SUDDIKSHANA KANNADA NEWS/ DAVANAGERE/ DATE:14-08-2023
ದಾವಣಗೆರೆ: .ಈ ಹಿಂದೆ ಜಾರಿಯಲ್ಲಿದ್ದ ಹಳ್ಳಿಗಳನ್ನು ಮೂರು ಬ್ಯಾಚ್ ಗಳನ್ನಾಗಿ ಮಾಡಿ ಮೂರು ಮಾರ್ಗಗಳಲ್ಲಿ ಮೂರು ಪಾಳಿಯಂತೆ ವಿದ್ಯುತ್ (Electricity) ಪೂರೈಸಬೇಕು. ಶಿಫ್ಟ್ ಮೂಲಕ ವಿದ್ಯುತ್ (Electricity) ಪೂರೈಕೆ ನಿರಂತರವಾಗಿರಬೇಕು. ಮಧ್ಯೆ ವಿದ್ಯುತ್ ಕಡಿತ ಮಾಡಬಾರದು ಎಂದು ಒತ್ತಾಯಿಸಿ ರೈತರ ಒಕ್ಕೂಟದ ನೇತೃತ್ವದಲ್ಲಿ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಕುಕ್ಕುವಾಡ ವಿದ್ಯುತ್ (Electricity)ವಿತರಣಾ ಉಪಕೇಂದ್ರದಿಂದ ಹಗಲು ಪಾಳಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಶ್ಯಾಗಲೆ ಹಳ್ಳದ ದಡದಲ್ಲಿ ಅಳವಡಿಸಿರುವ ಲೋಕಿಕೆರೆ, ಗಿರಿಯಾಪುರ, ಹೊನ್ನಮರಡಿ, ಮತ್ತಿ, ಕುಕ್ಕುವಾಡ, ಕೊಳೇನಹಳ್ಳಿ ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ಪಂಪ್ ಸೆಟ್ ಮೋಟಾರ್ ಗಳು ಏಕಕಾಲದಲ್ಲಿ ಪ್ರಾರಂಭವಾಗುವುದರಿಂದ ಹಳ್ಳದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಇದರಿಂದ ಹಳ್ಳದಲ್ಲಿ ನೀರಿದ್ದರೂ ಜಮೀನಿಗೆ ಹರಿಸಲು ನೀರಿಲ್ಲದಂತೆ ಆಗಿದೆ. ಆದ್ದರಿಂದ ಭತ್ತದ ನಾಟಿ ಮಾಡುತ್ತಿರುವ ರೈತರು ಕಂಗಾಲಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ:
Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!
ಈ ಹಿಂದೆ ಮೂರು ವಿದ್ಯುತ್ (Electricity)ಮಾರ್ಗಗಳ ಮೂಲಕ ಹಳ್ಳಿಗಳನ್ನು ಮೂರು ಬ್ಯಾಚ್ ಗಳನ್ನಾಗಿ ಮಾಡಿ, ಹಗಲು ರಾತ್ರಿ ಮೂರು ಪಾಳಿ (ಶಿಫ್ಟ್) ಗಳಲ್ಲಿ ವಿದ್ಯುತ್ (Electricity) ಪೂರೈಕೆ ಮಾಡಲಾಗುತ್ತಿತ್ತು. ಆಗ ನೀರು ಲಭ್ಯವಾಗುತ್ತಿತ್ತು. ಈಗ ಒಂದೇ ಪಾಳಿಯಲ್ಲಿ ವಿದ್ಯುತ್ ಪೂರೈಕೆ ಮಾಡುವುದರಿಂದ ಏಕಕಾಲಕ್ಕೆ ಎಲ್ಲಾ ಮೋಟಾರ್ ಗಳು ಪ್ರಾರಂಭವಾಗುವುದರಿಂದ ಕೇವಲ ಅರ್ಧ ಮುಕ್ಕಾಲು ಗಂಟೆಯಲ್ಲಿ ಹಳ್ಳದಲ್ಲಿ ನೀರು ಖಾಲಿಯಾಗಿ ಮೋಟಾರ್ ಗಳು ನಿಂತು ಹೋಗುತ್ತವೆ. ಆದ್ದರಿಂದ ಜಮೀನುಗಳಿಗೆ ನೀರು ಹರಿಸುವುದು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಪೂರೈಕೆ ಇದ್ದರೂ ಉಪಯೋಗವಾಗುತ್ತಿಲ್ಲ ಮತ್ತು ನಿತ್ಯ ಸಂಜೆ 4 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಹಳ್ಳದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ ಎಂದು ಹೇಳಲಾಗಿದೆ.
ವಿದ್ಯುತ್ ಪರಿವರ್ತಕ ಟಿ.ಸಿ.ಗಳ ಅಳವಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಸಮಪರ್ಕವಾಗಿ ವಿದ್ಯುತ್ (Electricity) ಪರಿವರ್ತಕಗಳನ್ನು ನಿರ್ವಹಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲ:
ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಪವರ್ ಜನರೇಷನ್ ಸಮಸ್ಯೆ ಇದೆ. ಸೌರ ವಿದ್ಯುತ್ ಉತ್ಪಾದನೆ (ಸೋಲಾರ್ ಪವರ್ ಜನರೇಷನ್) ನಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿಸಿಲು ಇರುತ್ತದೆ. ಆದ್ದರಿಂದ ಹಗಲಿನಲ್ಲಿ ಮಾತ್ರ ಒಂದೇ ಪಾಳಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ರಾಜ್ಯದ ಜನತೆ ಕೇಳದಿದ್ದರೂ ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಆಗಸ್ಟ್ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ಆರೋಪಿಸಿದರು.
ಭತ್ತ ಬೆಳೆಗೆ ರೈತರಿಂದ ನೀರುಣಿಸಲಾಗುತ್ತಿಲ್ಲ. ಇದರಿಂದ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಸೋಲ ಮಾಡಿ ಭತ್ತ ಬೆಳೆದು ಮಾನವ ಕುಲಕ್ಕೆ ಅನ್ನ ನೀಡುವ ಅನ್ನದಾತ ರೈತನಿಗೆ ಯಾವುದೇ ಗ್ಯಾರಂಟಿ ಇಲ್ಲ. ಆತ್ಮಹತ್ಯೆಯೇ ಗ್ಯಾರಂಟಿಯಾಗಿದೆ ಎಂದು ಸತೀಶ್ ರವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯುತ್ (Electricity) ಪೂರೈಕೆಗೆ ಕ್ರಮ:
ಮನವಿ ಸ್ವೀಕರಿಸಿದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಎಸ್. ಕೆ ಪಾಟೀಲ್ ರವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಕೊಳೇನಹಳ್ಳಿ ಸತೀಶ್, ಕೆ. ಶರಣಪ್ಪ, ಕೆ. ಓಂಕಾರಪ್ಪ, ಎಸ್. ಸಿ. ಸಿದ್ದಪ್ಪ, ದೊಡ್ಮನೆ ಹಾಲಸಿದ್ದಪ್ಪ, ಕೆ. ಜಿ. ನಾಗರಾಜ, ಕೆ. ಬಿ. ರವಿಕುಮಾರ, ಕೆ. ಆರ್. ಶಿವು ಮತ್ತಿತರರು ಇದ್ದರು.