SUDDIKSHANA KANNADA NEWS/ DAVANAGERE/DATE:02_09_2025
ದಾವಣಗೆರೆ: ಕೊರೊನಾ ಸಂಕಷ್ಟದ ವೇಳೆಯಲ್ಲಿಯೂ ಪ್ರಾಣದ ಹಂಗು ತೊರೆದು ನೂರಾರು ಮಂದಿ ಪ್ರಾಣ ಉಳಿಸಿದ್ದ ಖ್ಯಾತ ವೈದ್ಯರು ಹೃದಯಘಾತಕ್ಕೊಳಗಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
READ ALSO THIS STORY: ಶಾಮನೂರು ಮನೆತನದವರ ಮನೆ ಬಾಗಿಲು ಕಾಯುವ “ಪೊಮೆರೇನಿಯನ್ ನಾಯಿ” ದಾವಣಗೆರೆ ಎಸ್ಪಿ: ಶಾಸಕ ಬಿ. ಪಿ. ಹರೀಶ್ ಕೆಂಡಾಮಂಡಲ!
ನಗರದ ಸರಸ್ವತಿ ನಗರದಲ್ಲಿ ವಾಸವಿದ್ದ ಡಾ. ಎಸ್. ಮೋಹನ್ ಕುಮಾರ್ ಅವರು ಹೃದಯಘಾತಕ್ಕೊಳಗಾಗಿ ಮೃತಪಟ್ಟ ವೈದ್ಯರು. ಮೃತರಿಗೆ 34 ವರ್ಷ ವಯಸ್ಸಾಗಿತ್ತು. ಪತ್ನಿ ಅಮೃತ, ಎರಡು ತಿಂಗಳ ಹೆಣ್ಣು ಮಗು, ಸಹೋದರ, ಸಹೋದರಿ, ತಮ್ಮ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಅವರು ದಾವಣಗೆರೆಯ ಭಗೀರಥ ಸರ್ಕಲ್ ನಲ್ಲಿ ಶ್ರೇಷ್ಠ ಕ್ಲಿನಿಕ್ ನಡೆಸುತ್ತಿದ್ದರು. ಪ್ರತಿನಿತ್ಯವೂ ಕಾಲೇಜಿಗೆ ಹೋಗಿ ಬರುತ್ತಿದ್ದರು. ಅದೇ ರೀತಿಯಲ್ಲಿ ಕ್ಲಿನಿಕ್ ನಲ್ಲಿಯೂ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸುತ್ತಿದ್ದರು.
ಸರಸ್ವತಿ ನಗರದ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಹೃದಯಘಾತಕ್ಕೊಳಗಾಗಿ ಮೋಹನ್ ಕುಮಾರ್ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊರೊನಾದಲ್ಲಿ ಸೇವೆ:
ಇನ್ನು ಮೋಹನ್ ಕುಮಾರ್ ಅವರು ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದ ಕೊರೊನಾ ಸಂಕಷ್ಟದ ವೇಳೆಯಲ್ಲಿ ನೂರಾರು ಮಂದಿಗೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ಖ್ಯಾತರಾಗಿದ್ದರು. ರೋಗಿಗಳ ಪಾಲಿನ ದೇವರು
ಆಗಿದ್ದರು. ಆದ್ರೆ, ಅವರೇ ಹೃದಯಘಾತಕ್ಕೊಳಗಾಗಿ ಉಸಿರು ಚೆಲ್ಲಿದ್ದು ಕುಟುಂಬದವರು, ಸ್ನೇಹಿತರು ಮಾತ್ರವಲ್ಲ, ರೋಗಿಗಳೂ ಕಣ್ಣೀರು ಸುರಿಸಿದ್ದಾರೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯ ವೈದ್ಯರಾಗಿದ್ದ ಮೋಹನ್ ಕುಮಾರ್ ಅವರು ಮಣಿಪಾಲದಲ್ಲಿ ಎಂಬಿಬಿಎಸ್ ಎಂಡಿ ಓದಿದ್ದರು. ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಆಗಿದ್ದವರು.
ಸಂತಾಪ:
ಮೋಹನ್ ಕುಮಾರ್ ಅವರ ನಿಧನಕ್ಕೆ ಗಜೇಂದ್ರ ಜಗನ್ನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಮೋಹನ್ ಕುಮಾರ್ ಅವರು ಸ್ನೇಹಜೀವಿ ಅಷ್ಟೇ ಅಲ್ಲ, ಬಡವರ ಪಾಲಿನ ಆಶಾಕಿರಣವಾಗಿದ್ದವರು. ಎಲ್ಲರನ್ನೂ ಸ್ವೌಮ್ಯ ಸ್ವಭಾವದವರಾಗಿದ್ದು, ರೋಗಿಗಳನ್ನು ಆತ್ಮೀಯವಾಗಿ ಕಾಣುತ್ತಿದ್ದರು. ಜನಮನ್ನಣೆಯನ್ನೂ ಪಡೆದಿದ್ದರು. ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದು ನಮಗೆ ಆಘಾತ ತಂದಿದೆ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಗಜೇಂದ್ರ ಜಗನ್ನಾಥ್ ಅವರು ಪ್ರಾರ್ಥಿಸಿದ್ದಾರೆ.
ಅಂತ್ಯಕ್ರಿಯೆ:
ಅಂತ್ಯಕ್ರಿಯೆಯು ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಕಣ್ಣೀರ ಕೋಡಿ ನಡುವೆ ನೆರವೇರಿತು. ಎರಡು ತಿಂಗಳ ಮಗು ಮುಖ ನೋಡುತ್ತಾ ಪತಿಯ ಮುಖ ನೋಡಿ ಪತ್ನಿ ಕಣ್ಣೀರು ಸುರಿಸುತ್ತಿದ್ದದ್ದು ನೆರೆದಿದ್ದವರ ಕಣ್ಣಾವಲಿಗಳು ತೇವಗೊಳ್ಳುವಂತೆ ಮಾಡಿತು.