ದಾವಣಗೆರೆ: ಯುಪಿಎಸ್ ಸಿ ಪರೀಕ್ಷೆಗೆ ಸರಿಯಾದ ಮಾರ್ಗದರ್ಶನ ನಮ್ಮಲ್ಲಿ ಇದೆ. ಸುಮಾರು ಐಎಎಸ್, ಐಪಿಎಸ್, ಐಆರ್ ಎಸ್ ಅಧಿಕಾರಿಗಳನ್ನು ಕೊಟ್ಟಿದ್ದೇವೆ. ಇಂದಿಗೂ ನಾನು ಹೋಗಿ ಮಾರ್ಗದರ್ಶನ ನೀಡುತ್ತೇನೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದೇವೆ ಎಂಬ ಕೊರಗು ಬಿಡಿ. ಎರಡರಿಂದ ಮೂರು ವರ್ಷಗಳ ಕಾಲ ಜಗಳೂರು ತಾಲೂಕಿನ ಈ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ತಯಾರಿದ್ದೇವೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಘೋಷಿಸಿದರು.
ಈ ಸುದ್ದಿಯನ್ನೂ ಓದಿ: “ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ
ಜಗಳೂರಿನ ಹೆಚ್.ಸಿ.ಬಿ. ಕಾಲೇಜು ಸಭಾಂಗಣದಲ್ಲಿ ದಾವಣಗೆರೆ ವಿವಿ, ಜಗಳೂರು ತಾಲೂಕು ನಾಯಕರ ಸಂಘ, ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾ., ಪ.ಪಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನ್ಯಾಕ್,
ಐ.ಕ್ಯೂ.ಎ.ಸಿ, ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್ ಮತ್ತು ಎಲ್ಲಾ ಕೋಶಗಳ ಸಹಯೋಗದೊಂದಿಗೆ ಅಕ್ಷರ ಮಾಲೆ ಸರಣಿ ಕಾರ್ಯಕ್ರಮ- 6 ಪ್ರಯುಕ್ತ ಏರ್ಪಡಿಸಲಾಗಿದ್ದ ನೀವು ಯುಪಿಎಸ್ ಸಿ, ಐಎಎಸ್ ಗೆ ಏಕೆ ತಯಾರಿ ನಡೆಸಬೇಕು ಮತ್ತು ಅದನ್ನು ಹೇಗೆ ಪಾಸ್ ಮಾಡುವುದು” ಎಂಬ ಕುರಿತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಇನ್ ಸೈಟ್ಸ್ ಸಂಸ್ಥೆಯಿಂದ ಮಾರ್ಕೆಟಿಂಗ್ ಮಾಡಲು ಇಲ್ಲಿಗೆ ಬಂದಿಲ್ಲ, ನಮ್ಮಲ್ಲಿ ಮಾರ್ಗದರ್ಶನ ಪಡೆದರೆ ನಿಮಗೆ ಸರ್ಕಾರಿ ನೌಕರಿ ಸಿಗುವುದು ಖಚಿತ. ಸವಾಲು ಸ್ವೀಕರಿಸಿ, ಉನ್ನತ ಹುದ್ದೆಗೆ ಏರುವ ಕನಸು ಕಾಣಲು ಶ್ರಮ ಹಾಕಿ. ಖಂಡಿತ ಸಾಧ್ಯವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ನನಗೆ ಜಗಳೂರಿಗೆ ಬರಲು ತುಂಬಾ ಇಷ್ಟ. ಇದಕ್ಕೆ ಶಾಸಕರಾದ ದೇವೇಂದ್ರಪ್ಪರೇ ಕಾರಣ. ದಾವಣಗೆರೆಗೆ ಪಾದಾರ್ಪಣೆ ಮಾಡಿದಂತಾಗಿನಿಂದ ಶಿಕ್ಷಣ ಪ್ರೀತಿ ಅವರಿಗೆ ಇಷ್ಟವಾಗಿದೆ. ಶಿಕ್ಷಣ ಕ್ಷೇತ್ರದಿಂದ ಬಂದಿದ್ದೇನೆ ಎಂದು ತಿಳಿದ ದಿನದಿಂದಲೂ ಪ್ರತಿಯೊಂದು ಕಾರ್ಯಕ್ರಮಕ್ಕೂ ಆಹ್ವಾನಿಸುತ್ತಾರೆ. ರಾಜಕಾರಣ ಒತ್ತಟ್ಟಿಗಿರಲಿ. ಕಾಂಗ್ರೆಸ್ ಪಕ್ಷದ ವಿರುದ್ಧ ಹೋಗಿ ಪಕ್ಷೇತರನಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಯಾವುದನ್ನೂ ಪರಿಗಣಿಸದೇ ರಾಜಕಾರಣ ಶಿಕ್ಷಣ ಕ್ಷೇತ್ರ ಹೊರತಾಗಿದೆ ಎಂದುಕೊಂಡವರು ದೇವೇಂದ್ರಪ್ಪರು. ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ, ಗೌರವಿಸುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಂಥ ಮನಸ್ಸು ಇರುವವರು ಸಿಗಲ್ಲ ಎಂದು ತಿಳಿಸಿದರು.
ಚುನಾವಣೆ ವೇಳೆ ನನ್ನ ಪರವಾಗಿ ಕೆಲಸ ಮಾಡಿದವರೂ ಇದ್ದಾರೆ, ಮಾಡದವರೂ ಇದ್ದಾರೆ. ಹಾಗೆಂದು ನನ್ನನ್ನು ದೂರ ಮಾಡಿಲ್ಲ. ಆಗ ತೋರಿದ ಪ್ರೀತಿ, ವಿಶ್ವಾಸ ಈಗಲೂ ತೋರುತ್ತಾರೆ. ಯಾವ ಜನಾಂಗದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ, ತಳಮಟ್ಟದಲ್ಲಿ ಶಿಕ್ಷಣ ಗಟ್ಟಿಯಾಗಿರುತ್ತದೆಯೋ ಆಗ ಹೃದಯವೈಶಾಲ್ಯತೆ ಬರುತ್ತದೆ. ಐಎಎಸ್ ಪ್ರತಿಷ್ಠೆಯಲ್ಲ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಧಿಕಾರಕ್ಕೆ ಬರಬೇಕು. ಅವರು ಉನ್ನತ ಅಧಿಕಾರಿಗಳಾಗಬೇಕು ಎಂಬ ಕನಸು ನನ್ನದು ಎಂದು ಹೇಳಿದರು.
ಕರ್ನಾಟಕದಲ್ಲಿ ಹೆಚ್ಚು ಬ್ಯಾಂಕ್ ಮ್ಯಾನೇಜರ್, ರೈಲು ಅಧಿಕಾರಿಗಳಿರುವುದು ಉತ್ತರ ಭಾರತದವರು. ಯಾವುದೇ ಕಾರಣಕ್ಕೂ ಅಲ್ಪತೃಪ್ತರಾಗಬೇಡಿ. ಯುಪಿಎಸ್ ಸಿ ಕೋಚಿಂಗ್ ಅನ್ನು ಇನ್ ಸೈಟ್ಸ್ ಐಎಎಸ್ ಸಂಸ್ಥೆ ನೀಡುತ್ತದೆ. ಐಎಎಸ್, ಐಪಿಎಸ್ ಆಗದಿದ್ದರೆ ಏನಂತೆ. ಸರ್ಕಾರದ ಕೆಲಸ ಇಲ್ಲವೇ ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಕನ್ನಡಿಗರು ಬರುವಂತಾಗಬೇಕು ಎಂದು ವಿನಯ್ ಕುಮಾರ್ ಪ್ರತಿಪಾದಿಸಿದರು.
ಜಗಳೂರು ಶಾಸಕ ಚಿಕ್ಕಮ್ಮನಹಟ್ಟ ಬಿ. ದೇವೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲರು ಮತ್ತು ಕಾರ್ಯಕ್ರಮದ ಸಂಚಾಲಕ ಎಂ. ಒ. ಮಧು, ಅಕ್ಷರ ಮಾಲ ಸರಣಿ ನಿರ್ದೇಶಕ ಪ್ರಸನ್ನ ಕುಮಾರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಡಿ. ಓ. ಸುರೇಶ್ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.