ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಧೂಳೆಬ್ಬಿಸುತ್ತಿದೆ ವಿನಯ ಪಾದಯಾತ್ರೆ, ಕಾಲ್ನಡಿಗೆಗೆ ಸಿಗುತ್ತಿದೆ ಜನರ ಭಾರೀ ಸ್ಪಂದನೆ, ಪ್ರೀತಿ: ಕಾಂಗ್ರೆಸ್ ಯುವ ನಾಯಕ ಬೆಳೆದು ಬಂದ ರೋಚಕ ಸ್ಟೋರಿ…!

On: January 4, 2024 5:40 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:04-01-2024

ದಾವಣಗೆರೆ (Davanagere): ರಾಜಕಾರಣ ಸಮುದ್ರ ಇದ್ದ ಹಾಗೆ. ಇಲ್ಲಿ ಈಜಿ ಜಯಿಸುವುದು ಅಷ್ಟು ಸುಲಭವಲ್ಲ. ಸಾಕಷ್ಟು ಪರಿಶ್ರಮ ಬೇಕು. ಜನರ ಪ್ರೀತಿ ಸಂಪಾದನೆ ಮಾಡಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ. ರಾಜಕಾರಣಕ್ಕೆ ಬರುವ ಯುವಕರು ಸಾಕಷ್ಟು ಬೆವರು ಸುರಿಸಬೇಕು. ಜನರು ಒಪ್ಪಬೇಕು. ಇದು ಆಯ್ತು ಅಂದರೆ ಉನ್ನತ ಹುದ್ದೆಗೆ ಹೋಗುವುದರಲ್ಲಿ ಎರಡು ಮಾತಿಲ್ಲ. ಜನರ ಬಳಿಗೆ ಹೋದವರೇ ಜನಪ್ರತಿನಿಧಿಗಳಾಗಿರುವುದು. ಇದಕ್ಕಾಗಿ ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ತನ್ನ ವಿಶಿಷ್ಟ ಶೈಲಿಯಿಂದಲೇ ಜನರ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ನ ಯುವ ನಾಯಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಈಗ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ.

ಜನರ ಬಳಿಗೆ ಹೋಗುತ್ತಿರುವ ವಿನಯ್ ಕುಮಾರ್ ಅವರಿಗೆ ಸಿಗುತ್ತಿರುವ ಜನಸ್ಪಂದನೆ, ಪ್ರೀತಿ, ವಿಶ್ವಾಸ ಮತ್ತಷ್ಟು ಶಕ್ತಿ ತರುತ್ತಿದೆ. ಇನ್ಸೈಟ್ಸ್ ಐಎಎಸ್ ಸಂಸ್ಥಾಪಕರು, ನಿರ್ದೇಶಕರೂ ಆಗಿರುವ ವಿನಯ್ ಕುಮಾರ್ ಅವರು ರಾಜಕಾರಣದತ್ತ ಆಸಕ್ತಿ ತಳೆದಿದ್ದಾರೆ. ಐಎಎಸ್ ತರಬೇತಿ ನೀಡುವಲ್ಲಿ ನಿಸ್ಸೀಮರಾಗಿರುವ ಅವರು ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾತ್ರವಲ್ಲ, ಇದಕ್ಕಾಗಿ ಪಾದಯಾತ್ರೆ ನಡೆಸುವ ಮೂಲಕ ದಾವಣಗೆರೆ ಜಿಲ್ಲೆಯ ಜನರ ಮನಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ. ವಿನಯ್ ಕುಮಾರ್ ಅವರ ಜೀವನಗಾಥೆಯ ರೋಚಕ ಕಥೆ ಇದು.

ವಿನಯ್ ಕುಮಾರ್ ಯಾರು ಗೊತ್ತಾ…?

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದ ವಾಸಿ ಆಗಿರುವ ವಿನಯ್ ಕುಮಾರ್ ಅವರ ಬಾಲ್ಯಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಕಷ್ಟಪಟ್ಟು ಓದಿದವರು. ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಮೆಟ್ಟಿಲನ್ನಾಗಿಸಿಕೊಂಡು ಮೇಲೆ ಬಂದವರು. ತಾವು ಕೈ ಹಾಕಿದ ಕ್ಷೇತ್ರಗಳಲ್ಲಿ ಯಶಸ್ಸು ಕಂಡಿರುವ ವಿನಯ್ ಕುಮಾರ್ ಅವರು ಪಾದಯಾತ್ರೆ ಮೂಲಕ ಜನರ ಕಷ್ಟ, ನೋವು, ನಲಿವು, ಸಮಸ್ಯೆಗಳು, ಪರಿಹಾರ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ಹೋದ ಹಳ್ಳಿಗಳಲ್ಲಿ ವಿನಯ್ ಕುಮಾರ್ ಕಾರ್ಯಕ್ಕೆ ಜೈಹೋ ಎನ್ನುತ್ತಿದ್ದಾರೆ ಜನರು.

ಐಎಎಸ್ ಆಗಲಿಲ್ಲ, ಸಾವಿರಾರು ಮಂದಿ ಐಎಎಸ್ ಮಾಡಿದ್ರು…!

ವಿನಯ್ ಕುಮಾರ್ ಜಿ. ಬಿ. ಈಗ ಸದ್ಯ ದಾವಣಗೆರೆ ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿರುವ ಹೆಸರು. ಚಿತ್ರದುರ್ಗದ ಜವಾಹರ್ ನವೋದಯ ವಿದ್ಯಾಲಯದಲ್ಲಿ (ಜೆಎನ್‌ವಿ) ಶಾಲಾ ಶಿಕ್ಷಣ ಪಡೆದರು. ಜೆನೆಟಿಕ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಹತ್ತಿರಹತ್ತಿರ ಬಂದು ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಐಎಎಸ್ ಪರೀಕ್ಷೆ ಬರೆದರಲ್ಲದೇ, ಕೂದಲೆಳೆ ಅಂತರದಲ್ಲಿ ಸಾಧ್ಯ ಆಗಲಿಲ್ಲ. ಆ ನಂತರ ಕಟ್ಟಿದ್ದೇ ಇನ್ಸೈಟ್ಸ್ ಐಎಎಸ್ ಸಂಸ್ಥೆ. ಸಾವಿರಾರು ಜನರನ್ನು ಐಎಎಸ್ ಅಧಿಕಾರಿಗಳನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಸರ್ಕಾರಿ ಅಧಿಕಾರಿಯಾಗಿ ಕೆಲಸ

ಮೈಸೂರಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದವರು. ಇದಷ್ಟೇ ನನ್ನ ಗುರಿಯಲ್ಲ, ಬೇರೆಯದ್ದೇ ಇದೆ. ಹಾಗಾಗಿ, ಕೆಲಸಕ್ಕೆ ರಾಜೀನಾಮೆ ನೀಡಿದರು. ತಾನು ಕಲಿತ ವಿದ್ಯೆ, ಐಎಎಸ್ ನನ್ನ ಕೈಯಲ್ಲಿಂದ ಆಗದಿದ್ದರೂ ಬೇರೆಯವರು ವಂಚಿತರಾಗಬಾರದು ಎಂಬ ಕಾರಣಕ್ಕೆ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಿದರು.

READ ALSO THIS STORY:

ಯಡಿಯೂರಪ್ಪಗಿಂತ ಹಿಂದೂ, ರಾಮಭಕ್ತ ಯಾರಿದ್ದಾರೆ…? ಆಗ ಬಿಎಸ್ ವೈ ಜೈಲಿಗಟ್ಟಿದ್ದ ಸರ್ಕಾರ ಹಿಂದೂ ವಿರೋಧಿ ಎನ್ನಲಿಲ್ಲ ಯಾಕೆ..? ಈಗ ಯಾಕೆ ಕೂಗಾಟ: ಸಿದ್ದರಾಮಯ್ಯ ಪ್ರಶ್ನೆ

IAS ಆಕಾಂಕ್ಷಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರಲ್ಲದೇ, ಆನ್‌ಲೈನ್ ನಲ್ಲಿಯೂ ಟೀಚಿಂಗ್ ಕೊಟ್ಟರು. ಯುಪಿಎಸ್‌ಸಿ ಐಎಎಸ್ ತಯಾರಿಗಾಗಿ ಭಾರತದ ಪ್ರಮುಖ ವೆಬ್‌ಸೈಟ್ ಅನ್ನು ಮಾಡಿರುವ ಅವರು, ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಬೇಡಿಕೆಯಿರುವ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ವಿನಯ್ ಕುಮಾರ್ ಅವರದ್ದು.

ಭಾರತದ ಐಎಎಸ್ ಮುಕುಟದ ಗರಿ

ಇನ್ಸೈಟ್ಸ್ ಐಎಎಸ್ ಸಂಸ್ಥೆಯು ಈಗ ಭಾರತದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು. ಅತಿ ಹೆಚ್ಚು ರ್ಯಾಂಕ್ ನೀಡುತ್ತಿರುವ ಸಂಸ್ಥೆ ಎಂಬ ಖ್ಯಾತಿಯನ್ನೂ ಸಹ ಹೊಂದಿದೆ. ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್‌ನಲ್ಲಿ ವಿನಯ್ ಕುಮಾರ್ ಜಿ ಬಿ ಅವರ ಮಾರ್ಗದರ್ಶನದಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು InsightsIAS ನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದು ಸಂಸ್ಥೆಯ ಹೆಗ್ಗಳಿಕೆಯ ಮತ್ತೊಂದು ಗರಿ. ನಿಯಮಿತ ಲೇಖನಗಳು, ವೀಡಿಯೊಗಳು, ವೆಬ್‌ನಾರ್‌ಗಳು ಮತ್ತು ಇನ್‌ಸ್ಟಾಕ್ಲಾಸ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಪ್ರೇರೇಪಿಸುತ್ತಿದ್ದಾರೆ.

ಧೂಳೆಬ್ಬಿಸಿದೆ ಪಾದಯಾತ್ರೆ:

ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲಿ ಡಿಸೆಂಬರ್ 18ರಿಂದ ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಪಾದಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಹೋದ ಕಡೆಗಳಲ್ಲಿ ಮನೆ ಮಗನಂತೆ ಬರಮಾಡಿಕೊಳ್ಳುತ್ತಿದ್ದಾರೆ. ರೈತರು, ಬಡವರು, ದಲಿತರು, ಹಿರಿಯರು, ಕಿರಿಯರು, ಕುರಿ ಮೇಯಿಸುವರು, ಕೃಷಿಕರು ಸೇರಿದಂತೆ ಎಲ್ಲಾ ವರ್ಗದವರು ವಿನಯ್ ಕುಮಾರ್ ಪಾದಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

ಸುಮಾರು 25 ದಿನಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ ವಿನಯ ನಡಿಗೆ ಹಳ್ಳಿ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮ ಈಗ ಎಲ್ಲರ ಬಾಯಲ್ಲಿಯೂ ಗುನುಗುತ್ತಿದೆ.

ಯಾವಾಗ ಆರಂಭವಾಯ್ತು ಪಾದಯಾತ್ರೆ…?

ಡಿಸೆಂಬರ್ 18 ರಂದು ಸೋಮವಾರದಂದು ಜಗಳೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಚಿಕ್ಕಉಜ್ಜನಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭವಾಯಿತು. ಪಾದಯಾತ್ರೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು ಯುವಕರು ಅಭಿಮಾನಿಗಳು ಪಾಲ್ಗೊಂಡು ಶುಭ ಕೋರಿದ್ದಾರೆ. ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸುತ್ತಿದ್ದಾರೆ.

ಪಾದಯಾತ್ರೆ ಪ್ರಾರಂಭದ ದಿನದಿಂದ ಮುಕ್ತಾಯದವರೆಗೂ ಪ್ರತಿನಿತ್ಯ ರಾತ್ರಿ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಮುಖಂಡರೊಂದಿಗೆ ಗ್ರಾಮಗಳ ಮೂಲಭೂತ ಸಮಸ್ಯೆಗಳು, ಕ್ಷೇತ್ರ ಅಭಿವೃದ್ಧಿ ಕುರಿತು ಗ್ರಾಮಸ್ಥರ ಜೊತೆ ಸಮಾಲೋಚನೆ ಮಾಡುವ ಗುರಿ ಹೊಂದಿರುವ ಅವರು, ಈಗಾಗಲೇ ಹಲವು ಹಳ್ಳಿಗಳಲ್ಲಿ ಈ ಕೆಲಸ
ಮಾಡಿದ್ದಾರೆ.

ವಿನಯಮಾರ್ಗ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಜನೋಪಯೋಗಿ, ಸಮಾಜಮುಖಿ, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಎರಡು ಸಾವಿರ ವಿಕಲಚೇತನರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್, ವಾಕರ್, ಶ್ರವಣಯಂತ್ರಗಳನ್ನು ಟ್ರಸ್ಟ್‌ನಿಂದ ವಿತರಣೆ ಮಾಡಲಾಗಿದೆ. ಅಂತೆಯೇ ಆಟೋ, ಗೂಡ್ಸ್‌, ಲಾರಿ
ಚಾಲಕರಿಗೆ ಸಮವಸ್ತ್ರ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ಆರ್ಥಿಕ ಸಹಾಯ ಮಾಡಲಾಗಿದೆ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಯು.ಪಿ.ಎಸ್ಸಿ.ಕೆ.ಪಿ.ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮನಸ್ಟೈರ್ಯ ತುಂಬಿ ಪದವಿ ನಂತರ ಮುಂದೇನು ಎನ್ನುವ ವಿಚಾರಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಎಲ್ಲಾ ಕಡೆ ಜನ ಸಾಮಾನ್ಯರು ಪ್ರೀತಿ ಅಭಿಮಾನ ತೋರುತ್ತಿದ್ದಾರೆ. ಕ್ಷೇತ್ರದ ಜನರೂ ಕೂಡ ಬದಲಾವಣೆಯ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕೂಡ ಚುನಾವಣೆಯಲ್ಲಿ ಜನರೂ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಹಾಗೂ ವಿಶ್ವಾಸವಿದೆ ಎನ್ನುವುದು ವಿನಯ್ ಕುಮಾರ್ ಅವರ ಅಚಲವಾದ ನಂಬಿಕೆ.

ವಿನಯ್ ಕುಮಾರ್ ಏನಂತಾರೆ..?

ಪಾದಯಾತ್ರೆ ಮೂಲಕ ಜಿಲ್ಲೆ ಮಾತ್ರವಲ್ಲ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರ ಗಮನ ಸೆಳೆದಿರುವ ವಿನಯ್ ಕುಮಾರ್ ನಾನು ಕಾಂಗ್ರೆಸ್ಸಿಗ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ. ಜನರನ್ನು ತಲುಪಬೇಕು, ಜನರ ಕಷ್ಟ
ಅರಿಯಬೇಕು, ಜನರ ಪ್ರೀತಿ ಸಂಪಾದನೆ ಮಾಡಬೇಕು, ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಜನರ ಬಳಿಗೆ ಹೋಗಬೇಕೆಂಬ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ದ್ರೋಹ ಮಾಡುವುದಿಲ್ಲ ಎನ್ನುವ ಮೂಲಕ ತಾನೊಬ್ಬ ಕಾಂಗ್ರೆಸ್ ಶಿಸ್ತಿನ ಸಿಪಾಯಿ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ವಿನಯ ಮಾರ್ಗ ಟ್ರಸ್ಟ್ ನಿಂದ ಪಾದಯಾತ್ರೆ ಮೂಲಕ ಸಾಧ್ಯವಾದಷ್ಟು ಜಿಲ್ಲೆಯ ಎಲ್ಲಾ ವರ್ಗದ ಜನರ ಮನದಿಂಗಿತ ಅರ್ಥಮಾಡಿಕೊಳ್ಳಲು ಮುಂದಾಗಿರುವ, ಪಾದಯಾತ್ರೆ ನಡೆಸುತ್ತಿರುವ ವಿನಯ್ ಕುಮಾರ್ ಅವರ ಭವಿಷ್ಯ ಉಜ್ವಲವಾಗಿರಲಿ ಎಂಬ ಹಾರೈಕೆಯೂ ಬರುತ್ತಿವೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment