SUDDIKSHANA KANNADA NEWS/ DAVANAGERE/ DATE:04-03-2024
ದಾವಣಗೆರೆ: ಮಧ್ಯಕರ್ನಾಟಕ ಹಾಗೂ ದಾವಣಗೆರೆ ನಗರದ ಶಕ್ತಿ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಹಾಗೂ ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮಾರ್ಚ್ 19 ಹಾಗೂ 20ರಂದು ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ನಗರದ ಶ್ರೀದುರ್ಗಾಂಬಿಕಾ ದೇವಿ ಮತ್ತು ವಿನೋಬನಗರ ಶ್ರೀಚೌಡೇಶ್ವರಿ ದೇವಿ ಜಾತ್ರೆಯ ಪ್ರಯುಕ್ತ ಜಾತ್ರೆಯ ಅವಧಿಯಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಒದಗಿಸಬೇಕಾದ ಸೌಲಭ್ಯಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಸಿದ್ದತೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಮಾ.5 ರಂದು ಸಂಜೆ 6 ಗಂಟೆಗೆ ಶ್ರೀದುರ್ಗಾಂಬಿಕಾದೇವಿಯ ದೇವಸ್ಥಾನದ ಆವರಣದಲ್ಲಿ ಸಭೆ ಕರೆಯಲಾಗಿದೆ.
ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವ: ಮಾರ್ಚ್ 17ರಂದು ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ 8ಗಂಟೆಗೆ ಕಂಕಣಧಾರಣೆ, ನಂತರ ಕೋಣದೊಂದಿಗೆ ನಗರದಲ್ಲಿ ಸಾರುವುದು, 18, 19ರಂದು ದೇವಿಗೆ ವಿಶೇಷ ಅಲಂಕಾರ, ಭಕ್ತಿ ಸಮರ್ಪಣೆ, 20ರಂದು ಮುಂಜಾನೆ ಚರಗ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಪ್ರತಿ ವರ್ಷದಂತೆ ಕುರಿಕಾಳಗ, ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ದಾವಣಗೆರೆ ನಗರದ ದುಗ್ಗಮ್ಮ ದೇವಸ್ಥಾನದ ಮುಂಭಾಗದ ಪ್ರಸಾದ ನಿಲಯದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ, ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಧರ್ಮದರ್ಶಿ ಗೌಡ್ರು ಚನ್ನಬಸಪ್ಪರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ದುರ್ಗಮ್ಮ ಜಾತ್ರೆ ಅಂದರೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಮಾತ್ರವಲ್ಲ, ಈ ಜಾತ್ರೆಗೆ ಇಡೀ ದಾವಣಗೆರೆಯೇ ಸಜ್ಜಾಗುತ್ತಿದೆ
ಈ ಜಾತ್ರೆಗೆ ಎಲ್ಲೇ ಇದ್ದರೂ ಜನರು ತಂಡೋಪತಂಡವಾಗಿ ಬರುತ್ತಾರೆ. ವಿದೇಶದಲ್ಲಿ ಇದ್ದರೂ ಸಹ ಈ ಜಾತ್ರೆ ತಪ್ಪಿಸಿಕೊಳ್ಳುವುದಿಲ್ಲ. ಅಷ್ಟು ಖ್ಯಾತಿ ಪಡೆದಿದೆ ಈ ಜಾತ್ರಾ ಮಹೋತ್ಸವ. ಶಾಮನೂರು ಶಿವಶಂಕರಪ್ಪರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಮಹೋತ್ಸವದ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಮಾರ್ಚ್ 19 ಹಾಗೂ 20ರಂದು ಅದ್ಧೂರಿಯಾಗಿ ಆಚರಣೆ ಮಾಡಲು ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗಾಗಲೇ ಕಂಬರಹಂದರ ಪೂಜೆ ನೆರವೇರಿಸಲಾಗಿದೆ.