SUDDIKSHANA KANNADA NEWS/ DAVANAGERE/ DATE:02-01-2025
ಬೆಂಗಳೂರು: ಕಳೆದ ಹತ್ತು ದಿನಗಳಿಂದ ಉತ್ತರ ಭಾರತದಲ್ಲಿನ ಪೂರ್ವ ನಿಗದಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಇಂದು ಬೆಂಗಳೂರಿಗೆ ಆಗಮಿಸಿದರು.
ತಕ್ಷಣವೇ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆಯ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಆಗಮಿಸಿ ತಮ್ಮ ತಂದೆಯ ಆರೋಗ್ಯದ ಬಗ್ಗೆ ಶ್ರೀ ಜಗದ್ಗುರುಗಳವರಿಗೆ ಮಾಹಿತಿ ನೀಡಿದರು.
ತಂದೆ ಶಾಮನೂರು ಶಿವಶಂಕರಪ್ಪರವರು ತಮ್ಮ ದರ್ಶನಕ್ಕೆ ಹಲವಾರು ಬಾರಿ ಅಪೇಕ್ಷಿಸುತ್ತಿರುವುದನ್ನು ತಿಳಿಸಿದ ತಕ್ಷಣವೇ ಶ್ರೀ ಜಗದ್ಗುರುಗಳವರು ಖುದ್ದಾಗಿ ತಾವೇ ಆಸ್ಪತ್ರೆಗೆ ದಯಮಾಡಿಸಿ ಶಾಮನೂರು ಶಿವಶಂಕರಪ್ಪರವರ ಕುಶಲೋಪರಿ ವಿಚಾರಿಸಿದರು. ಶ್ರೀ ಜಗದ್ಗುರುಗಳವರು ದರ್ಶನದಿಂದ ಆನಂದತುಂದಿಲರಾದ ಶಿವಶಂಕರಪ್ಪನವರು ಪೂಜ್ಯರಿಗೆ ಭಕ್ತಿ ಪ್ರಣಾಮಗಳನ್ನು ಸಮರ್ಪಿಸಿದರು.
ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಶ್ವಾಸಕೋಶದಲ್ಲಿ ಚಿಕ್ಕ ಆರೋಗ್ಯ ಸಮಸ್ಯೆ ಆದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೈದ್ಯರ ಸಲಹೆಯಂತೆ ವಿಶ್ರಾಂತಿಯಲ್ಲಿರುವುದನ್ನು ಇತ್ತೀಚೆಗೆ ಮಾಹಿತಿ ಪಡೆದಿದ್ದ ಶ್ರೀ ಜಗದ್ಗುರುಗಳವರು ಮುಂಬೈಯಿಂದ ಇಂದು ಬೆಂಗಳೂರಿಗೆ ದಯಮಾಡಿಸಿದ ಕೆಲವೇ ಗಂಟೆಗಳಲ್ಲಿ ಮಣಿಪಾಲ್ ಆಸ್ಪತ್ರೆಗೆ ದಯಮಾಡಿಸಿ ಶಾಮನೂರು ಶಿವಶಂಕರಪ್ಪರವರ ಸಂಪೂರ್ಣ ಆರೋಗ್ಯದ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿ ಪಡೆದರು.
ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ವೀರಶೈವ ಮಹಾಸಭಾ ಕರ್ನಾಟಕ ರಾಜ್ಯದ ಅಧ್ಯಕ್ಷ ಶಂಕರ್ ಬಿದರಿ ಸೇರಿದಂತೆ ಹಲವು ಗಣ್ಯರು, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರು ಹಾಜರಿದ್ದರು.