ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಮೂವರ ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ ತೆರಳಿದ್ದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ.
ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶೋಯಬ್ ಅಲಿಯಾಸ್ ಅಂಡ ಎಂಬಾತನ ಕಾಲಿಗೆ ಗುಂಡು ಹೊಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗಿನ ಜಾವ ಶೋಯಬ್‌ನ ಬಂಧನಕ್ಕೆ ಪಿಎಸ್‌ಐ ಕುಮಾರ್ ಮತ್ತು ಸಿಬ್ಬಂದಿ ಅಣ್ಣಪ್ಪ ಬೀರನಕೆರೆಗೆ ತೆರಳಿದ್ದರು. ಈ ಸಂದರ್ಭ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಮೇಲೆ ಆತ ದಾಳಿಗೆ ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪಿಎಸ್‌ಐ ಕುಮಾರ್ ಗುಂಡು ಹಾರಿಸಿದ್ದಾರೆ. ಶೋಯಬ್ ಅಲಿಯಾಸ್ ಅಂಡ ಹಲವು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳಿವೆ. ಈ ಪೈಕಿ ಎರಡು ಕೊಲೆ ಯತ್ನ ಪ್ರಕರಣಗಳಿವೆ.