SUDDIKSHANA KANNADA NEWS| DAVANAGERE|DATE:27-05-2023
ಭಾರೀ ಮಳೆ, ಗಾಳಿಗೆ ಹಾನಿಗೀಡಾದ ಬೆಳೆ: ರೈತ ಸಂಘದ ಒತ್ತಾಯವೇನು…? ಬೇಡಿಕೆ ಏನು…?
ದಾವಣಗೆರೆ(DAVANAGERE): ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ ಹಾಗೂ ತೋಟದ ಬೆಳೆಗಳು ಹಾಗೂ ಬಡವರ ಮನೆಗಳು ಹಾಳಾಗಿದ್ದು, ತುರ್ತು ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಬಲ್ಲೂರು ರವಿಕುಮಾರ್ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 53,700 ಹೆಕ್ಟೇರ್ ಭತ್ತ ಬೆಳೆದಿದ್ದು, 700 ಹೆಕ್ಟೇರ್ ಹಾಳಾಗಿದೆ. ಇದರಿಂದ 105 ಕೋಟಿ ರೂಪಾಯಿ ನಷ್ಟ ಆಗಲಿದೆ. ಪ್ರತಿ ಎಕರೆಗೆ 30 ಸಾವಿರ ರೂಪಾಯಿ ಖರ್ಚಾಗಲಿದೆ. ಶ್ರಮ, ಗೊಬ್ಬರ, ಯಂತ್ರೋಪಕರಣ ಬಂಡವಾಳ ಸೇರಿದಂತೆ ಇಷ್ಟು ಖರ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಒಂದು ಲಕ್ಷದ 20 ಸಾವಿರ ಹೆಕ್ಟೇರ್ ನಲ್ಲಿ ತೋಟಗಾರಿಕೆ ಬೆಳೆ ಬೆಳೆದಿದ್ದು, 86 ಸಾವಿರ ಹೆಕ್ಟೇರ್ ಹಾಳಾಗಿದೆ. ಜಗಳೂರಿನಲ್ಲಿ 31.2 ಹೆಕ್ಟೇರ್, ದಾವಣಗೆರೆ 45 ಹೆಕ್ಟೇರ್, ಚನ್ನಗಿರಿ 37 ಹೆಕ್ಟೇರ್ ಹಾಳಾಗಿದೆ.21 ಹೆಕ್ಟೇರ್ ಬಾಳೆ, 5 ಹೆಕ್ಟೇರ್ ಪಪ್ಪಾಯಿ ನೀರುಪಾಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ ಮತ್ತು ತೋಟದ ಬೆಳೆಗಳು, ಬಡವರ ವಾಣಿಗಳು ಹಾಳಾಗಿದ್ದು, ತುರ್ತು ಕ್ರಮ ತೆಗೆದುಕೊಳ್ಳಬೇಕು. ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಗಳು ಮತ್ತು ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿದ್ದು, ಭತ್ತದ ಮಾರುಕಟ್ಟೆಯಲ್ಲಿ ಹಾಲಿ ರೂ . 220೦ ರಿಂದ 2300 ದರ ಇದೆ. ಪ್ರಸ್ತುತ 40ರಿಂದ 50 ಚೀಲ ಇಳುವರಿ ಬರುತ್ತಿದ್ದು , ಪ್ರತಿ ಎಕರೆಗೆ ರೂ. 75,000 ರಿಂದ 80,000 ರೂ. ಹಣ ಸಿಗುತ್ತದೆ. ಅಕಾಲಿಕ ಮಳೆಯಿಂದ ಸುಮಾರು 60,000 ರೂ.ನಷ್ಟವಾಗಿದೆ ಎಂದು ಹೇಳಿದರು.
ಸರ್ಕಾರ ಭೂಮಿಯ ಉಳುಮೆ, ಗೊಬ್ಬರ ಔಷಧಿ ಮತ್ತು ಕೂಲಿ ಕೆಲಸದ ಬಾಬು ಪ್ರತಿ ಎಕರೆಗೆ ರೂ . 30,000 ವೆಚ್ಚ ಆಗುತ್ತದೆ. ಆದ್ದರಿಂದ ಪ್ರತಿ ಎಕರೆಗೆ 50,000 ರೂಪಾಯಿ ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕು. ತೋಟದ ಬೆಳೆಗಳಾದ ಬಾಳೆ, ಎಲೆ, ಮಾವು ಸೇರಿದಂತೆ ಇತರೆ ತೋಟಗಳು ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆ ನಾಶವಾಗಿದೆ. ಪ್ರತಿ ಎಕರೆಗೆ ರೂ. 50,000 ಸರ್ಕಾರ ಭರಿಸಬೇಕು. ಅತಿ ಬಡವರ ಮನೆಗಳು ಗಾಳಿ, ಮಳೆಯಿಂದ ಹೆಂಚುಗಳು ಮತ್ತು ತಗಡುಗಳು ಹಾರಿ ಹೋಗಿದ್ದು ಮನೆಗಳು ಸಹ ಧಕ್ಕೆಯಾಗಿರುವ ಕಾರಣದಿಂದ ಅಂತಹ ಬಡವರ ಮನೆಗಳನ್ನು ಸರ್ಕಾರ ತಾತ್ಕಾಲಿಕ ಪರಿಹಾರವಲ್ಲದೆ ಶಾಶ್ವತ ಪರಿಹಾರವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ರೈತರಿಗೆ ಗೊಬ್ಬರ, ಬಿತ್ತನೆ ಬೀಜವನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ರೈತರಿಗೆ ವಿತರಣೆ ಮಾಡಬೇಕು ಎಂದು ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಎಸ್. ಪ್ರಸಾದ್ ಕಬ್ಬಳ, ಜಿಲ್ಲಾ ಉಪಾಧ್ಯಕ್ಷ ರಾಂಪುರ ಬಸವರಾಜ, ತಾಲೂಕು ಅಧ್ಯಕ್ಷ ಐಗೂರು ಶಿವಮೂರ್ತಪ್ಪ, ಹಾಲೇಶ್, ಪ್ರತಾಪ್, ನಾಗರಾಜ್ ಐಗೂರು ಹಾಜರಿದ್ದರು.