SUDDIKSHANA KANNADA NEWS/ DAVANAGERE/ DATE:28-07-2023
ದಾವಣಗೆರೆ: ಭದ್ರಾ ಡ್ಯಾಂಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಆಗಸ್ಟ್ 1 ರಿಂದಲೇ ನಾಲೆಯಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ (Farmer) ಒಕ್ಕೂಟದ ನಿಯೋಗವು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದೆ.
ಮಧ್ಯ ಕರ್ನಾಟಕ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಕಳೆದೆರಡು ದಿನಗಳಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸ ತಂದಿದೆ. ಇಂದು ಬೆಳ್ಳಗಿನ ಜಾವ 6 ಗಂಟೆಗೆ ಒಳ ಹರಿವು 16041 ಕ್ಯೂಸೆಕ್ಸ್ ಇದ್ದು, ನೀರಿನ ಮಟ್ಟ 159’6″ ಅಡಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ತೋಟಗಾರಿಕೆ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಮತ್ತು ಜಿಲ್ಲೆಯ ಶಾಸಕರಾಗಲಿ ಇದುವರೆಗೂ ಈ ಬಗ್ಗೆ ಚಕಾರವೆತ್ತಿಲ್ಲ. ಕೂಡಲೇ ಸಭೆ ಕರೆಯಬೇಕು ಎಂದು ನಿಯೋಗವು ಒತ್ತಾಯಿಸಿತು.
ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯ ಅರ್ಧದಷ್ಟು ರೈತ(Farmer)ರು ಬೇರೆ ಮೂಲಗಳ ನೀರು ಬಳಸಿ, ಈಗಾಗಲೇ ಭತ್ತದ ಸಸಿ ಬೆಳಸಿಕೊಂಡಿದ್ದಾರೆ. ಇನ್ನುಳಿದ ಅರ್ಧದಷ್ಟು ರೈತ (Farmer) ರು ಭದ್ರಾ ನೀರು ಹರಿಸಿದ ಮೇಲೆ ಬೀಜ ಚೆಲ್ಲುವವರಿದ್ದಾರೆ. ಅಂದ್ರೆ ಈಗ ಭದ್ರಾ ಜಲಾಶಯದಿಂದ ನೀರು ಹರಿಸಿದರೆ, ಬೀಜ ಚೆಲ್ಲುವವರೂ ಇದ್ದಾರೆ. ಸಸಿ ಬೆಳಸಿಕೊಂಡವರು ನಾಟಿ ಮಾಡುವವರೂ ಇದ್ದಾರೆ. ಇದರಿಂದ ಮುಂಗಡವಾಗಿ ಸಸಿ ಬೆಳಸಿಕೊಂಡವರಿಗೂ ತಡವಾಗಿ ಸಸಿ ಬೆಳಸಿಕೊಳ್ಳುವವರಿಗೂ 2 ತಿಂಗಳ ಅವಧಿಯ ಅಂತರವಾಗುತ್ತದೆ. ಮುಂದೆ ಭತ್ತ ಕಟಾವು ಅವಧಿಯಲ್ಲಿ 2 ತಿಂಗಳು ಹೆಚ್ಚುವರಿಯಾಗಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಆಗಸ್ಟ್ 1ನೇ ತಾರೀಖಿನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದೆ.
ಡ್ಯಾಂನ ಕಳೆದ 60 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆ ಹೆಚ್ಚು ಇದೆ. ಇದು ಮಳೆಗಾಲವಾಗಿರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ವೇಳಾಪಟ್ಟಿ ಪ್ರಕಾರ ನೀರು ಹರಿಸಬೇಕು. ಬೇಸಿಗೆಯಲ್ಲಿ ಮಾತ್ರ ನಿರಂತರ ನೀರು ಹರಿಸಬೇಕು. 2 ಹಂಗಾಮಿನಲ್ಲಿಯೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆದೇಶಿಸಬೇಕು ಎಂದು ಒತ್ತಾಯಿಸಿತು.
ಈ ಸುದ್ದಿಯನ್ನೂ ಓದಿ:
Davanagere: ರಸ್ತೆಯಲ್ಲಿ ಹೋಗೋರಿಗೆ ಬೀಳ್ತಿತ್ತು ಚಟೀರ್, ಪಟೀರ್: 30ಕ್ಕೂ ಹೆಚ್ಚು ಜನರಿಗೆ ಯಾಕ್ ಬಿತ್ತು ಹೊಡ್ತಾ…. ಕೊನೆಗೇನಾಯ್ತು ಗೊತ್ತಾ…?
ಈಗ ವಿಶ್ವದಾದ್ಯಂತ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಪ್ರಪಂಚದ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡ 40 ರಷ್ಟು ಇದೆ. ಕಳೆದ 2022-23ನೇ ಸಾಲಿನಲ್ಲಿ ನಮ್ಮ ದೇಶದಿಂದ ವಿದೇಶಗಳಿಗೆ 42.12 ಲಕ್ಷ ಟನ್ ಅಕ್ಕಿ ರಪ್ತು ಆಗಿದೆ. ಈಗ ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿ ಹೊರತುಪಡಿಸಿ ಇನ್ನುಳಿದ ಎಲ್ಲಾ ನಮೂನೆಯ ಅಕ್ಕಿ ರಪ್ತುನ್ನು ನಿಷೇಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನಿಗದಿತ ದರದಲ್ಲಿ ನಮ್ಮ ದೇಶದ ಜನರಿಗೆ ಅಕ್ಕಿ ಪೂರೈಕೆಯಗಬೇಕು ಮತ್ತು ಮೊದಲು ನಮ್ಮ ದೇಶದ ಜನರಿಗೆ ಊಟ, ಆಮೇಲೆ ವ್ಯಾಪಾರ ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಆದರೆ ಇದರಿಂದ ಭತ್ತಕ್ಕೆ ಚಿನ್ನದ ಬೆಲೆ ಸಿಗುವ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಅಕ್ಕಿ ರಫ್ತು ನಿಷೇಧ ಹಿಂಪಡೆದು, ಪ್ರಸ್ತುತ ಟೊಮೆಟೊಗೆ ಸಿಕ್ಕ ಚಿನ್ನದ ಬೆಲೆ ಭತ್ತಕ್ಕೂ ಸಿಗುವಂತೆ ಮಾಡಬೇಕು. ತಲೆ ತಲಾಂತರದಿಂದ ಬಸವಳಿದು ಭತ್ತ ಬೆಳೆದು, ದೇಶದ ಜನರಿಗೆ ಅನ್ನ ನೀಡಿದ ಅನ್ನದಾತ ರೈತರಿಗೆ ಒಂದು ಸುವರ್ಣಾವಕಾಶ ಸಿಗುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿತು.
ರೈತ ಒಕ್ಕೂಟದ ನಿಯೋಗದಲ್ಲಿ ಕೊಳೇನಹಳ್ಳಿ ಬಿ. ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ಮಳಲ್ಕೆರೆ ಸದಾನಂದ, ಅತ್ತಿಗೆರೆ ದೇವರಾಜ್, ಗೋಪನಾಳ್ ಹೆಚ್.ಕೆ.ಪಾಲಕ್ಷಪ್ಪ, ಆರನೇಕಲ್ಲು ವಿಜಯಕುಮಾರ, ಬಲ್ಲೂರು ಬಸವರಾಜ, ಗೋಪನಾಳ್ ಅಶೋಕ್, ಗೋಣಿವಾಡದ ಪಿ.ಎ.ನಾಗರಾಜಪ್ಪ, ಆಲೂರು ಲಿಂಗರಾಜು, ಲೋಕಿಕೆರೆ ಕೆ ಎನ್ ತಿಪ್ಪೇಸ್ವಾಮಿ, ಗೋಣಿವಾಡದ ಚನ್ನಚಾರಿ ಮತ್ತಿತರರು ಹಾಜರಿದ್ದರು.
Farmers News, Farmers Demand, Farmers News Updates, Farmers Suddi, Farmers Demand News