SUDDIKSHANA KANNADA NEWS/ DAVANAGERE/ DATE-03-05-2025
ದಾವಣಗೆರೆ: ಭತ್ತ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಮೇ ತಿಂಗಳ ಅಂತ್ಯದವರೆಗೆ ವಿಸ್ತರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ರೈತ ಒಕ್ಕೂಟವು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.
ನಗರದ ಪಿ. ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಮಾವಣೆಗೊಂಡ ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಪ್ರಾರಂಭವಾಗಿದ್ದು, ದರ ಬಹಳ ಕಡಿಮೆ ಇದೆ. ಭತ್ತದ ಭತ್ತದ ದರ ಕುಸಿತದಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ ಮತ್ತು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ದರ ಕುಸಿತವಾದಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಏಪ್ರಿಲ್ 15 ರಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ ಪ್ರಭಾರ ಜಿಲ್ಲಾಧಿಕಾರಿಯವರು, ಮಾರ್ಚ್ 20 ರಿಂದ ಏಪ್ರಿಲ್ 25 ರವರೆಗೆ ಭತ್ತ ಬೆಳೆದ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಮೇ ತಿಂಗಳ (ದಿನಾಂಕ:31.05.2025)
ಅಂತ್ಯದವರೆಗೆ ಖರೀದಿ ಪ್ರಕ್ರಿಯೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ತೀರ್ಮಾನವನ್ನು ಜಿಲ್ಲಾ ರೈತರ ಒಕ್ಕೂಟ ಸ್ವಾಗತಿಸುತ್ತದೆ. ಆದರೆ ನೋಂದಾಣಿಗಾಗಿ ನೀಡಿರುವ ಕೊನೆ ದಿನಾಂಕ:25.04.2025 ವನ್ನು ಮೇ ತಿಂಗಳ
ಅಂತ್ಯದವರೆಗೆ ಮುಂದುವರಿಸಬೇಕು ಎಂದು ಒತ್ತಾಯಿಸುತ್ತದೆ. ಇಲ್ಲವಾದರೆ ರೈತರಿಗೆ ಅನ್ಯಾಯ-ಮೋಸ ಮಾಡಿದಂತಾಗುತ್ತದೆ ಎಂದು ಹೇಳಿದರು.
ಭತ್ತದ ಕೊಯ್ಲು ಈಗ ಪ್ರಾರಂಭವಾಗಿದ್ದು ಮಾರುಕಟ್ಟೆಗೆ ಅವಕವಾಗುತ್ತಿದೆ. ಆದರೆ ಬೆಲೆ ಕಡಿಮೆ ಇದೆ. ಖರೀದಿ ಕೇಂದ್ರದಲ್ಲಿ ನೋಂದಣಿ ದಿನಾಂಕ25.04.2025ಕ್ಕೆ ಮುಗಿದು ಹೋಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ವಂಚನೆ ಮಾಡಿದಂತಾಗುತ್ತದೆ. ದಿನಾಂಕ:15.04.2025 ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಿರ್ಣಯಿಸಿದಂತೆ ತಕ್ಷಣವೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ, ಮೇ ತಿಂಗಳ ಅಂತ್ಯದವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಒಂದಕ್ಕೆ ಭತ್ತದ ದರ ರೂ.2320.00 ಇದ್ದು, ಈ ದರಕ್ಕೆ ರಾಜ್ಯ ಸರ್ಕಾರ ರೂ.500.00 ಪ್ರೋತ್ಸಾಹ ಧನ ಮಂಜೂರು ಮಾಡಿ, ಒಟ್ಟು ಕ್ವಿಂಟಾಲ್ ಒಂದಕ್ಕೆ ರೂ.2820.00 ರಂತೆ ಖರೀದಿ ಮಾಡಬೇಕು .ಒಬ್ಬ ರೈತನಿಂದ 50 ಕ್ವಿಂಟಾಲ್ ಭತ್ತ ಮಾತ್ರ ಖರೀದಿಸಬೇಕು ಎಂಬ ನಿಯಮವನ್ನು ಸಡಿಲಗೊಳಿಸಿ, ಒಬ್ಬ ರೈತನಿಂದ 200 ಕ್ವಿಂಟಾಲ್ ಭತ್ತ ಖರೀದಿಸಬೇಕು. ಭತ್ತವನ್ನು ರೈತರು ಅವರ ಚೀಲಗಳಲ್ಲಿ ಖರೀದಿ ಕೇಂದ್ರಕ್ಕೆ ತಂದಾಗ ಒಂದು ಗೋಣಿಚೀಲಕ್ಕೆ ರೂ.6.00 ಮಾತ್ರ ನೀಡಬೇಕು ಎಂದು ಅವತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಬಹಳ ಕಡಿಮೆಯಾಗಿದ್ದು, ಒಂದು ಗೋಣಿಚೀಲಕ್ಕೆ ರೂ.50.00 ನಿಗಧಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ ಬಸವರಾಜನಾಯ್ಕ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ತೇಜಸ್ವಿ ಪಟೇಲ್, ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಹದಡಿ ಎಂ.ಬಿ.ಹಾಲಪ್ಪ, ಬಾತಿ ಶಿವಕುಮಾರ್, ಗೋಪನಾಳ್ ಪಾಲಕ್ಷಪ್ಪ, ಕೆಂಚವೀರಪ್ಪ, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಆರುಂಡಿ ಪುನೀತ್, ಅತ್ತಿಗೆರೆ ನಂದೀಶ್, ಗೋಣಿವಾಡ ಮಂಜುನಾಥ, ಕುರ್ಕಿ ರೇವಣಸಿದ್ದಪ್ಪ, ರಾಮಗೊಂಡನಹಳ್ಳಿ ರಾಜಶೇಖರ್, ಕುಕ್ಕುವಾಡದ ಶಂಕರ್, ಜಗದೀಶ, ಹದಡಿ ವಿಜಯ ಬಳೇಯರ, ಪ್ರಕಾಶ್, ಸಂಕೋಳ ಚಂದ್ರಶೇಖರ,ಕಳವೂರು ಮಂಜುನಾಥ, ಜಡಗನಹಳ್ಳಿ ವಿರೂಪಾಕ್ಷಪ್ಪ ಮುಂತಾದವರು ಉಪಸ್ಥಿತರಿದ್ದರು.