SUDDIKSHANA KANNADA NEWS/ DAVANAGERE/ DATE:27-01-2025
ದಾವಣಗೆರೆ: ಇಂಡೋನೇಷ್ಯಾದ ಬಾಲಿ ನಗರದ ಆಸ್ಟನ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ 47ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕೋತ್ಸವದಲ್ಲಿ, ನಮನ ಅಕಾಡೆಮಿ ತಂಡದ ಗುರು ವಿದುಷಿ ಮಾಧವಿ ಡಿ.ಕೆ. ಮತ್ತು ಅವರ ಶಿಷ್ಯರು ಕುವೆಂಪು ರಚನೆಯ ಬಾರಿಸು ಕನ್ನಡ ಡಿಂಡಿಮವ ಹಾಗೂ ಬಾ ಫಾಲ್ಗುಣ ರವಿ ದರುಶನಕ್ಕೆ ಸಾಹಿತ್ಯಕ್ಕೆ ಲಘು ಶಾಸ್ತ್ರೀಯ ಮತ್ತು ಆಧುನಿಕ ನೃತ್ಯಗಳನ್ನು ಮನಮೋಹಕವಾಗಿ ಪ್ರದರ್ಶಿಸಿದರು.
ಬಾಲಿಯ ಸ್ಥಳೀಯ ಕಲಾವಿದರ ಸಾಂಪ್ರದಾಯಿಕ ನೃತ್ಯ ಬರೊಂಗ್ ಪ್ರೇಷಕರನ್ನು ಮಂತ್ರಮುಗ್ಧಗೊಳಿಸಿತು. ಪೂರ್ಣಿಮಾ ಸತೀಶ್ ಮತ್ತು ಆರತಿ ಸುರೇಶ್ ಅವರ ನೃತ್ಯ, ಪ್ರೊ. ಬಿಂಡಿಗ ನವಿಲೇ ಭಗವಾನ್ ಅವರ ಕವನ ವಾಚನ ಮತ್ತು ಪ್ರಶಾಂತ್ ಮೈಸೂರು ಅವರ ವಿಶ್ವ ಸೌಹಾರ್ದತೆ ಕುರಿತ ಸಂದೇಶ ಚೆನ್ನಾಗಿ ಮೂಡಿ ಬಂದವು. ಈ ಉತ್ಸವವನ್ನು ಇಂಟರ್ನ್ಯಾಷನಲ್ ಕಲ್ಚರಲ್ ಫಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಆಯೋಜಿಸಿತ್ತು.
ವಿಶೇಷ ಆಮಂತ್ರಿತರಾದ ಇಂಡೋನೇಷ್ಯಾ ಬಾಲಿಯ ಬಿಜಿನೆಸ್ ಅಡ್ವೈಸರ್ ನ್ಯೂ ಮ್ಯಾನ್ ಸ್ರಿ ಮಾತನಾಡಿ, ಇಂಡೋನೇಷಿಯಾ ಮತ್ತು ಇಂಡಿಯಾದ ಬಾಂಧವ್ಯಕ್ಕೆ ಬಹಳ ಪುರಾತನವಾದ ಇತಿಹಾಸವಿದೆ. ಮತ್ತು ಈ ಎರಡು
ದೇಶಗಳ ನಡುವಿನ ಕಲೆ ಮತ್ತು ಸಂಸ್ಕೃತಿಗಳಲ್ಲಿ ಹೆಚ್ಚಿನ ಸಾಮ್ಯತೆ ಕಂಡು ಬರುತ್ತದೆ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಡಾ. ಡಿ. ಎಸ್. ವಿಶ್ವನಾಥ್ ಮಾತನಾಡಿ ನಮ್ಮ ಜೀವನದಲ್ಲಿ ತಂದೆ ತಾಯಿ ಶಿಕ್ಷಕರು ಆದಿ ಗುರುಗಳಾಗಿರುತ್ತಾರೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳು ಕಾರಣ ಗುರುಗಳಾಗುತ್ತಾರೆ ಮತ್ತು ಬದುಕಿಗೆ ಪರಿಪೂರ್ಣತೆಯ ಮಾರ್ಗದರ್ಶನ ಕೊಡುವ ಹಿತೈಷಿಗಳು ಆದ್ಯ ಗುರುಗಳಾಗುತ್ತಾರೆ ಎಂದರು.
ಈ ಉತ್ಸವದಲ್ಲಿ ವಿವಿಧ ದೇಶಗಳಿಂದ ಭಾಗವಹಿಸಿದ ಕಲೆಗಳ ಮೇಳದ ಮಧ್ಯೆ, ನಮನ ಅಕಾಡೆಮಿಯ ಪ್ರದರ್ಶನವು ಭಾರತೀಯ ಸಂಸ್ಕೃತಿಯ ವೈಭವವನ್ನು ಹೊಸ ಮಟ್ಟಕ್ಕೆ ಏರಿಸಿತು. ಅಂತರರಾಷ್ಟ್ರೀಯ ಹಿನ್ನಲೆಯಲ್ಲಿ ಈ ಪ್ರದರ್ಶನವು
ಭಾರತೀಯ ಕಲೆ ಮತ್ತು ಶಾಂತಿಯ ಸಂದೇಶವನ್ನು ಹಬ್ಬಿಸಲು ಪ್ರಮುಖ ಪಾತ್ರ ವಹಿಸಿತು.
ಈ ಅವಕಾಶವು ನಮನ ಅಕಾಡೆಮಿಯು ತಮ್ಮ ಪ್ರತಿಭೆಯನ್ನು ವಿಶ್ವದ ವೇದಿಕೆಗೆ ತರುವುದರಲ್ಲಿ ಒಂದು ಮಹತ್ತರ ಸಾಧನೆಯಾಗಿದ್ದು, ಸಾಂಸ್ಕೃತಿಕ ವಿನಿಮಯದ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿತು.