ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಹೂಡಿಕೆ ಹಾಗೂ ಹಣಕಾಸು ಸಲಹೆಗಳನ್ನು ನೀಡುವ ಮೂಲಕ 13 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ 27 ವರ್ಷದ ಫೈನಾನ್ಸ್ ಇನ್ಫ್ಲುಯೆನ್ಸರ್ ವಿ. ಹರೀಶ್ (ಫೈನಾನ್ಸ್ ವಿತ್ ಹರೀಶ್) ಚೆನ್ನೈ ಸಮೀಪದ ಖಾಸಗಿ ರೆಸಾರ್ಟ್/ವಿಲಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಹರೀಶ್ ವೀಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದು, ಟೆಕ್ ಸಿಇಒ ಜೆಸನ್ ಸ್ಯಾಮ್ಯುಯೆಲ್ ಅವರಿಂದ ಸೈಬರ್ ಬುಲ್ಲಿಯಿಂಗ್, ಮಾನಸಿಕ ಕಿರುಕುಳ ಮತ್ತು ಆದಾಯ ತೆರಿಗೆ ಸಂಬಂಧಿತ ಬೆದರಿಕೆಗಳು ಬಂದಿದ್ದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಹರೀಶ್ ಅವರ ತಂದೆ ಕಾನತ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ಜೆಮುರಿಯಾ ಇಂಕ್’ ಸಂಸ್ಥೆಯ ಸಿಇಒ ಜೆಸನ್ ಸ್ಯಾಮ್ಯುಯೆಲ್ ತಮ್ಮ ಮಗನ ಐದು ವರ್ಷದ ಶ್ರಮ ಹಾಗೂ ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪುದುಚೇರಿ ಮುಖ್ಯಮಂತ್ರಿ ಹಾಗೂ ಶಾಸಕರ ಹೆಸರು ಹೇಳಿ ಬೆದರಿಕೆ ಹಾಕಿದ್ದಲ್ಲದೆ, 3 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಕಾನತ್ತೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆನ್ಲೈನ್ ಕಿರುಕುಳ ಮತ್ತು ಬೆದರಿಕೆ: ಹರೀಶ್ ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡಿಸಿ, ಸಾರ್ವಜನಿಕವಾಗಿ ಮಾನಹಾನಿ ಮಾಡಲಾಗಿತ್ತು ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.
ಆದಾಯ ತೆರಿಗೆ ಮತ್ತು ಜೈಲು ಭೀತಿ: ಸಾವಿಗೂ ಮುನ್ನ ರೆಕಾರ್ಡ್ ಮಾಡಿದ ವೀಡಿಯೋದಲ್ಲಿ, ತಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಮತ್ತು ಐಟಿ ದಾಳಿಯ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸಿಸಲಾಗಿತ್ತು ಎಂದು ಹರೀಶ್ ಹೇಳಿದ್ದಾರೆ.
ಸಿಇಒ ಜೆಸನ್ ಸ್ಯಾಮ್ಯುಯೆಲ್ ಸ್ಪಷ್ಟನೆ: ಹರೀಶ್ ಬಳಿ SEBI ಅಥವಾ AMFI ನ ಸರಿಯಾದ ಹೂಡಿಕೆ ಸಲಹೆಗಾರ ಲೈಸೆನ್ಸ್ ಇರಲಿಲ್ಲ ಎಂಬ ವಿಷಯವನ್ನು ಮಾತ್ರ ತಾವು ಪ್ರಸ್ತಾಪಿಸಿದ್ದಾಗಿ ಮತ್ತು ಅವರ ಸಾವು ತಮಗೆ ತೀವ್ರ ಆಘಾತ ಹಾಗೂ ಬೇಸರ ತಂದಿದೆ ಎಂದು ಜೆಸನ್ ಎಕ್ಸ್ (ಟ್ವಿಟರ್) ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆ ಕುರಿತು ಹರೀಶ್ ರೆಕಾರ್ಡ್ ಮಾಡಿರುವ ವೀಡಿಯೋ, ಡಿಜಿಟಲ್ ಸಾಕ್ಷ್ಯಾಧಾರಗಳು ಹಾಗೂ ಮೆಟಾ (ಫೇಸ್ಬುಕ್/ಇನ್ಸ್ಟಾಗ್ರಾಮ್) ಖಾತೆಗಳನ್ನು ಅಮಾನತುಗೊಳಿಸಿದ ಸಂದರ್ಭಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಕುಟುಂಬಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.





Leave a comment