸಮಾಜದಲ್ಲಿ ತಳ ಸಮುದಾಯಗಳೆಂದು ಕರೆಸಿಕೊಳ್ಳುವವರು ಹೆಚ್ಚಾಗಿ
ಇಂಥ ಹುದ್ದೆಗೆ ಬರುವಂತಾಗಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು, ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಆಗಿ ಹೋಗಬೇಕು. ಆಗ ದೆಹಲಿ ಮಟ್ಟದಲ್ಲಿ ಕುಳಿತು ಇಲ್ಲಿನ ಅಭಿವೃದ್ಧಿಗೆ ಸಹಕಾರ ನೀಡಬಹುದು. ಕರ್ನಾಟಕಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳನ್ನು ತೆಗೆದುಕೊಂಡು ಬರಬೇಕಾದರೆ ನಮ್ಮವರೇ ಐಎಎಸ್, ಐಪಿಎಸ್ ಇರಬೇಕಾಗುತ್ತದೆ. ಆದ್ರೆ ವಿಪರ್ಯಾಸದ ಸಂಗತಿ ಎಂದರೆ ಸಂಖ್ಯೆ ಗಣನೀಯವಾಗಿ ಭಾರೀ ಕಡಿಮೆಯಿದೆ. ನಮ್ಮದು ಸುಂದರ ಕನ್ನಡ ಭಾಷೆ. ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಕರ್ನಾಟಕದವರು ಬೇರೆ ರಾಜ್ಯದ ಜಿಲ್ಲಾಧಿಕಾರಿ, ಎಸ್ಪಿಯಂಥ ಅಧಿಕಾರಿಗಳಾದರೆ ಕನ್ನಡದ ಪರ ಒಲವು ಅಲ್ಲಿಯೂ ಮೂಡಿಸಬಹುದು. ಕನ್ನಡ ಭಾಷೆ ಬೆಳವಣಿಗೆ, ಅಭಿವೃದ್ಧಿಗೆ ಐಎಎಸ್ ಅಧಿಕಾರಿಗಳಾದರೆ ಸುಲಭವಾಗುತ್ತದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಹೆಚ್ಚಾಗಿ ಪೋಷಕರು ಮಕ್ಕಳನ್ನು ಇಂಗ್ಲೀಷ್ ಭಾಷಾ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇನ್ನು 30 ವರ್ಷ ಕಳೆದರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಕನ್ನಡ ಭಾಷಾ ಮಾಧ್ಯಮದಲ್ಲಿ ಓದುವವರು ಸಿಗುವುದು ಕಡಿಮೆ. ಆಗ ಕನ್ನಡಕ್ಕೆ ಯಾವ ಮಾನ್ಯತೆ ಸಿಗುತ್ತದೆ ಎಂಬುದನ್ನು ಊಹಿಸಿಕೊಂಡರೆ ಆತಂಕಕಾರಿಯಾಗಿದೆ. ಕನ್ನಡ ಉಳಿದಿರುವುದು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಂದ ಮಾತ್ರ. ಕನ್ನಡ ಬೆಳೆಸುವ ಕೆಲಸ ಮಾಡುತ್ತಿಲ್ಲ. ಕನ್ನಡ ಪ್ರೀತಿಸುವ, ಮನಸುಗಳು ಆಡಳಿತದಲ್ಲಿ ಬರಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.

ಜಗಳೂರು ಶಾಸಕ ಚಿಕ್ಕಮ್ಮನಹಟ್ಟ ಬಿ. ದೇವೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲರು ಮತ್ತು ಕಾರ್ಯಕ್ರಮದ ಸಂಚಾಲಕ ಎಂ. ಒ. ಮಧು, ಅಕ್ಷರ ಮಾಲ ಸರಣಿ ನಿರ್ದೇಶಕ ಪ್ರಸನ್ನ ಕುಮಾರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಡಿ. ಓ. ಸುರೇಶ್ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment