SUDDIKSHANA KANNADA NEWS/DAVANAGERE/DATE:29_10_2025
ದಾವಣಗೆರೆ: ಇಂಗ್ಲೀಷ್ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ. ಇಂಗ್ಲೀಷ್ ಭಾಷಾ ಪ್ರೌಢಿಮೆ ಹೊಂದಿದರೆ ಉನ್ನತ ಹುದ್ದೆ ಅಲಂಕರಿಸಲು ಕಷ್ಟವಾಗದು. ಹಾಗಾಗಿ, ಇಂಗ್ಲೀಷ್ ಕಬ್ಬಿಣದ ಕಡಲೆ ಅಲ್ಲ. ಕಲಿಯಲು ಆಸಕ್ತಿ ಬೇಕು ಅಷ್ಟೇ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
READ ALSO THIS STORY: ಭರ್ಜರಿ ಉದ್ಯೋಗಾವಕಾಶ, ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: 7565 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿ ಅರ್ಜಿ
ಜಿಲ್ಲೆಯ ಹರಿಹರ ತಾಲೂಕಿನ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಪ್ರಥಮ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐಎಎಸ್, ಕೆಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಮಾರ್ಗದರ್ಶಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರೂ ಸಂಪನ್ಮೂಲ ಬಳಸಿಕೊಳ್ಳುತ್ತಾರೋ ಅವರಿಗೆ ಯಶಸ್ಸು ಬೇಗ ಸಿಗುತ್ತದೆ. ನಮ್ಮ ಕಣ್ಣುಂದೆ ಇರುವ ಅವಕಾಶಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇಂಗ್ಲೀಷ್ ಬರಲ್ಲ ಎಂಬ ಕೀಳರಿಮೆಯಿಂದ ಹೊರ ಬನ್ನಿ. ತುಂಬಾ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಕಲಿಯಲ್ಲ, ನಾನು ಇದರಲ್ಲಿ ದುರ್ಬಲವಾಗಿದ್ದೇನೆಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರೂ ಯಶ ಸಾಧಿಸಲು ಆಗದು ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಒಂದೂ ದಿನ ಹಳ್ಳಿ ನೋಡದವರು, ಜೀವನ ಸಾಗಿಸದೇ ಇರುವವರು, ಹಸಿವು, ಅವಮಾನ ಅನುಭವಿಸದೇ ಇರುವವರು ಅಧಿಕಾರಕ್ಕೆ ಬರುತ್ತಾರೆ. ಅಧಿಕಾರ ಸಿಕ್ಕಾಗ ನಿಮ್ಮ ಕೈಗೆ ಸಿಗಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸರ್ಕಾರದ ಅನುಕೂಲ ಸೌಲಭ್ಯ ಮತ್ತು ಹಕ್ಕು ಪಡೆಯಲು ನಿಮ್ಮನ್ನು ಕಾಡಿಸುತ್ತಾರೆ. ನೀವು ಉನ್ನತ ಸ್ಥಾನಕ್ಕೆ ಬಂದರೆ ಇನ್ನೊಬ್ಬರ ಮುಂದೆ ಅಪಮಾನ ಎದುರಿಸುವ, ಗುಲಾಮಗಿರಿಯಂತೆ ಬದುಕುವ ಪ್ರಮೇಯವೇ ಎದುರಾಗದು ಎಂದು ತಿಳಿಸಿದರು.
ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ ಐಎಎಸ್ ಓದಲು ಸರ್ಕಾರವೇ ನೆರವು ನೀಡುತ್ತದೆ. ಪ್ರತಿತಿಂಗಳೂ ಹಣ ನಿಗದಿಪಡಿಸಿ ಕೊಡುತ್ತದೆ. ಹಾಗಾಗಿ, ಇದರ ಸೌಲಭ್ಯ ಪಡೆದುಕೊಳ್ಳಿ. ನಮ್ಮ ಸಂಸ್ಥೆಗೆ ಬಂದರೆ ಎಸ್ಸಿ, ಎಸ್ಟಿ, ಬಡವರು, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ
ಉಚಿತವಾಗಿ ಕೋಚಿಂಗ್ ನೀಡುತ್ತೇವೆ. ಇದಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚ ತಗುಲುತ್ತದೆ. ಇದುವರೆಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಕೋಚಿಂಗ್ ನೀಡುತ್ತಿದ್ದೇವೆ. ನಿಮ್ಮ ಕೈಯಲ್ಲಾದಷ್ಟು ಶುಲ್ಪ ಪಾವತಿಸಿ. ಅತಿ ಕಡಿಮೆ ವೆಚ್ಚದಲ್ಲಿ ಕೋಚಿಂಗ್
ನೀಡುತ್ತೇವೆ ಎಂದು ವಿನಯ್ ಕುಮಾರ್ ಅವರು ಭರವಸೆ ನೀಡಿದರು.
ರೀಲ್ಸ್ ನೋಡುವುದು, ಬಿಗ್ ಬಾಸ್ ಸೇರಿದಂತೆ ಹೆಚ್ಚಿನ ಮನರಂಜನೆಗೆ ಆದ್ಯತೆ ನೀಡುತ್ತಾರೆ. ಇಷ್ಟೇ ಸಮಯವನ್ನು ಓದಿನತ್ತ, ಪುಸ್ತಕಗಳ ಅಧ್ಯಯನ ಬಗ್ಗೆ ಸಮಯ ನೀಡಿ. ಮನರಂಜನೆಗೆ ಕಡಿಮೆ ಅವಧಿ ಕೊಟ್ಟು ಓದಿನತ್ತ ಹೆಚ್ಚಿನ ಗಮನ ಕೊಡಿ ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್ ಅಜ್ಜೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಎಸ್ ಸಂಚಾಲಕ ಪಿ. ಜೆ. ಮಹಾಂತೇಶ್, ಸಮಾಜ ಸೇವಕ ಬಿ. ಮಗ್ದುಮ್, ಬಟ್ಟಲಕಟ್ಟೆಯ ಪರಶುರಾಮ್, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು
ಹಾಜರಿದ್ದರು. ಇದೇ ವೇಳೆ ಜಿ. ಬಿ. ವಿನಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.








