SUDDIKSHANA KANNADA NEWS/ DAVANAGERE/ DATE:24-08-2023
ದಾವಣಗೆರೆ (Davanagere): ಮನೆಯಿಂದ ಹೊರ ಬರಲು ಮಕ್ಕಳಷ್ಟೇ ಅಲ್ಲ, ದೊಡ್ಡವರಲ್ಲೂ ಭಯ ಕಾಡುತಿತ್ತು. ರಸ್ತೆಯಲ್ಲಿ ಕಾಲಿಟ್ಟರೆ ಸಾಕು ರೌಡಿಯಂತೆ ಎಗರಿ ಎಗರಿ ಬರುತಿತ್ತು ಮುಷ್ಯಾ. ಮಕ್ಕಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿತ್ತು.
ಈ ಸುದ್ದಿಯನ್ನೂ ಓದಿ:
Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!
ದಾವಣಗೆರೆ (Davanagere) ತಾಲೂಕಿನ ಹಳೇ ಕುಂದುವಾಡ ಗ್ರಾಮದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಮುಷ್ಯಾ ಕೊನೆಗೂ ಸೆರೆ ಸಿಕ್ಕಿದೆ. ಆಪರೇಷನ್ ಹೇಗಿತ್ತು ಎಂಬುದೇ ರೋಚಕ. ಕಾಟ ಕೊಡುವ ಮುಷ್ಯಾಗಳು ಸುಲಭವಾಗಿ ಲಾಕ್ ಆಗೋದು ತೀರಾ ಕಡಿಮೆ. ಜನರಿಗೂ ಆಟವಾಡಿಸುತ್ತವೆ. ಬೋನಿನೊಳಗೂ ಬೀಳೋಲ್ಲ. ಅರಣ್ಯ ಇಲಾಖೆಯವರ ಕಾರ್ಯಾಚರಣೆಗೂ ಬಗ್ಗುವುದಿಲ್ಲ ಮುಷ್ಯಾಗಳು. ಆದ್ರೆ, ಈ ಮುಷ್ಯಾ ಹಿಡಿಯಲು ಮಾಸ್ಟರ್ ಪ್ಲಾನ್ ಮಾಡಲಾಗಿತ್ತು.
ಬೈಕ್ ಸವಾರರೇ ಟಾರ್ಗೆಟ್ ಯಾಕೆ…?
ಶಾಲೆಗೆ ಹೋಗಲು ಮಕ್ಕಳು ಹೆದರುವಂತಾಗಿತ್ತು. ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಪೋಷಕರೂ ಹಿಂದೆ ಮುಂದೆ ನೋಡುವಂತಾಗಿತ್ತು. ಬೈಕ್ ನಲ್ಲಿ ಹೋಗುವಾಗ ಎಲ್ಲಿ ದಾಳಿ ಮಾಡಿಬಿಡುತ್ತೆ ಎಂಬ ಆತಂಕವೂ ಹೆಚ್ಚಾಗಿತ್ತು.
ಬೈಕ್ ನಲ್ಲಿ ಹೋಗುವವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ ಮುಷ್ಯಾ ಅಟ್ಯಾಕ್ ಮಾಡಿಬಿಡುತಿತ್ತು. ಸವಾರ ಇಲ್ಲವೇ ಸವಾರನ ಹಿಂಬದಿ ಕುಳಿತಿದ್ದವರ ಹೆಗಲ ಮೇಲೆ ಕುಳಿತು ಕಚ್ಚಿ ಕ್ಷಣಮಾತ್ರದಲ್ಲಿ ಓಡಿ ಹೋಗುತಿತ್ತು. ಮಾತ್ರವಲ್ಲ, ಮುಷ್ಯಾ ದಾಳಿಗೆ ಒಳಗಾದವರು ಗಾಯಗೊಂಡಿದ್ದಾರೆ ಕೂಡ.
ರೌಡಿ ಮುಷ್ಯಾ:
ಇನ್ನು ಬೈಕ್ ಕಂಡರೆ ಮುಷ್ಯಾಗೆ ಸಿಟ್ಟು ಬರುತಿತ್ತು. ಮನೆ ಮುಂದೆ, ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರೆ ಓಡಿ ಬಂದು ಬೈಕ್ ಬೀಳಿಸಿ ಹೋಗುತಿತ್ತು. ಈ ಮುಷ್ಯಾ ಕಾಟಕ್ಕೆ ಜನರು ಬೇಸತ್ತು ಹೋಗಿದ್ದರು. ಒಂದೆಡೆ ಜನರ ಮೇಲೆ ದಾಳಿ, ಮತ್ತೊಂದೆಡೆ
ನಿಲ್ಲಿಸಿದ್ದ ಬೈಕ್ ಬೀಳಿಸುವ ಮೂಲಕ ನಿದ್ದೆ ಕೆಡಿಸಿತ್ತು.
Davanagere ಅರಣ್ಯ ಇಲಾಖೆ ಆಪರೇಷನ್:
ದಾವಣಗೆರೆ(Davanagere)ಯ ಹಳೇ ಕುಂದುವಾಡ ಗ್ರಾಮದಲ್ಲಿ ಮುಷ್ಯಾ ಕಾಟದ ಬಗ್ಗೆ ಅರಣ್ಯ ಇಲಾಖೆಗೆ ದೂರು ಕೊಡಲಾಗಿತ್ತು. ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಶಶಿಧರ್ ಅವರ ಗಮನಕ್ಕೂ ತರಲಾಯಿತು. ದೂರು ಸಹ ಕೊಡಲಾಯಿತು. ಜನರ ಒತ್ತಾಯದ ಮೇರೆಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಆಪರೇಷನ್ ಗೆ ಇಳಿಯಿತು.
ನಾಲ್ಕೈದು ದಿನಗಳ ಬಳಿಕ ಸೆರೆಯಾಯ್ತು ಮುಷ್ಯಾ:
ಕಳೆದ ನಾಲ್ಕೈದು ದಿನಗಳ ಹಿಂದೆ ಮುಷ್ಯಾ ಸೆರೆಗೆ ಬೋನು ಇಡಲಾಗಿತ್ತು. ಬಾಳೆ ಹಣ್ಣು, ಬಿಸ್ಕತ್ ಇಟ್ಟು ಮುಷ್ಯಾ ಸೆರೆ ಹಿಡಿಯಲು ಯೋಜನೆ ರೂಪಿಸಲಾಯಿತು. ಬಾಳೆಹಣ್ಣು ತಿನ್ನುತ್ತಾ ಬೋನಿನೊಳಗೆ ಮುಷ್ಯಾ ಕುಳಿತಿತ್ತು. ಇನ್ನೇನೂ ಸೆರೆ ಹಿಡಿಯಬೇಕು ಎನ್ನುವಷ್ಟರಲ್ಲಿ ಪರಾರಿಯಾಗಿತ್ತು.
ಕಿಲಾಡಿ ಮುಷ್ಯಾ ಸೆರೆಗೆ ಅರಣ್ಯ ಇಲಾಖೆಯು ನಾಲ್ವರು ಸಿಬ್ಬಂದಿಯ ತಂಡ ಕಳುಹಿಸಿತ್ತು. ಒಮ್ಮೆ ಎಸ್ಕೇಪ್ ಆಗಿದ್ದ ಮುಷ್ಯಾ ಎಚ್ಚೆತ್ತುಕೊಂಡು ಇತ್ತ ತಲೆ ಹಾಕಿರಲಿಲ್ಲ. ಹಾಗಾಗಿ, ಬೇರೊಂದು ಸ್ಥಳದಲ್ಲಿ ಬೋನು ಇಟ್ಟು ಮತ್ತೆ ಹಣ್ಣುಗಳನ್ನು ಇಟ್ಟು ಜೊತೆಗೆ ಕನ್ನಡಿ ಇಡಲಾಗಿತ್ತು. ತನ್ನ ಹಿಡಿಯಲು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂಬ ಅರಿವು ಇಲ್ಲದೇ ಹಣ್ಣು ತಿನ್ನುತ್ತಿದ್ದ ಮುಷ್ಯಾನನ್ನು ಬೋನ್ ನಲ್ಲಿ ಲಾಕ್ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಥ್ಯಾಂಕ್ಸ್ ಹೇಳಿದ ಗ್ರಾಮಸ್ಥರು:
ಮುಷ್ಯಾ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಹಳೇ ಕುಂದುವಾಡ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಷ್ಯಾ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದರು. ಸೆರೆ ಸಿಕ್ಕ ಮುಷ್ಯಾನನ್ನು ಕಾಡಿಗೆ ಬಿಡಲಾಗುತ್ತದೆ
ಎಂದು ಅಧಿಕಾರಿಗಳು ತಿಳಿಸಿದ್ದಾರೆ.