UDDIKSHANA KANNADA NEWS/ DAVANAGERE/ DATE:07-10-2023
ದಾವಣಗೆರೆ (Davanagere): ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ ವಂಚನೆ ಮಾಡಿದ್ದ ಅಂತರ್ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು, 40 ಲಕ್ಷ ರೂಪಾಯಿ ಜಫ್ತಿ ಮಾಡಿದ್ದು, ಬಂಧಿತರು ದೇವರಿಗೆ 4.50 ಲಕ್ಷ ರೂಪಾಯಿ ಖರ್ಚು ಮಾಡಿದ ವಿಚಾರ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ:
Davanagere SSM Big Relief: ವನ್ಯಜೀವಿ ಪತ್ತೆ ಪ್ರಕರಣದ ಎಫ್ ಐ ಆರ್ ರದ್ದುಗೊಳಿಸಿದ ಕೋರ್ಟ್: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿ ಏಳು ಮಂದಿ ನಿರಾಳ
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು, ಆರೋಪಿಗಳು ಸಿಕ್ಕಿ ಬೀಳದಿರಲು ದೇವರ ಪೂಜೆ ಹಾಗೂ ಐಶರಾಮಿ ಜೀವನ ನಡೆಸಲು ನಾಲ್ಕೂವರೆ ಲಕ್ಷ ರೂಪಾಯಿ
ಖರ್ಚು ಮಾಡಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ಮನೆಯಲ್ಲಿಟ್ಟಿದ್ದ ಹಣ ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಾವನಪುರ ಗ್ರಾಮದ ಪಿ. ಸಂದೀಪ ಹಾಗೂ ಹರಪನಹಳ್ಳಿ ತಾಲೂಕಿನ ಚಿರಸ್ಥಹಳ್ಳಿ ಗ್ರಾಮದ ಈಶ್ವರಪ್ಪನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಘಟನೆ ಹಿನ್ನೆಲೆ ಏನು…?
ಸೆ. 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಗ್ರಾಮದ ಗುತ್ತಿಗೆದಾರ ಬಿ. ಆರ್. ಗೋವರ್ಧನ್ ಅವರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪರಿಚಯ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿ
ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಬೇಕಾದರೆ ನಿಮಗೆ ಕೊಡಿಸುತ್ತೇನೆ. ಸ್ಯಾಂಪಲ್ ಕೋಡಿಸುತ್ತೆನೆ ಬಂದು ನೋಡಿಕೊಂಡು ಹೋಗಿ ಎಂದು ಸಂದೀಪ ಹೇಳಿದ್ದಾನೆ. ಆ ಬಳಿಕ ಮಾತಿನಂತೆ ಹೇಳಿದ ಸ್ಥಳಕ್ಕೆ ಬಂದು ವಂಚಕರು ನೀಡಿದ ಅಸಲಿ ಬಂಗಾರ ಬಿಲ್ಲೆಗಳನ್ನು ಪಡೆದು ಪರಿಶಿಲಿಸಲಾಗಿದೆ. ಅಸಲಿ ಬಂಗಾರ ಖಚಿತ ಪಡಿಸಿಕೊಂಡು ವ್ಯವಹಾರ ಮಾತನಾಡಿದ್ದಾರೆ.
ಬಳಿಕ 60 ಲಕ್ಷ ರೂಪಾಯಿ ಕೊಡಬೇಕೆಂದು ಆರೋಪಿಗಳು ಹೇಳಿದ್ದಾರೆ. ಎರಡೂವರೆ ಕೆಜಿ ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ ಮೋಸ ಮಾಡಿದ್ದರು. ಈ ಬಗ್ಗೆ ಚನ್ನಗಿರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಮತ್ತು ಹಣ ಪತ್ತೆಗಾಗಿ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಮತ್ತು ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿ. ನಿರಂಜನರ ನೇತೃತ್ವದದಲ್ಲಿ ಪಿ.ಎಸ್.ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಅ. 6ರಂದು ಪತ್ತೆ ಕಾರ್ಯದಲ್ಲಿ ತೊಡಗಿ ಆರೋಪಿತರಾದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಾವನಪುರ ಗ್ರಾಮದ ಪಿ. ಸಂದೀಪ ಹಾಗೂ ಹರಪನಹಳ್ಳಿ ತಾಲೂಕಿನ ಚಿರಸ್ಥಹಳ್ಳಿ ಗ್ರಾಮದ ಈಶ್ವರಪ್ಪ ಎಂಬುವವರನ್ನು ಬಂಧಿಸಿದೆ.
ಕುಮಾರ್ ಹಾಗೂ ಮುದುಕಪ್ಪ ಎಂಬ ಹೆಸರಿನಲ್ಲಿ ಗೋವರ್ಧನ್ ಅವರನ್ನು ಪರಿಚಯಿಸಿಕೊಂಡಿದ್ದರು. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸಂದೀಪ ಹಾಗೂ ಈಶ್ವರಪ್ಪ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು. ಪತ್ತೆ ಕಾರ್ಯಾಚರಣೆಯಲ್ಲಿದ್ದ ಚನ್ನಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಬಿ. ನಿರಂಜನ, ಪಿ.ಎಸ್.ಐ ಗುರುಶಾಂತಯ್ಯ, ಎ.ಎಸ್.ಐ ಶಶಿಧರ್, ಸಂತೆಬೆನ್ನೂರು ವೃತ್ತ ಕಛೇರಿಯ ರುದ್ರೇಶ್ ಎಂ. ಹಾಗೂ ಚನ್ನಗಿರಿ ಠಾಣೆಯ ಸಿಬ್ಬಂದಿಯಾದದ ಬೀರೇಶ್ವರ ಪುಟ್ಟಕ್ಕನವರ್, ನರೇಂದ್ರಸ್ವಾಮಿ, ಚಂದ್ರಚಾರಿ ಅವರನ್ನು ಎಸ್ಪಿ ಅಭಿನಂದಿಸಿದರು.
ಗೋಷ್ಠಿಯಲ್ಲಿ ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಹಾಜರಿದ್ದರು.