SUDDIKSHANA KANNADA NEWS/DAVANAGERE/DATE:11_10_2025
ದಾವಣಗೆರೆ: ಕೃತಿಕ ಬುದ್ದಿಮತ್ತೆಯಿಂದ ಕೃಷಿ, ಆರೋಗ್ಯ, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಇಂಟೆಲ್ ಕಂಪನಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗುತ್ತಿದೆ. ಇಂತಹ 35 ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ದಾವಣಗೆರೆಯಲ್ಲಿ ಘಟಕ ತೆರೆಯಲು ಉತ್ಸುಕತೆ ತೋರುತ್ತಿವೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಸಿದರು.
READ ALSO THIS STORY: ಮಾರಿಯಾ ಕೊರಿನಾ ಮಚಾದೊರಂತೆ “ಸಂವಿಧಾನ ಉಳಿವಿ”ಗೆ ಹೋರಾಡುತ್ತಿರುವ ರಾಹುಲ್ ಗಾಂಧಿ ನೊಬೆಲ್ ಪ್ರಶಸ್ತಿಗೆ ಅರ್ಹರಂತೆ!
ಅವರು ಜಿಲ್ಲಾಡಳಿತ, ಸಾಫ್ಟ್ವೇರ್ ಟೆಕ್ನಾಲಜಿ ಆಫ್ ಇಂಡಿಯಾ ಬೆಂಗಳೂರು, ವಿಷನ್ ದಾವಣಗೆರೆ ಹಾಗೂ ದಾವಣಗೆರೆಯ ಐಟಿಬಿಟಿ ಸಂಸ್ಥೆಗಳ ಸಂಯುಕ್ತಾಶಯದಲ್ಲಿ ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ ಆರು ತಿಂಗಳಲ್ಲಿ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಗಾರ ಆಯೋಜಿಸಲಾಗುವುದು. ಇದೇ ಅಕ್ಟೋಬರ್ 15, 16 ರಂದು ಕೃತಕ ಬುದ್ದಿಮತ್ತೆ (ಎಐ), ಬಿಗ್ ಡೆಟಾ, ಎಡಿಎ ಟೂಲ್ಸ್, ಇಂಟರ್‌ನೆಟ್ ಆಫ್ ಎಥಿಕಲ್ ಥಿಂಗ್ಸ್ , ಡಿಸೈನ್ ಐಪಿಗಳು ರೊಬೋಟಿಕ್ಸ್ ಇನ್ ಎಜುಕೇಷನ್ ಇಂಡಸ್ಟ್ರೀ ಹಾರ್ಡ್ವೇರ್ ಮತ್ತು ಸಾಫ್ಟೆವೇರ್ ತಂತ್ರಾಂಶಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ದಾವಣಗೆರೆಯಲ್ಲಿ ಐಟಿ ಹಬ್ ಮಾಡುವ ಉದ್ದೇಶದಿಂದ ಅಧಿಕಾರಿಗಳ ತಂಡದೊಂದಿಗೆ ಬೆಂಗಳೂರಿನ ಐಟಿಬಿಟಿ ಕಂಪನಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ, ಅವಶ್ಯಕತೆ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಅದೇ ಉದ್ದೇಶದಿಂದ ದಾವಣಗೆರೆಯಲ್ಲಿ ಮೊದಲಿಗೆ ಎರಡು ಎಕರೆ ಜಾಗವನ್ನು ಗುರುತಿಸಿ ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೀಟಿಂಗ್ ಹಾಲ್, ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದೊಂದಿಗೆ ಎಸ್‌ಟಿಪಿಐ ಯನ್ನು ಸ್ಥಾಪಿಸಲಾಯಿತು.
ಕೈಗಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ನಿರ್ಮಾಣ ಮಾಡಿ ತಂತ್ರಜ್ಞಾನ ದೃಶ್ಯವನ್ನು ಅಭಿವೃದ್ಧಿಪಡಿಸುವ ಸೆಂಟರ್ ಆಫ್ ಎಕ್ಸಲೆನ್ಸ್ಗಳ ಮೂಲಕ ಜಿಲ್ಲೆಯಲ್ಲಿ ಸ್ಟಾರ್ಟ್ಅಪ್ ಸ್ಥಾಪಿಸುವುದು. ಇಂತಹ ಸಂಸ್ಥೆಗಳ ಮೂಲಕ ಉದ್ಯಮದ ತಜ್ಞರು, ಶೈಕ್ಷಣಿಕ ಸಂಶೋಧಕರು, ಸರ್ಕಾರಿ ಸಂಸ್ಥೆಗಳು ಮತ್ತು ನವೋದ್ಯಮಿಗಳನ್ನು ಭೇಟಿ ಮಾಡಿ ದಾವಣಗೆರೆ ಐಟಿ ಹಬ್‌ಗೆ ಅವಶ್ಯವಿರುವ ಸೌಕರ್ಯಗಳನ್ನು ಪಡೆಯಲು ಸಲಹೆ ಸೂಚನೆಗಳನ್ನು ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಇಲ್ಲಿ ವ್ಯಾಸಂಗ ಮಾಡಿದಂತಹ ಅನೇಕ ನಿರುದ್ಯೋಗಿಗಳಿಗೆ ಕೌಶಲ್ಯ ಮತ್ತು ಭಾಷೆಯ ತೊಂದರೆ ಉಂಟಾಗುತ್ತಿದೆ. ಅಂತಹ ಯಾವುದೇ ತೊಂದರೆಗಳು ವಿದ್ಯಾರ್ಥಿಗಳಿಗೆ ಆಗದಂತೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸಹ ನೀಡಲಾಗುವುದು ಎಂದರು.
ದಾವಣಗೆರೆ ಜನರ ಸಾಫ್ಟ್ ವೇರ್ ಪಾರ್ಕ್ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. ದಾವಣಗರೆಯಲ್ಲಿ ಇಂಜನಿಯರಿಂಗ್ ಮಾಡಿದವರು ಉದ್ಯೋಗಕ್ಕಾಗಿ ಬೆಂಗಳೂರು ಅಥವಾ ನೆರೆ ಜಿಲ್ಲೆ, ರಾಜ್ಯ ಹಾಗೂ ದೇಶಗಳ ಅವಲಂಬನೆ ಇಲ್ಲದೆ ಜಿಲ್ಲೆಯಲ್ಲಿಯೇ ದುಡಿಯುವ ದಿನಗಳು ಸಮೀಪಿಸುತ್ತಿವೆ ಎಂದು ತಿಳಿಸಿದರು.
ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ ನಾವೀನ್ಯತೆಗೆ ಅವರು ಚಾಲನೆ ನೀಡಲು ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ದಾವಣಗೆರೆಯ ಐಟಿಬಿಟಿ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಮೇರು ಪತದಲ್ಲಿಡಲು ವಿನ್ಯಾಸಗೊಳ್ಳಲಾಗಿತ್ತಿದೆ. ಜಿಲ್ಲೆಯಲ್ಲಿ ಐಟಿ ಪಾರ್ಕ್ ಮಾಡಲು ಪೂರಕ ವಾತಾವರಣವಿದೆ. ಅದನ್ನು ನಾವೆಲ್ಲಾ ಸರಿಯಾದ ರೀತಿ ಬಳಕೆ ಮಾಡಿಕೊಳ್ಳಬೇಕು. ಟೈಯರ್ 2 ಅಥವಾ 3 ಜಿಲ್ಲೆಗಳಲ್ಲಿ ಐಟಿ ಹಬ್ ಸ್ಥಾಪಿಸಿದಲ್ಲಿ ಜಿಲ್ಲೆಯು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸಾಫ್ಟ್ವೇರ್ ಪಾರ್ಕ್ ಜೊತೆಗೆ 25 ರಿಂದ 30 ಎಕರೆ ವಿಸ್ತೀರ್ಣದಲ್ಲಿ ಅತೀ ಶೀಘ್ರದಲ್ಲಿಯೇ ಡಾಟಾ ಸೆಂಟರ್ ಸ್ಥಾಪಿಸಲಾಗುವುದು ಎಂದರು.
ಲೋಕಸಭಾ ಚುನಾವಣಾ ಸಮಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಮತದಾರರು ನಮ್ಮ ಮಕ್ಕಳು ಬೇರೆ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದು ಇಲ್ಲಿ ಐಟಿ ಪಾರ್ಕ್ ಮಾಡುವಂತೆ ಒತ್ತಾಯಿಸಿದ್ದರು. ಅದರ ಫಲವೇ ಇಂದು ದಾವಣಗೆರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೊಳ್ಳುತ್ತಿದೆ. ಲೋಕಸಭೆಯ ಪ್ರಶ್ನಾವಳಿ ಸಂದರ್ಭದಲ್ಲಿ ನಾನು ದಾವಣಗೆರೆಗೆ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಸ್ಥಾಪಿಸಿದ್ದೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು ಸಕಾರತ್ಮಕವಾಗಿ ಸ್ಪಂದಿಸಿ ಈಗಾಗಲೆ ಐಟಿ ಹಬ್ ಸ್ಥಾಪಿಸಲು ಪ್ರಸ್ಥಾಪಿಸಲಾಗಿದ್ದು ಅದನ್ನು ನೀವು ಅಭಿವೃದ್ಧಿಪಡಿಸಿಕೊಂಡು ಹೋಗುವಂತೆ ನಾಲ್ಕು ಪುಟಗಳ ಮಾಹಿತಿಯನ್ನು ನೀಡಿದರು ಎಂದರು.
ಎಸ್‌ಟಿಪಿಐ ನಿರ್ದೇಶಕರಾದ ಸಂಜಯ್ ತ್ಯಾಗಿ ಯವರು ಮಾತನಾಡಿ ದಾವಣಗೆರೆಯಲ್ಲಿ ಐಟಿ ಪಾರ್ಕ್ ಮಾಡಲು ನಾವು ಉತ್ಸಕರಾಗಿದ್ದೇವೆ. ಇಲ್ಲಿನ ವಾತಾವರಣವು ಸಹ ಅದಕ್ಕೆ ಪೂರಕವಾಗಿದೆ. ಇಲ್ಲಿ ಅನೇಕ ಕಂಪನಿಗಳು ಘಟಕ ಪ್ರಾರಂಭಿಸಲು ಉತ್ಸಾಕರಾಗಿದ್ದಾರೆ. ಈಗಾಗಲೇ ಅನೇಕ ಸುತ್ತಿನ ಮಾತುಕತೆಯಾಗಿದೆ, ಇದರ ಪ್ರಯೋಜನೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ದಾವಣಗೆರೆ ಸಾಫ್ಟ್ವೇರ್ ಪಾರ್ಕ್ ಮಾಡಲು ಲೋಕಸಭಾ ಸದಸ್ಯರು, ಜಿಲ್ಲಾಧಿಕಾರಿಗಳು ಸೇರಿದಂತೆ ಒಂದು ವಿಷನ್ ಟೀಮ್ ಮಾಡಲಾಗಿದೆ. ಅದರ ಫಲವೇ ಸಾಪ್ಟ್ವೇರ್ ಪಾರ್ಕ್ ದಾವಣಗೆರೆಯಲ್ಲಿ ಆಗಲು ಸಾಧ್ಯವಾಯಿತು. ವಿಷನ್ ದಾವಣಗೆರೆ ಬಗ್ಗೆ ಫೇಸ್‌ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಾಫ್ಟ್ವೇರ್ ಪಾರ್ಕ್ ಬಗ್ಗೆ ಮಾಹಿತಿ ಇದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು. ವಿಷನ್ ಟೀಂ ನಾಸಿಕ್ ಮತ್ತು ಚೆನ್ನೈನ ಡಾಟಾ ಸೆಂಟರ್‌ಗೆ ಭೇಟಿ ನೀಡಲಿವೆ. ಎಸ್‌ಟಿಪಿಐ ಮತ್ತು ಕಿಯೋನಿಕ್ಸ್ ಸಂಸ್ಥೆಗಳಿಗೆ ತಲಾ ನಾಲ್ಕು ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದರು.
25 ರಿಂದ 30 ಎಕರೆ ಜಮೀನಿನಲ್ಲಿ ಜಿಲ್ಲೆಯಲ್ಲಿ ಗಾಲ್ಪ್ ಕೋರ್ಸ್ ಅನ್ನು ತೆರೆಯಲು ಸಹ ಚಿಂತನೆ ನಡೆಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಟಿಪಿಐ ಬಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಜೈನ್ ತಾಂತ್ರಿಕ ಕಾಲೇಜು, ಯುಬಿಡಿಟಿ, ಜಿಎಂಐಟಿ ಕಾಲೇಜು ಮತ್ತು ಬಿಐಇಟಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಇಂಟಲ್ ಸಂಸ್ಥೆಯ ಸಾಮ್ಯೂಯಲ್ ದೊರೆರಾಜ್, ಕೆಡಿಇಎಂ ಪ್ರೊಗ್ರಾಮ್ ಡೈರೆಕ್ಟರ್ ಸುವಿನ್ ನಾರಾಯಣ್ ಬಿಐಇಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಬಿ. ಅರವಿಂದ ಹಾಗೂ ಇತರರು ಉಪಸ್ಥಿತರಿದ್ದರು.