SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಬೇಸಿಗೆ ಆರಂಭವಾಗಿದೆ. ಜೊತೆಗೆ ದುರ್ಗಾಂಬಿಕಾ ತಾಯಿಯ ಜಾತ್ರೆಯೂ ಸಡಗರ, ಸಂಭ್ರಮದಿಂದ ಆಚರಿಸಲಾಗಿದೆ. ಇನ್ನೂ ಆಚರಣೆ ಇದೆ. ಆದ್ರೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವೆಡೆ ಈಗಲೇ ನೀರಿಗೆ ಹಾಹಾಕಾರ ಬಂದಿದೆ. ಈಗ ಮಹಾನಗರ ಪಾಲಿಕೆಯೇ ಹೇಳಿರುವಂತೆ ಮತ್ತೆ ನೀರಿಗೆ ಪರದಾಡುವ ಸಾಧ್ಯತೆಯೂ ಹೆಚ್ಚಾಗಲಿದೆ.
ಹೌದು. ಕೆಲ ಬಡಾವಣೆಗಳಲ್ಲಿ ನೀರು ಈ ಹಿಂದೆ ಬರುತ್ತಿದ್ದಂತೆ ಬರುತ್ತಿಲ್ಲ. ಇದರಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಕೆಲ ಬಡಾವಣೆಗಳಲ್ಲಿ ನೀರಿನ ಟ್ಯಾಂಕರ್ ತರಿಸಲಾಗುತ್ತಿದೆ. ಬೇಸಿಗೆಯ ಝಳ ಹೆಚ್ಚಿದಂತೆ ಕುಡಿಯುವ ನೀರಿಗೂ ಬೇಡಿಕೆಯೂ ಹೆಚ್ಚಾಗುತ್ತಿದೆ. ನೀರು ಪಡೆಯಲು ಹಣವನ್ನೂ ಕೊಡಬೇಕಾಗಿದೆ.
ದುರ್ಗಾಂಬಿಕಾ ತಾಯಿ ಜಾತ್ರೆ ಇರುವ ಕಾರಣಕ್ಕೆ ನೆಂಟರು, ಸ್ನೇಹಿತರು ಸೇರಿದಂತೆ ಹೆಚ್ಚಿನ ನೀರು ಬೇಕಾಗುತ್ತದೆ. ಹಳೇ ದಾವಣಗೆರೆಗೆ ಹೆಚ್ಚಿನ ರೀತಿಯಲ್ಲಿ ಹಬ್ಬದ ಕಾರಣ ಕೊಡಲಾಗಿದೆ. ಆದ್ರೆ, ಕೆಲ ವಾರ್ಡ್ ಗಳಲ್ಲಿನ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಸಾರ್ವಜನಿಕ ಪ್ರಕಟಣೆಯಲ್ಲೇನಿದೆ…?
ತುಂಗಾ ಭದ್ರಾ ನದಿಯಲ್ಲಿ ನೀರು ಲಭ್ಯವಿಲ್ಲದ ಕಾರಣ ಹರಿಹರ ತಾಲೂಕಿನ ರಾಜನಹಳ್ಳಿ ಹತ್ತಿರವಿರುವ ದಾವಣಗೆರೆ ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜು ವಿಭಾಗದ ಜಾಕ್ ವೆಲ್ ಹಾಗೂ ಬಾತಿ ಹತ್ತಿರ ಇರುವ ನೀರು ಶುದ್ಧೀಕರಣ ಘಟಕವನ್ನು ಸ್ಥಗಿತಗೊಳಿಸಲಾಗಿರುತ್ತದೆ.
ಆದ್ದರಿಂದ ಇಡೀ ದಾವಣಗೆರೆ ನಗರಕ್ಕೆ ಕುಂದುವಾಡ ಮತ್ತು ಟಿವಿ ಸ್ಟೇಷನ್ ಕೆರೆ ನೀರು ಶುದ್ದೀಕರಣ ಘಟಕಗಳಿಂದ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಇನ್ನು ಮುಂದೆ ಹಾಲಿ ಪೂರೈಸುತ್ತಿರುವ ನೀರಿನ ಸರದಿ ಇಲ್ಲವೇ ಪಾಳೆಯಲ್ಲಿ ವಿಳಂಬವಾಗುತ್ತದೆ.
ಆದುದರಿಂದ ಸಾರ್ವಜನಿಕರು ದಿನನಿತ್ಯ ಗೃಹ ಬಳಕೆಗೆ ಹಾಲಿ ಇರುವ ಮಹಾನಗರ ಪಾಲಿಕೆಯ ಬೋರ್ ವೆಲ್ ನೀರು ಅಥವಾ ತಮ್ಮ ಸ್ವಂತ ಬೋರ್ ವೆಲ್ ನೀರನ್ನು ಉಪಯೋಗಿಸಲು ಈ ಮೂಲಕ ಕೋರಲಾಗಿದೆ ಎಂದು ಮಹಾನಗರ ಪಾಲಿಕೆಯ ಪ್ರಕಟಣೆ ತಿಳಿಸಿದೆ.
ಕುಡಿಯುವ ನೀರನ್ನು ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯತೆಯ ಜವಾಬ್ದಾರಿಯಾಗಿರುವ ಕಾರಣ ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಆಯುಕ್ತೆ ರೇಣುಕಾ ಅವರು ಮನವಿ ಮಾಡಿದ್ದಾರೆ.
ಹರಿಹರ, ಮಲೇಬೆನ್ನೂರಿನಲ್ಲಿಯೂ ಸಮಸ್ಯೆ:
ತುಂಗಾಭದ್ರಾ ನದಿ ನೀರು ಆಶ್ರಯಿಸಿರುವ ಎಲ್ಲಾ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ತಲೆದೋರಿದೆ. ಮಲೇಬೆನ್ನೂರು, ಹರಿಹರದ ಗ್ರಾಮಗಳಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತುಂಗಾಭದ್ರಾ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ನೀರು ಪೂರೈಸಲು ಆಗುತ್ತಿಲ್ಲ. ನೀರು ಹರಿಸಿದ ಬಳಿಕ ಈ ಸಮಸ್ಯೆ ಬಗೆಹರಿಯಲಿದೆ. ಒಂದೆರಡು ದಿನಗಳಲ್ಲಿ ತುಂಗಾಭದ್ರಾ ನದಿಗೆ ನೀರು ಬರುವ ನಿರೀಕ್ಷೆ ಇದೆ. ಇದು ಆದರೆ ಸಮಸ್ಯೆ ಬಗೆಹರಿಯುತ್ತದೆ. ಆದ ಕಾರಣ ಜನರು ಸಹಕರಿಸುವಂತೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.