Davangere Congress MP candidate Dr. Prabha Mallikarjun Interview | ಡಾ. ಪ್ರಭಾ ಮಲ್ಲಿಕಾರ್ಜುನ್ ವಿಶೇಷ ಸಂದರ್ಶನ
ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣಾ ಕಣ ಇಡೀ ರಾಜ್ಯದ ಗಮನ ಸೆಳೆದಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಚ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಸಿಲಿನ ಝಳದ ನಡುವೆಯೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಹೋದ ಕಡೆಗಳಲ್ಲಿ ಭಾರೀ ಸ್ಪಂದನೆ, ಬೆಂಬಲ ವ್ಯಕ್ತವಾಗುತ್ತಿದೆ.
ವಿದ್ಯಾವಂತರಾಗಿರುವ, ಶಾಮನೂರು ಕುಟುಂಬದ ಸೊಸೆಯಾಗಿರುವ, ಸಚಿವರ ಪತ್ನಿಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೋದೆಡೆಗಳಲ್ಲಿ ಅಪೂರ್ವ ಸ್ವಾಗತ ಸಿಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಬ್ಬರದ
ಪ್ರಚಾರವೂ ಜೋರಾಗುತ್ತಿದೆ. ಈ ನಡುವೆ ಸುದ್ದಿಕ್ಷಣ ನ್ಯೂಸ್ ಡಿಜಿಟಲ್ ಮೀಡಿಯಾಕ್ಕೆ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ( Dr. Prabha Mallikarjun Interview)

ಟ್ರೆಂಡ್ ಹೇಗಿದೆ…?: Dr. Prabha Mallikarjun Interview
ಡಾ. ಪ್ರಭಾ ಮಲ್ಲಿಕಾರ್ಜುನ್: ನೀವೇ ನೋಡುತ್ತಿದ್ದೀರಲ್ವಾ. ನಮಗಿಂತ ಚೆನ್ನಾಗಿ ನಿಮಗೆ ಗೊತ್ತು. ತಳಮಟ್ಟದಿಂದ ಹಿಡಿದು ನಗರದವರೆಗೂ ಉತ್ತಮ ಪ್ರತಿಕ್ರಿಯೆ ಸ್ಪಂದನೆ ವ್ಯಕ್ತವಾಗುತ್ತಿದೆ. ನಾನು ಹೋದ ಹಳ್ಳಿಗಳಲ್ಲಿನಾಲ್ಕು ಬಾರಿ ಗೆದ್ದ ಸಂಸದರು ಬಂದಿಲ್ಲ ಎನ್ನುವುದು ಜನಸಾಮಾನ್ಯರ ಮಾತು. ಕೈಗೆ ಸಿಗುವುದಿಲ್ಲ, ಫೋನ್ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿದೆ.
ಜನರು ಏನು ಹೇಳುತ್ತಿದ್ದಾರೆ…?: Dr. Prabha Mallikarjun Interview
ಡಾ. ಪ್ರಭಾ ಮಲ್ಲಿಕಾರ್ಜುನ್: ಮಳೆ ಬರುತ್ತಿಲ್ಲ ಒಂದು ಕಡೆ. ಬರಗಾಲ ಬಂದಿದೆ ಇನ್ನೊಂದೆಡೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರಿಗೂ ಅರ್ಥವಾಗಿದೆ. ಮಳೆಗಾಲದ ವೇಳೆ ನೀರು ಸಂಗ್ರಹಿಸಿ, ರೈತರ ಜಮೀನುಗಳಿಗೆ ನೀರೊದಗಿಸಲು ಯಾವ ಕ್ರಮ ತೆಗೆದುಕೊಂಡಿದ್ದಾರೆ ಸಂಸದರು. ಯಾವ ಯೋಜನೆ ಜಾರಿ ಮಾಡಿದ್ದಾರೆ? ನೀರು ಸಂಗ್ರಹಣೆ ಕುರಿತಂತೆ ನಿಮ್ಮ ಪ್ರಯತ್ನ ಏನು? ಇದು ಸಂಸದರಾಗಿದ್ದವರಿಗೆ ಜನತೆ ಕೇಳಬೇಕಾಗಿರುವ ಪ್ರಶ್ನೆ.
Read Also: ಕಮಲ ಬಿಟ್ಟು ಹಸ್ತ ಕೈಹಿಡಿದ ಎಂ. ಪಿ. ರೇಣುಕಾಚಾರ್ಯ ಆಪ್ತರು..: ಬಿಜೆಪಿ ವಿರುದ್ಧ ಗುಟುರು..!
ಅಭಿವೃದ್ಧಿ ಬಗ್ಗೆ…?
ಡಾ. ಪ್ರಭಾ ಮಲ್ಲಿಕಾರ್ಜುನ್: ರೈಲ್ವೆ ಮಾರ್ಗಗಳು, ರಸ್ತೆಗಳು ಸಂಸದರಿಗೆ ಸಂಬಂಧಿಸಿದ ಒಡೆತನದ ಕಾರ್ಖಾನೆಗಳಿಗೆ ಹೋಗುವುದಕ್ಕೆ ಹೆಚ್ಚಿನ ಅನುದಾನ ಬಳಕೆ ಮಾಡಿ ಅನುಕೂಲ ಮಾಡಿಕೊಳ್ಳಲಾಗಿದೆ. ಭೀಮನಸಮುದ್ರ ಮತ್ತು ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಬೇರೆ ಕಡೆ ಹಾಕಿದ್ದ ಅನುದಾನ ತಂದೆ ಅಭಿವೃದ್ಧಿಪಡಿಸಲಾಗಿದೆ. ಇದು ಜನರು ಹೇಳುತ್ತಿರುವ ಮಾತು.
ಕೇಂದ್ರ, ರಾಜ್ಯ ಸರ್ಕಾರದ ಗ್ಯಾರಂಟಿಗಳು ಕೈಹಿಡಿಯುತ್ತವೆಯಾ?
ಡಾ. ಪ್ರಭಾ ಮಲ್ಲಿಕಾರ್ಜುನ್: ಹೌದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪಕ್ಷಕ್ಕೆ ಅನುಕೂಲವಾಗಲಿದೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೂ ಸಹ ಯೋಜನೆಗಳ ಬಗ್ಗೆ ಚರ್ಚೆ ವೇಳೆ ಹೇಳಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ 18ರಿಂದ 19 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ನಿಜವೂ ಹೌದು.
ಮೋದಿ ಅಲೆ ಇದೆಯಾ…?
ಡಾ. ಪ್ರಭಾ ಮಲ್ಲಿಕಾರ್ಜುನ್: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಹತ್ತು ವರ್ಷಗಳು ಕಳೆದಿವೆ. ಕೇವಲ ಭರವಸೆ, ಘೋಷಣೆಯಷ್ಟೇ ಉಳಿದಿದ್ದು, ಸುಳ್ಳು ಭರವಸೆ ಕೊಟ್ಟು ಮತ ಪಡೆಯಲಾಗುತ್ತಿದೆ. ನನಗೆ ಅನಿಸಿದ ಪ್ರಕಾರ ಈ ಬಾರಿ ಎಲ್ಲಿಯೂ ನರೇಂದ್ರ ಮೋದಿ ಅವರ ಅಲೆ ಕಾಣುತ್ತಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಉದ್ಯೋಗಗಳು ಸಿಕ್ಕಿವೆಯಾ? ಪ್ರಣಾಳಿಕೆಯಲ್ಲಿ ಘೋಷಿಸಿದ ಎಷ್ಟು ಯೋಜನೆಗಳು ಜಾರಿಯಾಗಿವೆ…?
ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡನೆ ಮಾಡಿದ್ದಾರೆ. ಮನಮೋಹನ್ ಸಿಂಗ್ ಒಬ್ಬ ಆರ್ಥಿಕ ತಜ್ಞರು. ಅವರ ಬಳಿಕ ಅತ್ಯುತ್ತಮ ಬಜೆಟ್ ನೀಡಿದವರು ಎಂದರೆ ಸಿದ್ದರಾಮಯ್ಯ ಅವರು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳು ಈಡೇರಿವೆ. ಬಿಜೆಪಿ ಕೊಟ್ಟಿದ್ದ ಎಷ್ಟು ಆಶ್ವಾಸನೆಗಳು, ಪ್ರಣಾಳಿಕೆ ಜಾರಿಯೇ ಆಗಿಲ್ಲ.
ಸಿದ್ದರಾಮಯ್ಯರು ಆರ್ಥಿಕ ತಜ್ಞರು. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ದೇಶದ 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಬಿಜೆಪಿ ಎಷ್ಟು ರೈತರ ಸಾಲ ಮನ್ನಾ ಮಾಡಿದೆ? ಅದಾನಿ – ಅಂಬಾನಿ ಅವರ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ರೈತರು ದೇಶದ ಬೆನ್ನಲುಬು ಅಂತಾರೆ. ಕಾಂಗ್ರೆಸ್ ಅನ್ನದಾತರ ಸಾಲ ಮನ್ನಾ ಮಾಡಿ, ಯೋಜನೆಗಳನ್ನು ಕೊಟ್ಟು ಬದುಕು ಹಸನುಗೊಳಿಸಲು ಕ್ರಮ ಕೈಗೊಂಡರೆ, ಬಿಜೆಪಿ ರೈತರ ಬೆನ್ನುಮೂಳೆ ಮುರಿದು ಬದುಕು ಮೂರಾಬಟ್ಟೆಯಾಗುವಂತೆ ಮಾಡಿದೆ. ಗೊಬ್ಬರ, ಬಿತ್ತನೆ ಬೀಜ, ಕೃಷಿ ಪರಿಕರಗಳು ಸೇರಿದಂತೆ ಎಲ್ಲಾ ವಸ್ತುಗಳು ದುಬಾರಿಯಾಗಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಕೈ ಸೇರ್ಪಡೆ ಬಗ್ಗೆ..?
ಡಾ. ಪ್ರಭಾ ಮಲ್ಲಿಕಾರ್ಜುನ್: ಐಡಿಯಾಲಜಿ ಇಟ್ಟುಕೊಂಡು ಬಿಜೆಪಿ ಪಕ್ಷದಲ್ಲಿದ್ದವರು ಅಲ್ಲಿ ಈಗ ಇಲ್ಲ. ಕಾಂಗ್ರೆಸ್ ಗೆ ಬಿಜೆಪಿಯಿಂದ ಬಂದ ನಾಯಕರು, ಕಾರ್ಯಕರ್ತರು ಹೇಳುತ್ತಿದ್ದಾರೆ. ವಾಗೀಶ್ ಸ್ವಾಮಿ ಅವರೂ ಇದನ್ನೇ ಹೇಳಿದ್ದರು. ಐಡಿಯಾಲಜಿ ಇಟ್ಟುಕೊಂಡು ಸೇರಿದ್ದೆವು. ಬಿಜೆಪಿಯಲ್ಲಿ ಇಲ್ಲದಾಗಿದೆ. ನುಡಿದಂತೆ ನಡೆದಿರುವ ಸರ್ಕಾರ ಕಾಂಗ್ರೆಸ್. ಬಡವರ ಬಗ್ಗೆ ಅನುಕಂಪ ಇದೆ. ಎಲ್ಲಾ ಜಾತಿ, ಧರ್ಮದವರ ಪರವಾಗಿರುವುದು ಕಾಂಗ್ರೆಸ್ ಮಾತ್ರ.
ಕ್ಷೇತ್ರದ ಬಗ್ಗೆ ಧ್ವನಿ ಎತ್ತುತ್ತಿರಾ?
ಡಾ. ಪ್ರಭಾ ಮಲ್ಲಿಕಾರ್ಜುನ್: ನಾನು ವಿದ್ಯಾವಂತೆ. ಭಾಷೆ ಮೇಲೆ ಹಿಡಿತವಿದೆ. ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ಇರುತ್ತೆ. ನನಗೂ ಆತ್ಮಸಾಕ್ಷಿ ಇದೆ. ಜನಸೇವೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಮೊದಲ ಬಾರಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಜನರು ನೀಡುತ್ತಿರುವ ಪ್ರೀತಿ, ವಿಶ್ವಾಸ, ಆತ್ಮವಿಶ್ವಾಸ, ಧೈರ್ಯ ಎಲ್ಲವೂ ನನ್ನನ್ನು ಮತ್ತಷ್ಟು ಬಲಶಾಲಿಯಾಗುವಂತೆ ಮಾಡಿದೆ. ಬಡ ಮಹಿಳೆ, ಅಜ್ಜಿ, ಯುವಕರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರನ್ನೂ ಮಾತನಾಡಿಸುತ್ತೇನೆ. ಎಲ್ಲರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಜವಾಬ್ದಾರಿ. ಜನರ ಸಂಕಷ್ಟಗಳಿಗೆ ಧ್ವನಿ ಎತ್ತಬೇಕು ಎಂಬುದು ನನ್ನ ಕನಸು. ಬಡವರ ಜೊತೆಗೆ ಜಿಲ್ಲೆಯ ಹದಿನಾರುವರೆ ಲಕ್ಷ ಮತದಾರರ ಧ್ವನಿಯಾಗಿ ಕೆಲಸ ಮಾಡಬೇಕು ಎಂಬುದು ನನ್ನ ಆಸೆ.
ಎಸ್. ಎಸ್., ಎಸ್. ಎಸ್. ಎಂ. ಬಗ್ಗೆ…?
ಡಾ. ಪ್ರಭಾ ಮಲ್ಲಿಕಾರ್ಜುನ್: ಶಾಮನೂರು ಶಿವಶಂಕರಪ್ಪ ದಾನ ಧರ್ಮಕ್ಕೆ ಹೆಸರುವಾಸಿ. 94 ವರ್ಷವಾದರೂ ಜನಸೇವೆ ಮಾಡಬೇಕೆಂಬ ತುಡಿತ ಈಗಲೂ ಇದೆ. ಸಮಾಜ ಸೇವೆ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ನೀಡಿರುವ ಕೊಡುಗೆ ಅಪಾರ. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಟ್ಯಾಗ್ ಲೈನ್ ಅಂದರೆ ಅಭಿವೃದ್ಧಿ ಹರಿಕಾರ ಎನ್ನೋದು. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕಾರ್ಯಗಳು ಯಾವ ಜಿಲ್ಲೆಯಲ್ಲೂ ಆಗಿಲ್ಲ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ನಾನು ನೋಡಿದ ಇಬ್ಬರು ಲೆಜೆಂಡ್. ಜನರ ಸಮಸ್ಯೆಗಳನ್ನು ಆಲಿಸುತ್ತೇನೆ, ಕೇಳುತ್ತೇನೆ. ಮಾವ, ಪತಿ ಹಾಗೂ ಜನರು ಸಹ ನನ್ನ ಗುರುಗಳು.
ಮೋದಿ ದಾವಣಗೆರೆಗೆ ಬರುತ್ತಿದ್ದಾರಲ್ವಾ…?
ಡಾ. ಪ್ರಭಾ ಮಲ್ಲಿಕಾರ್ಜುನ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ಬಂದು ಹೋಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಫಲಿತಾಂಶ ಏನು ಬಂತು? ಮೋದಿ ಅವರು ಬಂದು ಹೋದರೆ ಅಷ್ಟೇ ಮತ ಹಾಕುವುದು ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಈ ಬಾರಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿತಿರುವ, ಕಷ್ಟಕ್ಕೆ ಸ್ಪಂದಿಸುವ, ಯೋಜನೆಗಳ ಕಾರ್ಯಗತಕ್ಕೆ ಬೇಕಿರುವ ಜ್ಞಾನ ಬೇಕಾಗುತ್ತದೆ. ಈ ಕಾರಣಕ್ಕೆ ಎಲ್ಲಾ ವರ್ಗದವರು ನನ್ನನ್ನು ಬೆಂಬಲಿಸಿ ಜಯಶಾಲಿಯಾಗಿಸುತ್ತಾರೆ ಎಂಬ ನಂಬಿಕೆ ಇದೆ. ಕನಸು ಬೇಡ, ನನಸು ಮಾಡಿ ತೋರಿಸುವಂಥ ಸಂಸದರು ಬೇಕು ಎಂಬುದು ಜನರ ಅಭಿಮತ. ಹಾಗಾಗಿ, ಈ ಬಾರಿ ಗೆಲ್ಲುತ್ತೇನೆಂಬ
ವಿಶ್ವಾಸ ಇದೆ.
ಎಷ್ಟು ಅಂತರಗಳಲ್ಲಿ ಗೆಲ್ಲಬಹುದು…?
ಪ್ರಭಾ ಮಲ್ಲಿಕಾರ್ಜುನ್: ನಾನು ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಹೇಳಲಾಗದು. ಈಗ ಎಲ್ಲೆಡೆ ಚೆನ್ನಾಗಿದೆ. ಈಗ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಆದ್ರೆ, ಕೊನೆಯ ಎರಡು ದಿನಗಳಲ್ಲಿ ಬದಲಾಗಬಾರದು. ನೀವು ಇಂದು ಅಂದುಕೊಂಡಿರುವ ನಿರ್ಧಾರ ಮತದಾನದ ದಿನ ಗೊತ್ತಾಗುವಂತೆ ಮಾಡಬೇಕು. ಅಭಿವೃದ್ಧಿ ಭರವಸೆಗೆ ಮತ ಕೇಳುತ್ತಿದ್ದೇನೆ. ನನ್ನ ಕಡೆಯಿಂದ ಪ್ರಾಮಾಣಿಕ ಯತ್ನ ಇದ್ದೇ ಇದೆ. ಯೋಗ್ಯವಾದ ಅಭ್ಯರ್ಥಿ ಆರಿಸಿದರೆ ಮುಂದಿನ ಐದು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ಮತ್ತೆ ಮರುಕಳಿಸುತ್ತಾ ಇತಿಹಾಸ..?
ಪ್ರಭಾ ಮಲ್ಲಿಕಾರ್ಜುನ್: ಚುನಾವಣಾ ಪ್ರಚಾರದ ವೇಳೆ ಅಜ್ಜಿಯೊಬ್ಬರನ್ನು ಮಾತನಾಡಿಸಿದೆ. ಆಗ ಅವ್ರು ನಿಮ್ಮನ್ನು ನೋಡಿದರೆ ಇಂದಿರಾ ಗಾಂಧಿ ಅವರನ್ನೇ ನೋಡಿದಂತಾಗುತ್ತದೆ. ನಾನು ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಮದುವೆಯಾದ ವರ್ಷದಲ್ಲಿ ಉಪಚುನಾವಣೆ ಎದುರಾಗಿತ್ತು. ಆಗ ಶಾಮನೂರು ಶಿವಶಂಕರಪ್ಪರ ಪರ ಉಪಚುನಾವಣೆಯಲ್ಲಿ ಮೊದಲ ಬಾರಿ ಪ್ರಚಾರಕ್ಕೆ ಹೋಗಿದ್ದೆ. ಆಗ ಇಂದಿರಾ ಗಾಂಧಿ ಪಕ್ಷ ಕಾಂಗ್ರೆಸ್ ಗೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದೆವು. ಈಗ ಬಿಜೆಪಿಯವರು ಮೋದಿ ಮೋದಿ ಅಂತಾ ಹೇಳಿಕೊಂಡು ವೋಟ್ ಕೇಳುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಮತ್ತೆ ಜನರು ಇಂದಿರಾಗಾಂಧಿ ಕಾಂಗ್ರೆಸ್ ಎಂದುಕೊಂಡು ಮತ ನೀಡುವುದು ಖಚಿತ. ಇತಿಹಾಸ ಮರುಕಳಿಸುವುದು ನಿಶ್ಚಿತ.
ರಾಹುಲ್ ಗಾಂಧಿ ಅವರು ಜನಸಾಮಾನ್ಯರ ಬಳಿ ಹೋಗಿ ಕೆಲಸ ಮಾಡುತ್ತಾರೆ. ಆದ್ರೆ, ಈಗಿನ ಪ್ರಧಾನಿ ಅವರು ಪ್ರೆಸ್ ಮೀಟ್ ಮಾಡಲಿಲ್ಲ, ಮಣಿಪುರ ಘರ್ಷಣೆ ಬಗ್ಗೆ ಮಾತನಾಡಲಿಲ್ಲ, ನೋಟು ಅಮಾನ್ಯೀಕರಣ, ಜಿಎಸ್ ಟಿ ಯಿಂದ ಆದ ತೊಂದರೆ ಬಗ್ಗೆ ಚಕಾರ ಎತ್ತಲಿಲ್ಲ. ಜನರು ಆಗುತ್ತಿರುವ ತೊಂದರೆ ಹೇಳಿಕೊಂಡರೂ ಪ್ರಯೋಜನ ಶೂನ್ಯ. ಅಪ್ಪಾಜಿ ಮೇಲಿನ ಅಭಿಮಾನ, ಮಲ್ಲಿಕಾರ್ಜುನ್ ರ ಅಭಿವೃದ್ಧಿ ಪರ ಚಿಂತನೆ ನನಗೆ ಪ್ಲಸ್ ಪಾಯಿಂಟ್. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭಾ ಸದಸ್ಯರಾದರೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಜನರಲ್ಲಿದೆ. ಹಾಗಾಗಿ, ನಾನು ಗೆದ್ದೇ ಗೆಲ್ಲುವ ಅಚಲವಾದ ವಿಶ್ವಾಸ ಹೊಂದಿದ್ದೇನೆ.
Davangere Congress MP candidate Dr. Prabha Mallikarjun Interview | ಡಾ. ಪ್ರಭಾ ಮಲ್ಲಿಕಾರ್ಜುನ್ ವಿಶೇಷ ಸಂದರ್ಶನ