SUDDIKSHANA KANNADA NEWS/DAVANAGERE/DATE:01_11_2025
ದಾವಣಗೆರೆ: ನ್ಯಾಮತಿ ಪೊಲೀಸ್ ಠಾಣಾ ಸರಹದ್ದಿನ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಬದಿಯಲ್ಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಕೆಜಿ 154 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
READ ALSO THIS STORY: “ಎಲ್ಲೆಲ್ಲಿ ಆಸ್ತಿ ಮಾಡಿದ್ದೇನೆಂದು ನನಗೆೇ ಗೊತ್ತಿಲ್ಲ, ಕಾರ್ ಕೊಡ್ತೇನೆ ಹೋಗಿ ನೋಡ್ಕಂಡು ಬರಲಿ”: ಬಿ. ಪಿ. ಹರೀಶ್ ಗೆ ಎಸ್. ಎಸ್. ಮಲ್ಲಿಕಾರ್ಜುನ್ ಸವಾಲ್!
ಶಿವಮೊಗ್ಗ ನಗರದ ಇಲಿಯಾಸ್ ನಗರದ ವಾಸಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಖಾನ್ (27), ಕೂಲಿ ಕೆಲಸಗಾರ ಮಹಮ್ಮದ್ ಹುಸೈನ್ ರಝಾ ಯಾನೆ ಮುದಾಸೀರ್ (23), ನ್ಯಾಮತಿ ತಾಲೂಕಿನ ಹೊಸಜೋಗ ಗ್ರಾಮದ ಕೂಲಿ ಕೆಲಸ ಮಾಡುತ್ತಿದ್ದ ಶಂಕರನಾಯ್ಕ (29), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಆಟೋ ಚಾಲಕ ಜಾಫರ್ ಸಾದೀಕ್ (31), ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ಮಹಮ್ಮದ್ ರೂಹೀತ್ ಯಾನೆ ರೋಹಿತ್ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
ಖಚಿತ ವರ್ತಮಾನದ ಮೇರೆಗೆ ನ್ಯಾಮತಿ ಪೊಲೀಸ್ ನಿರೀಕ್ಷಕ ಎನ್. ಎಸ್. ರವಿ ಅವರಿಗೆ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಬದಿಯಲ್ಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕೆಲವು ಆಸಾಮಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿತ್ತು. ಸಾಲುಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯ ಎಡಭಾಗದ ಸ್ವಲ್ಪ ದೂರದ ಕಾಡಿನಲ್ಲಿ ಬೈಕ್ ಗಳನ್ನು ನಿಲ್ಲಿಸಿಕೊಂಡು ಕುಳಿತಿರುವುದು ಕಂಡುಬಂದಿತ್ತು. ಅವರನ್ನು ಸುತ್ತುವರೆದಿದ್ದು, ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಸಣ್ಣ ಪ್ಲಾಸ್ಟಿಕ್ ಕವರ್ ಗಳನ್ನು ಪರಿಶೀಲಿಸಿದಾಗ ಗಾಂಜಾ ಇದ್ದದ್ದು ಪತ್ತೆಯಾಗಿದೆ.
ಈ ಬಗ್ಗೆ ವಿಚಾರಿಸಿದಾಗ ಶಿವಮೊಗ್ಗದಿಂದ ಗಾಂಜಾ ತಂದಿದ್ದು, ನ್ಯಾಮತಿ, ಹೊನ್ನಾಳಿ ಭಾಗದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 3 ಕೆಜಿ 154 ಗ್ರಾಂನ ಅಂದಾಜು ಬೆಲೆ 3,20,000 ರೂ ಆಗಿದೆ. ಆರೋಪಿಗಳಿಂದ ಮೂರು ಮೊಬೈಲ್ ಗಳು ಮತ್ತು 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿತರು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ರವಿ ಎನ್. ಎಸ್., ನ್ಯಾಮತಿ ಪಿಎಸ್ಐ ಹೊಳಬಸಪ್ಪ, ಪೊಲೀಸ್ ಠಾಣೆ ಸಿಬ್ಬಂದಿಯವರಾದ ಮಂಜಪ್ಪ, ಮಲ್ಲೇಶಪ್ಪ, ತೀರ್ಥಪ್ಪ, ವಿಕ್ರಮ್, ಚಂದ್ರಶೇಖರ, ನಾಗರಾಜನಾಯ್ಕ, ಶಿವರಾಜ್, ಆನಂದ, ಚನ್ನೇಶ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.








