ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಯೆಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೆಸರು ಅಧಿಕೃತ ಘೋಷಣೆ: ಶಾಮನೂರು ಶಿವಶಂಕರಪ್ಪರ ಸೊಸೆ ಕುರಿತ ಸ್ಪೆಷಲ್ ಸ್ಟೋರಿ

On: March 21, 2024 10:06 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-03-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರನ್ನು ಅಧಿಕೃತವಾಗಿ ಎಐಸಿಸಿ ಘೋಷಿಸಿದೆ. ಈ ಮೂಲಕ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಪ್ರಭಾ ಮಲ್ಲಿಕಾರ್ಜುನ್ ಎದುರಾಳಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಮಹಿಳೆಯರಿಬ್ಬರ ಜಿದ್ದಾಜಿದ್ದಿಗೆ ದಾವಣಗೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಕ್ಷಿಯಾಗಲಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ
ಮಲ್ಲಿಕಾರ್ಜುನ್ ಅವರು ಸಮಾಜ ಸೇವೆ, ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದಲೂ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತಾದರೂ ಇಂದು ಅಧಿಕೃತವಾಗಿ ಘೋಷಿಸಲಾಗಿದೆ.

ಡಾ. ಪ್ರಭಾ ಮಲ್ಲಿಕಾರ್ಜುನ್ ರ ಹಿನ್ನೆಲೆ:

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಕೃಷಿ ಹಿನ್ನೆಲೆಯ ಗೌಡ್ರು ಕುಟುಂಬದಲ್ಲಿ 1976ರ ಮಾರ್ಚ್ 15ರಂದು ಗಿರಿಜಮ್ಮ ಮತ್ತು ದಿವಂಗತ ಕೆ.ಜಿ ಪರಮೇಶ್ವರಪ್ಪರವರ ಪುತ್ರಿಯಾಗಿ ಜನಿಸಿದರು. ಹರಿಹರದ ಕುಮಾರ ಪಟ್ಟಣಂ ನ ಫಾಲಿ ಫೈಬರ್ ಸಿಬಿಎಸ್‌ಇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣವನ್ನು ಮುಗಿಸಿ ನಂತರ ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನದಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ.

ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ವಿವಾಹದ ನಂತರ ಅವರ ಕುಟುಂಬದ ಸಾಮಾಜಿಕ, ವ್ಯಾಪಾರ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬೆಂಬಲವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ದಾವಣಗೆರೆಯ ಪ್ರತಿಷ್ಠಿತ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿಯೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಎಸ್.ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಷ್ಟಿಯಾಗಿ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುತ್ತಿದ್ದಾರೆ.

ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ತಮ್ಮ ಟ್ರಸ್ಟ್ ವತಿಯಿಂದ ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ, ತಾಯಂದಿರು ಮತ್ತು ಮಕ್ಕಳಲ್ಲಿ ಸುಧಾರಿತ ಘೋಷಣೆ, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು, ಆರೋಗ್ಯ, ಶಿಕ್ಷಣ ಮತ್ತು ವಿದ್ಯಾರ್ಥಿ ವೇತನದ ಅವಕಾಶಗಳನ್ನು ಒದಗಿಸುವ ಹಾಗೂ ಅಂಗನವಾಡಿಗಳಲ್ಲಿ ರಕ್ತಹೀನತೆ ಮತ್ತು ಆಪೌಷ್ಟಿಕತೆಯ ಕಾರ್ಯಕ್ರಮಗಳೊಂದಿಗೆ ಮಹಿಳೆಯರಿಗೆ ಉಚಿತ ರೋಗ ನಿರ್ಣಯ ಮತ್ತು ಚಿಕಿತ್ಸಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿರುವುದು ಡಾ. ಪ್ರಭಾ
ಮಲ್ಲಿಕಾರ್ಜುನ್ ರ ಸೇವೆಯಾಗಿದೆ.

ಶಾಲಾ ಮಕ್ಕಳಿಗೆ. ಉಚಿತ ದಂತ ಜಾಗೃತಿ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡುವುದು ಟ್ರಸ್ಟ್ ನ ಪ್ರಮುಖ ಕರ್ತವ್ಯ ಮತ್ತು ಅವುಗಳನ್ನು ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯುವ ಜನತೆಗೆ ರಕ್ತದಾನದ ಬಗ್ಗೆ ಇರುವ ಭಯ ನಿವಾರಣೆ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ಪ್ರತಿಜ್ಞಾ ಎಂಬ ಕಾರ್ಯಕ್ರಮದಡಿ, ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ತಮ್ಮ ಟ್ರಸ್ಟ್ ಮೂಲಕ ಆಯೋಜನೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಗುಳುನಗೆ ಯೋಜನೆಯಡಿ ಶಾಲಾ ಮಕ್ಕಳಿಗೆ ದಂತ ಪರೀಕ್ಷೆ ಹಾಗೂ ತಿಳುವಳಿಕೆ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಸಕಲ ವೈದ್ಯಕೀಯ ಸೌಕರ್ಯ ಹೊಂದಿರುವ ಬಸ್ ಮೂಲಕ, ವೈದ್ಯಕೀಯ ಸೇವೆ ಕಲ್ಪಿಸಲು ಕಷ್ಟ ಇರುವಂತಹ ದೂರ ದೂರದ ಹಳ್ಳಿಗಳಿಗೂ ಸಹ ವೈದ್ಯಕೀಯ ಸೇವೆ ಒದಗಿಸುವ ವಿನೂತನ ಯೋಜನೆ ಪ್ರಾರಂಭಿಸಿದ್ದಾರೆ.

ಡಾ. ಪ್ರಭಾ ಮಲ್ಲಿಕಾರ್ಜುನ್ ಲೈಫ್ ಟ್ರಸ್ಟಿ:

ಲೈಫ್ ಟ್ರಸ್ಟಿ, ಎಸ್.ಎಸ್. ಕೇರ್ ಟ್ರಸ್ಟ್ ಹಾಗೂ ಅಡಳಿತ ಮಂಡಳಿ ಸದಸ್ಯರು, ಬಾಪೂಜಿ ವಿದ್ಯಾಸಂಸ್ಥೆ. ಡಾ. ಶಾಮನೂರು ಶಿವಶಂಕರಪ್ಪ ಎಸ್‌.ಎಸ್‌ ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ತಮ್ಮ ಟ್ರಸ್ಟ್ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಹಲವಾರು ಉಚಿತ ಯೋಜನೆಗಳನ್ನು ನೀಡಿದ್ದಾರೆ.

ಪ್ರಮುಖ ಸೇವೆಗಳು:

  • 385 ಮಹಿಳೆಯರಿಗೆ ಉಚಿತ ಹೆರಿಗೆ ಹಾಗೂ ಜನಿಸಿದ ಮಗುವಿನ ಆರೈಕೆ.
  • 434 ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ.
  • ಡಯಾಲಿಸಿಸ್ ಚಿಕಿತ್ಸೆ ಅವಶ್ಯಕತೆ ಇರುವ 2817 ರೋಗಿಗಳಿಗೆ ಉಚಿತವಾಗಿ 16437 ಬಾರಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ.
  • 1038 ಮಹಿಳೆಯರಿಗೆ ಟ್ರಸ್ಟ್ ಆರೋಗ್ಯ ಶಿಬಿರದ ಮೂಲಕ ಉಚಿತವಾಗಿ ಸ್ತನ ಕ್ಯಾನ್ಸರ್ ಪರೀಕ್ಷೆ
  • 887 ಮಹಿಳೆಯರಿಗೆ ಗರ್ಭ ಕ್ಯಾನ್ಸರ್ ಪರೀಕ್ಷೆ ನಡೆಸಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯುತ್ತಿದೆ.

ಪ್ರಭಾ ಮಲ್ಲಿಕಾರ್ಜುನ್ ಅವರು ಸಹ ಸಾಕಷ್ಟು ಸಮಾಮುಖಿ ಕಾರ್ಯ ನಿರ್ವಹಿಸಿದ್ದಾರೆ. ಝನಸೇವೆ, ಸಾಮಾಜಿಕ ಸೇವೆ, ಆರೋಗ್ಯದ ಬಗ್ಗೆ ಕಾಳಜಿ ಸೇರಿದಂತೆ ಜನರಿಗೆ ಹತ್ತಿರವಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿತ್ತು.

ಬಾಲಕನಿಗೆ ನೆರವು:

ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಕಳೆದ ಮಾರ್ಚ್ 15 ರಂದು ಪಾನಿಪೂರಿ ಸೇವಿಸಿ 19 ಮಕ್ಕಳು ವಾಂತಿಭೇದಿಯಿಂದ ಅಸ್ವಸ್ಥರಾದ ಘಟನೆ ನಡೆದಿತ್ತು. ಈ ಪೈಕಿ ಬಿಲಾಲ್ ಎಂಬ ಏಳು ವರ್ಷದ ಬಾಲಕ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾನೆ. ಈ ಬಾಲಕನ ಕುಟುಂಬದವರಿಗೆ ನೆರವು ನೀಡುವ ಮೂಲಕ ಎಸ್. ಎಸ್. ಕೇರ್ ಟ್ರಸ್ಟ್ ನ ಆಜೀವ ಸದಸ್ಯೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾನವೀಯತೆ ಮೆರೆದಿದ್ದರು.

ಆಸ್ಪತ್ರೆ ಆವರಣದಲ್ಲಿ ಮೃತ ಬಾಲಕನ ಕುಟುಂಬ ವರ್ಗದವರ ರೋಧನೆ ಮುಗಿಲು ಮುಟ್ಟಿತ್ತು. ಆಸ್ಪತ್ರೆಗೆ ಆಗಮಿಸಿದ ಹರಿಹರ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹಾಗೂ ತುರ್ಚುಗಟ್ಟದ ರಿಯಾಜ್ ಅವರು ಬಾಲಕ ಮೃತಪಟ್ಟಿದ್ದು ಆಸ್ಪತ್ರೆಯ ಬಿಲ್ ನಲ್ಲಿ ರಿಯಾಯಿತಿ ನೀಡಲು ಎಸ್ ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿಯಾದಂತಹ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸಂಪರ್ಕಿಸಿದರು. ವಿಷಯ ತಿಳಿದು ಆಸ್ಪತ್ರೆಗೆ ಬಿಲ್ ನಲ್ಲಿ ಪೂರ್ಣ ರಿಯಾಯಿತಿ ನೀಡುವ ಮೂಲಕ ಕುಟುಂಬ ವರ್ಗದವರ ನೋವಿನಲ್ಲಿ ಡಾ. ಪ್ರಭಾ ಭಾಗಿಯಾದರು. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಈ ಕಾರ್ಯಕ್ಕೆ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು.

ಉಚಿತ ಕುಡಿಯುವ ನೀರು:

ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ, ಕುಡಿಯುವ ನೀರಿಗೆ ಸಾರ್ವಜನಿಕರು ಪರಿತಪಿಸುತ್ತಿದ್ದಾರೆ” ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಎಸ್.ಎಸ್ ಕೇರ್ ಟ್ರಸ್ಟ್ ನೂತನ ಯೋಜನೆಯೊಂದಕ್ಕೆ ಇಂದು ಚಲನೆ ನೀಡಿದ್ದು ಅದುವೇ “ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ನೀಡುವ ಯೋಜನೆ. ಎಸ್.ಎಸ್ ಕೇರ್ ಟ್ರಸ್ಟ್ ಇಲ್ಲಿಯವರೆಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಹೆರಿಗೆ, ಮಕ್ಕಳ ಆರೈಕೆ, ಡಯಾಲಿಸಿಸ್ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಮನೆ ಮಾಡಿತ್ತು ಇದರ ಮುಂದುವರಿದ ಭಾಗವಾಗಿ ನೀರಿನ ಭವಣೆಯಿಂದ ಪರಿತಪ್ಪಿಸುತ್ತಿದ್ದ ಸಾರ್ವಜನಿಕರಿಗಾಗಿ 5 ಟ್ಯಾಂಕರ್ ಗಳ ಮೂಲಕ ನೀರನ್ನು ಉಚಿತವಾಗಿ ನೀಡುವ ಮೂಲಕ ತನ್ನ ಜನಪರ ಯೋಜನೆಯನ್ನು ಮುಂದುವರಿಸುತ್ತಿದೆ.

ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಯಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಇಂದು ಸಂಜೆ ಟ್ಯಾಂಕರ್ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಉಚಿತ ನೀರು ನೀಡುವ ಯೋಜನೆಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಟ್ರಸ್ಟಿನ ಸಂಸ್ಥಾಪಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಅವರ ಪುತ್ರಿ ಡಾ. ಮಂಜುಳಾ ಶಿವಶಂಕರ್, ಮೊಮ್ಮಗ ಸಮರ್ಥ್ ಶಾಮನೂರು, ಗಿರಿಜಮ್ಮ ಸೇರಿದಂತೆ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಇದೇ ರೀತಿ ಅನೇಕ ರೀತಿಯ ಸಮಾಜ ಸೇವೆ ಮಾಡಿದ್ದು, ಅಧಿಕೃತವಾಗಿ ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಮಹಿಳೆಯರಿಬ್ಬರ ಕದನ ಕಣಕ್ಕೆ ವೇದಿಕೆ ಸಿದ್ಧವಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment