SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಜಿಲ್ಲೆಯಾದ್ಯತ ಪಾದಯಾತ್ರೆ ನಡೆಸಿ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದ್ದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಔಟ್ರೀಟ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಕುರಿತಂತೆ ಇಂದು ನಿರ್ಧಾರ ಘೋಷಿಸುವ ಸಾಧ್ಯತೆ ಹೆಚ್ಚಿದೆ.
ಟಿಕೆಟ್ ಕೈ ತಪ್ಪುವ ಕುರಿತಂತೆ ಆಂತರಿಕ ಮಾಹಿತಿ ಲಭಿಸಿದ ಕಾರಣ ವಿನಯ್ ಕುಮಾರ್ ಅವರಿಗೆ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಹಿತೈಷಿಗಳಿಂದ ತೀವ್ರ ಒತ್ತಡ
ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್. ಎಸ್. ಬಡಾವಣೆಯಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಕಚೇರಿ ಮುಂದೆ ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಮುದಾಯದ ಮುಖಂಡರು ಜಮಾಯಿಸಿದ್ದಾರೆ. ಸ್ಪರ್ಧೆಯಿಂದ
ಹಿಂದೆ ಸರಿಯುವುದು ಬೇಡ, ಕಣದಲ್ಲಿ ಮುಂದುವರಿಯಿರಿ ಎಂಬ ಒತ್ತಾಯ, ಒತ್ತಡ ಹೆಚ್ಚಾಗುತ್ತಿದೆ.
ಆದ್ರೆ, ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಅವರು ಇಂದು ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ, ಅಭಿಪ್ರಾಯ ಸಂಗ್ರಹದ ಬಳಿಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೋ ಅಥವಾ ಬೇಡವೋ
ಎಂಬ ಕುರಿತಂತೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪಾದಯಾತ್ರೆ ನಡೆಸಿ ಗಮನ ಸೆಳೆದಿರುವ ಹಾಗೂ ಎಐಸಿಸಿ ಮಟ್ಟದಲ್ಲಿ ಅಂತಿಮ ಕ್ಷಣದವರೆಗೂ ಟಿಕೆಟ್ ಪಟ್ಟಿಯಲ್ಲಿ ಹೆಸರಿದ್ದ ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿಸಲಾಗಿದೆ. ಎಲ್ಲಾ ಸಮುದಾಯವದರ ವಿಶ್ವಾಸ ಗಳಿಸಿರುವ ವಿನಯ್ ಕುಮಾರ್ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಗೆ ನವಚೈತನ್ಯ ತುಂಬುವ ಪ್ರಯತ್ನ ಮಾಡಿದ್ದರು. ಹಾಗಾಗಿ, ಅವರಿಗೆ ಟಿಕೆಟ್ ತಪ್ಪಿಸಿರುವುದು ಸರಿಯಲ್ಲ ಎಂದು ವಿನಯ್ ಕುಮಾರ್ ಅವರ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ: ರಘು ದೊಡ್ಡಮನಿ
ಕಾಂಗ್ರೆಸ್ ಯುವ ಮುಖಂಡ ಜಿ. ಬಿ. ವಿನಯ್ ಕುಮಾರ್ ಅವರಿಗೆ ದಾವಣಗೆರೆ ಜಿಲ್ಲಾ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿರುವುದರಿಂದ ಕಾಂಗ್ರೆಸ್ ಪಕ್ಷವು ತತ್ವ ಸಿದ್ಧಾಂತದ ವಿರುದ್ಧ ತೀರ್ಮಾನ ತೆಗೆದುಕೊಂಡಂತಾಗಿದೆ. ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿಯೂ ವಿನಯ್ ಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂಬ ಒತ್ತಾಸೆ ಇದೆ. ಜನರ ಆಗ್ರಹವೂ ಇದೆ ಎಂದು ಜಿ. ಬಿ. ವಿನಯ್ ಕುಮಾರ್ ಅಭಿಮಾನಿ ಬಳಗದ ರಘು ದೊಡ್ಡಮನಿ ಒತ್ತಾಯಿಸಿದ್ದಾರೆ.
ವಿನಯ್ ಕುಮಾರ್ ಅವರನ್ನು ಭವಿಷ್ಯದ ದಿನಗಳಲ್ಲಿ ಬಹುದೊಡ್ಡ ಜನ ಸಮುದಾಯ ಹೊಂದಿದಂತಹ ಯುವನಾಯಕನನ್ನು ಕಡೆಗಣಿಸಿರುವುದು ಬಹುದೊಡ್ಡ ವ್ಯಕ್ತಿಯನ್ನು ಪಕ್ಷ ಕಳೆದುಕೊಂಡಂತಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಬೇಸರ ವ್ಯಕ್ತಪಡಿಸಿದರು.
ವಿನಯ್ ಕುಮಾರ್ ಹೋರಾಟ ಅವರ ಆಶಯ ಅವರ ಅಭಿವೃದ್ಧಿಯ ಕನಸು ಬಹುದೊಡ್ಡದಾಗಿದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪಕ್ಷ ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವಿಚಾರವಾಗಿ ಕ್ಷೇತ್ರದ ಜನರ ಭಾವನೆ ಸಿದ್ದಾಂತ ಮಾರಾಟವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಗೆಲ್ಲುವ ಕ್ಷೇತ್ರದಲ್ಲಿ ದಾವಣಗೆರೆ ಒಂದು ಕೂಡ ಆಗಿತ್ತು. ದಾವಣಗೆರೆ ಗೆಲುವು ಕಳೆದು ಕೊಳ್ಳಬೇಕಾಗುತ್ತದೆ ವಿನಯ್ ಕುಮಾರ್ ಟಿಕೆಟ್ ತಪ್ಪಿಸಿದರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಒತ್ತಡಕ್ಕೆ ಮಣಿಯಬಾರದು. ವಿನಯ್ ಕುಮಾರ್ ಗೆ ಟಿಕೆಟ್ ತಪ್ಪಿಸುವ ಹಿಂದೆ ಕಾಣದ ಕೈ ಕೆಲಸ ಮಾಡಿದೆ ಎಂದರು.
ದಾವಣಗೆರೆ ಜಿಲ್ಲೆಯ ಹಿಂದುಳಿದ ವರ್ಗದವರ ಶೋಷಿತರ ದೀನದಲಿತರ ಹಾಗೂ ಅಲ್ಪಸಂಖ್ಯಾತರು ಸಾಕಷ್ಟು ಬಾರಿ ಶಾಮನೂರು ಕುಟುಂಬಕ್ಕೆ ಪ್ರತಿ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಕೊಟ್ಟಿದ್ದಕ್ಕೆ ಅವರು ಗೆದ್ದು ಜಿಲ್ಲೆ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ ಶಾಮನೂರು ಅವರಿಗೆ ಕೊಡುಗೆ ಕೂಡ ಕಾಂಗ್ರೆಸ್ ಪಕ್ಷಕ್ಕೆ ಅಪಾರ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗದ ವಿದ್ಯಾವಂತ ಸರಳ ಜೀವಿ ಯುವಕರ ಕಣ್ಮಣಿ ವಿನಯ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿನ್ನಾಗಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ದೇಶ ಸೇವೆ ಮಾಡುವ ಅವಕಾಶ ಕೊಡಲು ಬಯಸುತ್ತೇವೆ ಈ ಬಾರಿ ನಮ್ಮ ಜಿಲ್ಲೆಗೆ ಜಾತಿ ಮತ ಭೇದವಿಲ್ಲದೆ ಸರಳ ಸಜ್ಜನಿಕೆಯ ವಿನಯ್ ಕುಮಾರ್ ಜಿ ಬಿ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಾಮಾಜಿಕ ನ್ಯಾಯದ ಪರವಾಗಿ ನಂಬಿದ್ದೆವು. ಆದ್ರೆ, ನಮಗೆ ಬಂದಿರುವ ಮಾಹಿತಿ ಪ್ರಕಾರ ಟಿಕೆಟ್ ಕೈ ತಪ್ಪುತ್ತದೆ ಎಂದು ಗೊತ್ತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಒಂದು ವರ್ಷದಿಂದ ವಿನಯ್ ಕುಮಾರ್ ಅವರು ಸಂಚಾರ ಮಾಡಿ ಜನರ ಪ್ರೀತಿ, ಗಳಿಸಿದ್ದರು. ಸರ್ವೆಯೂ ಸಹ ವಿನಯ್ ಕುಮಾರ್ ಪರ ಬಂದಿತ್ತು. ಇನ್ನೆರಡು ದಿನಗಳಲ್ಲಿ ವಿನಯ್ ಕುಮಾರ್ ಅವರು ದಾವಣಗೆರೆಗೆ ಬರಲಿದ್ದು, ಅವರು ಬಂದ ಬಳಿಕ ಚರ್ಚಿಸಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೋ ಬೇಡವೋ ಎಂಬ ಬಗ್ಗೆ ಅವರೇ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ರಾತ್ರೋರಾತ್ರಿ ವಿನಯ್ ಕುಮಾರ್ ಹೆಸರು ಬದಲಾಗಿದೆ ಎಂಬ ವದಂತಿಯಿಂದ ಎಲ್ಲಾ ಹಿಂದುಳಿದ ಶೋಷಿತ ವರ್ಗಗಳ ಸಮುದಾಯಗಳನ್ನು ಧಿಕ್ಕರಿಸಿದಂತೆ ಪಕ್ಷ ಕಾಣುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಮೇಶ್ ಕೆ., ಮಹಮ್ಮದ್, ಬಸನ ಗೌಡ, ಹೇಮಂತ್ ಕುಮಾರ, ರಂಗಸ್ವಾಮಿ, ಪರಶುರಾಮಪ್ಪ, ವಿಜಯ್ ಕುಮಾರ್, ಶಿವಕುಮಾರ ಸಾಂಬಳೆ ಸೇರಿದಂತೆ ಮತ್ತಿತರರು ಹಾಜರಿದ್ದರು.