ಯಾದಗಿರಿ: ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಸಿಎಂ ಬದಲಾವಣೆಯೂ ಇಲ್ಲ, ಡಿಸಿಎಂ ಬದಲಾವಣೆಯೂ ಇಲ್ಲ. ಬದಲಾವಣೆ ಮಾಡಿಕೊಳ್ಳುವವರಿಗೆ ಬಿಟ್ಟ ವಿಷಯ, ನಾನು ಹೆಚ್ಚು ಉತ್ತರಿಸಲಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಸಹ ಹೈಕಮಾಂಡ್ ವಿಚಾರಕ್ಕೆ ಬಿಟ್ಟ ವಿಷಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಡ್ಡಿ ಮುರಿದ ಹಾಗೆ ಹೇಳಿದರು.
ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪವಾಗಿಲ್ಲ, ಈಗ ಆಗುವುದೂ ಇಲ್ಲ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಉತ್ತಮ ವಾತಾವರಣವಿದೆ. ಇನ್ನೂ ಉಪಮುಖ್ಯಮಂತ್ರಿ ಬದಲಾವಣೆ ಬಗ್ಗೆ ಶಿವಕುಮಾರ್ ಅವರಿಗೆ ಕೇಳಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ವಿಷಯಗಳ ಬಗ್ಗೆ ಮಾಧ್ಯಮ ಸ್ನೇಹಿತರ ಪ್ರಶ್ನೆ ಕೇಳಿ ಎಂದ ಸಚಿವರು, ರಾಜ್ಯದ ರಾಜಕಾರಣ ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಸರ್ಕಾರದಲ್ಲಿ ಆ ತರಹದ ಬದಲಾವಣೆಯಾದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಉತ್ತರ ನೀಡುತ್ತಾರೆ. ಅಧ್ಯಕ್ಷರ ಬದಲಾವಣೆ ಹೈ ಕಮಾಂಡ್ ಅವರಿಗೆ ಬಿಟ್ಟ ವಿಷಯ, ಎಲ್ಲವೂ ಸರಿ ಇರುವ ಕಾರಣ ಸರಿ ಇದೆ ಎಂದು ಹೇಳುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.