SUDDIKSHANA KANNADA NEWS/ DAVANAGERE/ DATE:18-02-2025
ದಾವಣಗೆರೆ: ಇಂಧನ ಇಲಾಖೆಯಲ್ಲಿನ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ, ಆದರೆ ಸರ್ಕಾರದಿಂದ ಸಾಕಷ್ಟು ಹಣ ಬರಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕಂಪನಿಗಳಿಗೆ ಬರಬೇಕಾದ ಹಣ ಬಾಕಿ ಇದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವಿದ್ಯುತ್ ದರ ಪರಿಷ್ಕರಣೆ ಕೆಇಆರ್‍ಸಿಗೆ; ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೆಇಆರ್‍ಸಿ ಮಾಡಲಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವ ಮೂಲಕ ದರ ಏರಿಕೆ ನಿರ್ಣಯಗಳನ್ನು ಕೆಇಆರ್‍ಸಿ ನಿರ್ಧರಿಸಲಿದೆ. ಯಾರದೂ ಕೂಡ ಹಸ್ತಕ್ಷೇಪ ಇರುವುದಿಲ್ಲ, ಕಳೆದ ವರ್ಷ ಯಾವುದೇ ವಿದ್ಯುತ್ ದರ ಏರಿಕೆ ಮಾಡಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೃಹಜ್ಯೋತಿ; ಸರ್ಕಾರದ ಗ್ಯಾರಂಟಿ ಯೋಜನೆಗಳೊಂದಾದ ಗೃಹಜ್ಯೋತಿ ಯೋಜನೆ ಎಲ್ಲಾ ವರ್ಗದ ಜನರಿಗೂ ಅನ್ವಯಿಸಲಿದ್ದು 200 ಯುನಿಟ್ ವರೆಗೆ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಇದನ್ನು ಅವರು ವರ್ಷದಲ್ಲಿ ಉಪಯೋಗಿಸುವ ಯುನಿಟ್‍ಗಳನ್ನಾಧರಿಸಿ ಹೆಚ್ಚುವರಿಯಾಗಿ ಶೇ 10 ರಷ್ಟು ಸೇರಿಸಿ ಬಳಕೆಯ ಯುನಿಟ್ ನಿಗದಿಯಾಗುತ್ತದೆ. ಆದರೆ 200 ಯುನಿಟ್ ನಂತರ 1 ಯುನಿಟ್ ಹೆಚ್ಚಾದರೂ ವಿದ್ಯುತ್ ದರದಂತೆ ಬಿಲ್ ಪಾವತಿಸಬೇಕಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ನೊಂದಣಿಯಾದ 433897 ಆರ್.ಆರ್.ಸಂಖ್ಯೆಗಳಿದ್ದು ವಿದ್ಯುತ್ ಸಂಪರ್ಕ ಪಡೆದ ಸ್ಥಾವರಗಳಲ್ಲಿ ಶೇ 88.93 ರಷ್ಟು ಗೃಹಜ್ಯೋತಿಯಲ್ಲಿವೆ. ಈ ಸ್ಥಾವರಗಳಿಗೆ 2023 ರ ಆಗಸ್ಟ್ ನಿಂದ 2024 ರ ಡಿಸೆಂಬರ್ ಅಂತ್ಯದವರೆಗೆ 309 ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಸಬ್ಸಿಡಿ ನೀಡಿದ್ದು ಸರ್ಕಾರ ಇದನ್ನು ಭರಿಸಿದೆ ಎಂದು ಮಾಹಿತಿ ನೀಡಿದರು.