SUDDIKSHANA KANNADA NEWS/ DAVANAGERE/ DATE:13-12-2023
ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಕಛೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಸೆಪ್ಟೆಂಬರ್ ಮಾಹೆಯಿಂದ ಇ-ಆಫೀಸ್ ನಲ್ಲಿ ಕಾರ್ಯನಿರ್ವಹಣೆ ಕಡ್ಡಾಯಗೊಳಿಸಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಟ್ಟು 2,08,180 ಅರ್ಜಿಗಳನ್ನು, ದಾವಣಗೆರೆ ಹಾಗೂ ಹೊನ್ನಾಳಿ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇ-ಆಫೀಸ್ ಮೂಲಕ 5,103 ಅರ್ಜಿಗಳನ್ನು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಒಟ್ಟು 6,881 ಅರ್ಜಿ ವಿಲೇವಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2,20,164 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಮುಂದುವರೆದ ಭಾಗವಾಗಿ ನಾಡಕಛೇರಿ ಮತ್ತು ರಾಜಸ್ವ ನಿರೀಕ್ಷಕರ ಕಛೇರಿಯಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ.
ಕಂದಾಯ ಗ್ರಾಮ ರಚನೆ:
ಜಿಲ್ಲೆಯಲ್ಲಿ ಗುರುತಿಸಲಾಗಿರುವ 80 ಜನವಸತಿಗಳ ಪೈಕಿ ಈಗಾಗಲೇ 46 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಬಾಕಿ ಉಳಿದ 34 ಜನ ವಸತಿಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ದಾಖಲೆಗಳ ಪರಿಶೀಲಿನೆ ಕೈಗೊಂಡು ಒಟ್ಟು 30 ಜನವಸತಿಗಳ ಪ್ರಸ್ತಾವನೆಗಳನ್ನು ಪ್ರಾಥಮಿಕ ಅಧಿಸೂಚನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನುಳಿದ 4 ಜನವಸತಿಗಳು ಖಾಸಗಿ ಜಮೀನಿನಲ್ಲಿ ಸ್ಥಾಪನೆಗೊಂಡಿದ್ದು ಖಾಸಗಿ ಜಮೀನುಗಳನ್ನು ಸರ್ಕಾರಕ್ಕೆ, ನಿಹಿತಗೊಳಿಸಲು ಕರ್ನಾಟಕ ಭೂಸುಧಾರಣೆ ಕಾಯ್ದೆಯಡಿ ಜಿಲ್ಲಾ ಮಟ್ಟದಲ್ಲಿ ಅಧಿಸೂಚನೆ ಹೊರಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಸಾಮಾಜಿಕ ಭದ್ರತಾ ಯೋಜನೆ:
ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಕಳೆದ 6 ತಿಂಗಳಲ್ಲಿ 9,532 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರುವ ನಿಟ್ಟಿನಲ್ಲಿ 24,422 ಪಿಂಚಣಿದಾರರ ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ತಡೆಹಿಡಿಯಲಾದÀ 800 ಫಲಾನುಭವಿಗಳ ಪಿಂಚಣಿ ಹಾಗೂ ವಿವಿಧ ಕಾರಣಗಳಿಂದ ರದ್ದಾದ 2,109 ಪ್ರಕರಣಗಳನ್ನು ಚಾಲ್ತಿಗೊಳಿಸಲಾಗಿದೆ.
200 ಪಿಂಚಣಿದಾರರ ಆಧಾರ್ ಸೀಡಿಂಗ್ ಮಾಡಲಾಗಿದೆ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 562 ಪ್ರಕರಣಗಳಲ್ಲಿ ಸಹಾಯಧನ ವಿತರಿಸಲು ಹಾಗೂ 7 ರೈತರ ಆತ್ಮಹತ್ಯೆ ಪ್ರಕರಣಗಳು, 5 ರೈತರ ಆಕಸ್ಮಿಕ ಮರಣ, ಹಾವು ಕಡಿತ ಪ್ರಕರಣಗಳು ಮತ್ತು 20 ಬಣವೆ ನಷ್ಟ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.
ಕಂದಾಯ ದಾಖಲೆಗಳ ಡಿಜಿಟಲೀಕರಣ:
ಜಿಲ್ಲೆಯ ತಾಲ್ಲೂಕು ಕಛೇರಿಗಳಲ್ಲಿನ ಕಂದಾಯ ದಾಖಲೆಗಳು ಮತ್ತು ಕಡತಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು ಪ್ರಸ್ತುತ ದಾವಣಗೆರೆ ಹಾಗೂ ಹರಿಹರ ತಾಲ್ಲೂಕುಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.