SUDDIKSHANA KANNADA NEWS/ DAVANAGERE/DATE:01_09_2025
ದಾವಣಗೆರೆ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ನೀಡಬೇಕು. ಉನ್ನತ ಹುದ್ದೆ ಅಲಂಕರಿಸಲು ಸತತ ಪರಿಶ್ರಮ, ಕಠಿಣ ಅಭ್ಯಾಸ, ಕಷ್ಟಪಟ್ಟು ಓದಿದರೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಂಭೀರವಾದ ಆಲೋಚನೆ ಮಾಡುವ ಅಗತ್ಯತೆ ಇದೆ ಎಂದು ಮಿಲ್ಲತ್ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಅಲಹಾಜ್ ಸೈಯದ್ ಸೈಫುಲ್ಲಾ ಅವರು ಸಲಹೆ ನೀಡಿದರು.
READ ALSO THIS STORY: ದೇಣಿಗೆ ನೀಡುವುದರಲ್ಲಿ ಡಾ. ಶಾಮನೂರು ಕುಟುಂಬವು ಸದಾ ಮುಂದಿದೆ: ಸಾಣೆಹಳ್ಳಿ ಶ್ರೀಗಳು
ನಗರದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಡಾ. ಜಾಕೀರ್ ಹುಸೇನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಎಎಸ್, ಐಪಿಎಸ್, ಕೆಎಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ. ಹಗಲಿರುಳು ಓದಿ. ಉನ್ನತ ಹುದ್ದೆಗೆ ಏರುತ್ತೇನೆಂಬ ಹಠ ಇದ್ದರೆ ಸಾಧನೆ ಕಷ್ಟವಾಗದು. ಪೋಷಕರು ಮಕ್ಕಳಿಗೆ ಇಂಥ ಪರೀಕ್ಷೆಗಳಿಗೆ ತಯಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದು ಸಲಹೆ ನೀಡಿದರು.
ಕೇವಲ ಪದವಿ ಪಡೆಯಲಷ್ಟೇ ಓದಿದರೆ ಸಾಲದು. ಯಾವುದೇ ವಿಷಯವಾದರೂ ಸಮಗ್ರ ಅಧ್ಯಯನ ಮತ್ತು ಸಂಶೋಧನೆ ಮಾಡಿ. ಏನೂ ಆಗುವುದಿಲ್ಲವೆಂದು ಸುಮ್ಮನೆ ಕೂರಬೇಡಿ. ಭವಿಷ್ಯದಲ್ಲಿ ಸಾಧನೆ ಮಾಡಿಯೇ ತೀರುತ್ತೇವೆಂಬ ಸಂಕಲ್ಪ ಮಾಡಿ. ಇಂದಿನಿಂದಲೇ ಸಿದ್ಧತೆ ಆರಂಭಿಸಿ. ಮುಂದಿನ ದಿನಗಳಲ್ಲಿ ಕಷ್ಟವಾಗದು ಎಂದು ಅವರು ತಿಳಿಸಿದರು.
ಪಿಯುಸಿ ಉತ್ತೀರ್ಣರಾಗಿ ಪದವಿ ತರಗತಿಗಳಿಗೆ ಬಂದಿದ್ದೀರಾ. ಉಜ್ವಲ ಭವಿಷ್ಯ ನಿಮ್ಮದು. ವಿದ್ಯಾರ್ಥಿ ಜೀವನ ಬಂಗಾರದಂಥದ್ದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ಪೋಷಕರು ಕಂಡಿರುವ ಕನಸು ನನಸು ಮಾಡಲು
ಮುಂದಾಗಿ. ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ವಿದ್ಯಾಭ್ಯಾಸ ಬಿಡಬೇಡಿ. ಕಷ್ಟಪಟ್ಟು ಓದಿದರೆ ಉನ್ನತ ಹುದ್ದೆಗಳು ಭವಿಷ್ಯದಲ್ಲಿ ನಿಮ್ಮನ್ನು ಅರಸಿ ಬಂದೇ ಬರುತ್ತವೆ ಎಂದು ಸೈಯದ್ ಸೈಫುಲ್ಲಾ ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ಜಂಟಿ ಕಾರ್ಯದರ್ಶಿ ಸೈಯದ್ ಖಾಲಿದ್ ಅಹಮದ್, ಆಡಳಿತಾಧಿಕಾರಿ ಸೈಯದ್ ಅಲಿ, ಶೈಕ್ಷಣಿಕ ಆಡಳಿತಾಧಿಕಾರಿ ಸಿದ್ದಪ್ಪ, ಮಿಲ್ಲತ್ ಐಐಟಿ ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಜೂಪಿಶಾನ್, ವ್ಯವಸ್ಥಾಪಕ ಜೀಶಾನ್ ಏಲೈಟ್, ಪ್ರಾಂಶುಪಾಲರಾದ ಡಾ. ಖುಷ್ತರೀ ಬೇಗಂ, ಉಪನ್ಯಾಸಕರಾದ ಡಾ. ಅರ್ಫಿಯಾ ಫಿರ್ದೂಸ್, ಡಾ. ಅಬ್ದುಲ್ ಖಾದರ್ ಜಿಲಾನಿ, ಡಿ. ಫರ್ಹಾನ, ಕಾಶೀಫುಲ್ಲಾ ಆರ್. ಷರೀಫ್ ಮತ್ತಿತರರು ಹಾಜರಿದ್ದರು. ತೃತೀಯ ವರ್ಷದ ಸೈಯದ್ ಮಹಬೂಬ್ ಖಿರಾತ್ ಹಾಗೂ ಸುರೈಯ ಬಾನು ಅವರು ಪ್ರಾರ್ಥಿಸಿದರು. ಹೀನಾ ಕೌಸರ್ ಸ್ವಾಗತಿಸಿದರು. ಸೈಯಿದ ಫಾತಿಮ ನಿರೂಪಿಸಿದರು. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಅಂಜುಂ, ಆಫ್ರೀನ್ ಅವರು ವಂದಿಸಿದರು.