SUDDIKSHANA KANNADA NEWS/ DAVANAGERE/DATE:13_08_2025
ದಾವಣಗೆರೆ: ಸರ್ಕಾರಿ ಅಥವಾ ಖಾಸಗಿ ಶಾಲೆಗಳಾಗಲೀ ಪ್ರತಿಯೊಂದು ಮಗುವಿಗೂ ಗುಣಮಟ್ಟದ, ಸಮಾನ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ತೊಲಗಬೇಕು. ಆಗ ಮಾತ್ರ ಬಡವರು, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವರ್ಗದ ಮಕ್ಕಳೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
READ ALSO THIS STORY: ಸ್ವಯಂ ಉದ್ಯೋಗ, ನೇರಸಾಲ, ಜಮೀನು ಖರೀದಿ ಸೇರಿ ವಿವಿಧ ನಿಗಮಗಳಲ್ಲಿ ಅರ್ಜಿ ಆಹ್ವಾನ: ಸೌಲಭ್ಯಕ್ಕೆ ಬೇಕು ಈ ದಾಖಲೆಗಳು!
ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿನ್ನಿಕೋಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿದ ಧ್ವಜಸ್ತಂಭದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ಶಿಕ್ಷಣದಲ್ಲಿ ಸಮಾನತೆ ಬಂದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು ಎಂಬ ದೊಡ್ಡ ಕನಸು ಕಂಡಿದ್ದೇನೆ. ಇದು ಅಷ್ಟು ಸುಲಭವಲ್ಲ ಎಂಬುದು ಗೊತ್ತು. ಇದಕ್ಕಾಗಿ ಪ್ರಯತ್ನ ಮುಂದೆಯೂ ಮಾಡುತ್ತೇನೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಯೂನಿಫಾರಂ ವಸ್ತ್ರ ಧರಿಸಿ ಎಲ್ಲಾ ಮಕ್ಕಳೂ ಬಂದಿರುತ್ತಾರೆ. ಇಲ್ಲಿ ಬಡವ, ಶ್ರೀಮಂತ, ನಾನು ದೊಡ್ಡವನು, ಚಿಕ್ಕವನು ಎಂಬುದಿಲ್ಲ. ಇಲ್ಲಿ ಎಲ್ಲರೂ ಒಂದೇ. ಎಲ್ಲರೂ ಸಮಾನರಾಗಿ ಹುಟ್ಟಿರುತ್ತೇವೆ. ಆಗ ಯಾವುದೇ ಅಸಮಾನತೆ ಇರುವುದಿಲ್ಲ. ಬೆಳೆಯುತ್ತಾ ಹೋದಂತೆ ಅವಕಾಶಗಳು ಸಿಕ್ಕರೆ ದೊಡ್ಡ ವ್ಯಕ್ತಿಗಳಾಗುತ್ತೇವೆ. ಇಲ್ಲದದ್ದರೆ ಕೂಲಿ ಸೇರಿದಂತೆ ಯಾವುದೋ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೇವೆ. ಶಿಕ್ಷಣದಲ್ಲಿ ಸಮಾನತೆ ದೊರೆತರೆ ಮುಂದೊಂದು ದಿನ ಐಎಎಸ್, ಐಪಿಎಸ್, ವೈದ್ಯರು, ಎಂಜಿನಿಯರ್, ದೊಡ್ಡ ಉದ್ಯಮಿ, ರಾಜಕಾರಣಿಗಳಾಗಬಹುದು ಎಂದು ತಿಳಿಸಿದರು.
ಭಾರತ ದೇಶದ ಸಂವಿಧಾನದಲ್ಲಿ ಸಮಾನತೆ, ಸ್ವಾಂತಂತ್ರ್ಯ, ಸಮಾನತೆ, ಭ್ರಾತೃತ್ವ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬಾನಿಗೂ ಒಂದೇ ಮತ, ವ್ಯಕ್ತಿಗೂ ಒಂದೇ ಮತ. ಮತದ ಮೌಲ್ಯ ಒಂದೇ. ಒಂದು ಮತ ಒಂದು ಮೌಲ್ಯ ಎಂದಾದ ಮೇಲೆ ಅಂಬಾನಿ ಯಾಕೆ ಪ್ರಪಂಚದ ಶ್ರೀಮಂತರಾಗಬಹುದು. ನಾವ್ಯಾಕೆ ಆಗುವುದಿಲ್ಲ. ಸಮಾನತೆ ಎಲ್ಲಿದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರತಿಯೊಬ್ಬರಿಗೂ ಸಮಾನವಾದ ಸಂಪನ್ಮೂಲಗಳು ಸಿಕ್ಕರೆ ಶ್ರೀಮಂತರು ಆಗಬಹುದು. ಆದರೆ ಸಿಗಬೇಕಲ್ವ ಎಂದು ಪ್ರಶ್ನಿಸಿದರು.
ಈಗಿನಿಂದಲೇ ದೊಡ್ಡ ಕನಸು ಕಾಣಿ. ನೀವೆಲ್ಲರೂ ಹಗಲು ರಾತ್ರಿ ಕಷ್ಟಪಟ್ಟು ಓದಬೇಕು. ಶಿಕ್ಷಕರ ಬಳಿ ಪಠ್ಯಪುಸ್ತಕದ ಆಚೆಗಿನ ಪುಸ್ತಕಗಳನ್ನೂ ಓದಿ. ಗ್ರಂಥಾಲಯದಲ್ಲಿರುವ ಪ್ರತಿಯೊಂದು ಪುಸ್ತಕ ಓದುತ್ತೇನೆಂದು ನಿರ್ಧರಿಸಿ. ಎಷ್ಟೇ
ಕಷ್ಟ ಇದ್ದರೂ ಜ್ಞಾನ ಸಿಕ್ಕರೆ ಅವಕಾಶಗಳು ಅರಸಿ ಬರುತ್ತವೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಬಡತನದಿಂದ ಬೆಳೆದ ನಾನು ಇಂದು ಐಎಎಸ್ ಕೋಚಿಂಗ್ ಸೆಂಟರ್ ತೆರೆಯಲು ಕಾರಣವಾಗಿದ್ದೇ ಪುಸ್ತಕ ಜ್ಞಾನ, ಆಕರ್ಷಕ ವ್ಯಕ್ತಿತ್ವ,
ಉತ್ತಮ ಗುಣಗಳು. ಬಡವರು, ಹಳ್ಳಿ ಮಕ್ಕಳು ಐಎಎಸ್ ಆಗಬೇಕಾದರೆ ಪುಸ್ತಕ ಜ್ಞಾನ ಸಂಪದಾನೆ ಅತ್ಯಗತ್ಯ. ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸಂಗೀತ, ನೃತ್ಯ, ರೈಟಿಂಗ್ ಸೇರಿದಂತೆ ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿಯೂ ಸಕ್ರಿಯ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನೀವೆಲ್ಲರೂ ಸ್ಪೆಷಲ್. ನಿಮ್ಮಲ್ಲಿ ನಿಮ್ಮದೇ ಆದ ವಿಶಿಷ್ಟ ಗುಣಗಳಿವೆ. ಪ್ರತಿಭೆ, ಸಾಮರ್ಥ್ಯವಿದೆ. ಇದು ಹೊರ ಬರಬೇಕು. ವಿಶ್ವಮಾನವರಾಗಿ. ಉತ್ತಮ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ಜಿ. ಬಿ. ವಿನಯ್ ಕುಮಾರ್ ಸಲಹೆ ನೀಡಿದರು.
ಬನ್ನಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ್ರು, ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ್ ರಾವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ. ಟಿ. ಸಿದ್ದೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವ ಭಾರತಿ, ಶಿಕ್ಷಕರಾದ ಬಿ. ಎಸ್. ಜ್ಯೋತಿ, ಚಂದ್ರಶೇಖರ್, ಗ್ರಾಮದ ಹಿರಿಯ ಹಾಗೂ ಕಿರಿಯ ಮುಖಂಡರು ಹಾಜರಿದ್ದರು.
ಸಾವಿರಾರು ಕೋಟಿ ರೂ. ಎಲ್ಲಿ ಹೋಗುತ್ತೆ?
ನಾನು ಆಗರ್ಭ ಶ್ರೀಮಂತನಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಇರುವಂಥ ಶ್ರೀಮಂತರಂತೆ ಅಲ್ಲ. ಕಷ್ಟಪಟ್ಟು ದುಡಿದಿದ್ದೇನೆ. ಸ್ವಂತ ದುಡ್ಡಲ್ಲಿ ಎಷ್ಟು ಸಹಾಯ ಮಾಡಬಹುದು? ಕೈಯಲ್ಲಾದಷ್ಟು ನೆರವು ನೀಡುತ್ತೇವೆ. ರಾಜಕೀಯವಾಗಿ ಅಧಿಕಾರ ಸಿಕ್ಕಾಗ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಬಹುದು. ಸರ್ಕಾರವು ಸಾವಿರಾರು ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತದೆ. ಈ ಹಣ ಎಲ್ಲಿ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಬರುವ ಹಣ ಸದ್ವಿನಿಯೋಗ ಆದರೆ ಗುಣಮಟ್ಟದ ಶಿಕ್ಷಣ ಸಿಕ್ಕೇ ಸಿಗುತ್ತದೆ.
ಜಿ. ಬಿ. ವಿನಯ್ ಕುಮಾರ್, ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರು