SUDDIKSHANA KANNADA NEWS/ DAVANAGERE/ DATE_11-07_2025
ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ.
READ ALSO THIS STORY: ಚನ್ನಗಿರಿಯಲ್ಲಿ ಪತ್ನಿ ಮೂಗು ಕಚ್ಚಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಗಾಯಗೊಂಡ ವಿದ್ಯಾ ಹೇಳಿದ್ದೇನು..?
ಸಾರ್ವಜನಿಕರ ಸುರಕ್ಷತೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು “ಮನೆಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.
ಆಧುನಿಕ ಯುಗದಲ್ಲಿ ಪೊಲೀಸರ ಪಾತ್ರವು ಬಹುಮುಖವಾಗಿದೆ. ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಕಾಯ್ದುಕೊಳ್ಳುವವರಾಗಿ ಮಾತ್ರವಲ್ಲದೇ ಇಂದು ಅವರು ಸಮಾಜದ ಶಾಂತಿ ಮತ್ತು ಭದ್ರತೆಯ ರೂವಾರಿಗಳಾಗಿದ್ದಾರೆ.
ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕ ಸಮಾರಂಭಗಳಲ್ಲಿ ಭದ್ರತೆ ಏರ್ಪಡಿಸುವುದು, ಪ್ರವಾಹ, ಭೂಕಂಪ, ಮಹಾಮಾರಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾತ್ಮಕ ಕಾರ್ಯಗಳಲ್ಲಿ ತೊಡಗುವುದು
ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯಗಳಾಗಿವೆ. ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಶಾಂತಿಯುತವಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಉಂಟುಮಾಡುವುದು ಇಲಾಖೆಯ ಆದ್ಯತೆಯಾಗಿದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ, ಪ್ರಸ್ತುತ ದಿನಗಳಲ್ಲಿ ಪೊಲೀಸ್ ಇಲಾಖೆಯು ಜನರೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳುವ ಮೂಲಕ ಸಮುದಾಯ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ. ಸೈಬರ್ ಅಪರಾಧ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ತಡೆಯುವ ದಿಶೆಯಲ್ಲಿ, ಇಲಾಖೆಯು ಹಗಲಿರುಳು ಶ್ರಮಿಸುತ್ತಿದೆ. ಸಾರ್ವಜನಿಕರಲ್ಲಿ ಕಾನೂನುಗಳ ಬಗ್ಗೆ ತಿಳುವಳಿಕೆ ಬೆಳೆಸುವುದು ಮತ್ತು ಪೌರಸಹಭಾಗಿತ್ವದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಇಲಾಖೆಯು ಪ್ರಗತಿಪರ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಪೊಲೀಸ್ ಇಲಾಖೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸೇವಾ ದಿಟ್ಟ ನೋಟದೊಂದಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ಈ ನಿಟ್ಟಿನಲ್ಲಿ ಮನೆಮನೆಗೆ ಪೊಲೀಸ್ ಉಪಕ್ರಮವು ಸಮಾಜದಲ್ಲಿ ಅಪರಾಧ ತಡೆಗೆ ಸಹಕಾರಿ ಆಗುವುದಲ್ಲದೆ, ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರ್ವರನ್ನೂ ಸಮಾನವಾಗಿ ಒಳಗೊಂಡು ಸಾರ್ವಜನಿಕರು ಈ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿ, ಸಾಮಾಜಿಕ ಪಿಡುಗುಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ವ್ಯವಸ್ಥೆಯು ಒಂದು ಆಶಾಕಿರಣ. ಈ ಮೂಲಕ ಪೊಲೀಸ್ ಎಂದರೆ ಭಯವಲ್ಲ ಭರವಸೆ ಎಂಬ ವಿಶ್ವಾಸದ ಚಿಹ್ನೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಯೋಜನೆಯಡಿ ಪ್ರತಿದಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಕೇಳಿ ತ್ವರಿತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ಮಾದಕವಸ್ತು ದುರ್ಬಳಕೆ ಇತ್ತೀಚಿನ ದಿನಗಳಲ್ಲಿ ಒಂದು ಜಾಗತಿಕ ಸಮಸ್ಯೆಯಾಗಿದ್ದು ಸಂಕೀರ್ಣ ಸವಾಲಾಗಿದೆ. ಇಂದು ಲಕ್ಷಾಂತರ ಜನರು ಇದಕ್ಕೆ ದಾಸರಾಗಿದ್ದಾರೆ. ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಾಣ ಮಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿದಾಗ ಇವುಗಳ ಬಗ್ಗೆ ಅರಿವು ಮೂಡಿಸುತ್ತಾರೆ.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಶಾಲಾ-ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರಗಳು ಮತ್ತು ಯುವಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆಗಳನ್ನು ಏರ್ಪಡಿಸಲಾಗುತ್ತದೆ.
“ಮನೆ ಮನೆಗೆ ಪೊಲೀಸ್” ಪ್ರಯೋಜನಗಳು:
- ಅಪರಾಧ ತಡೆಗೆ ಸಹಕಾರಿ: ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು.
- ಜನರಲ್ಲಿ ನಂಬಿಕೆ ಬೆಳೆಸುವುದು: ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು.
- ಶಾಂತಿ ಮತ್ತು ಭದ್ರತೆ ಕಾಪಾಡುವುದು: ಸ್ಥಳೀಯರ ಸಹಕಾರದಿಂದ ಸಮುದಾಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪಿಸಲು ಸಹಕಾರಿಯಾಗಲಿದೆ.
- ಸ್ಥಳೀಯ ಸಮಸ್ಯೆಗಳ ಪರಿಹಾರ: ಸಮುದಾಯ ಪೊಲೀಸ್ ವ್ಯವಸ್ಥೆಯ ಮೂಲಕ ಸ್ಥಳೀಯ ಮಟ್ಟದ -ವಿಶೇಷ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು.
- ಪೋಲೀಸರು ಜನರ ಹತ್ತಿರ ಬರುತ್ತಾರೆ: ಪೊಲೀಸರು “ಭಯದ ಪಾತ್ರ” ದಿಂದ “ಮಿತ್ರನ ಪಾತ್ರ” ದತ್ತ ಸಾಗುತ್ತಾರೆ.
- ಅಪರಾಧದ ಕುರಿತು ಜಾಗೃತಿ: ಸಾರ್ವಜನಿಕರಲ್ಲಿ ಕಾನೂನು ಹಾಗೂ ಅಪರಾಧ ತಡೆ ಬಗ್ಗೆ ಅರಿವು ಮೂಡುತ್ತದೆ.
- ಯುವಜನತೆಗೆ ಮಾರ್ಗದರ್ಶನ: ಯುವಜನರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ತೊಡಗಿಸಲು ಇದು ಸಹಾಯ ಮಾಡುತ್ತದೆ
- ಸಮಾಜದಲ್ಲಿ ಸಹಭಾಗಿತ್ವ: ನಾಗರಿಕರು ಮತ್ತು ಪೊಲೀಸರು ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣವಾಗುತ್ತದೆ.
- ಸೈಬರ್ ಅಪರಾಧ, ನಕಲಿ ಮಾಹಿತಿ ತಡೆಯಲು ನೆರವು ತಡೆಗಟ್ಟಬಹುದು: ಜನರಿಗೆ ಈ ವಿಷಯಗಳಲ್ಲಿ ಶಿಕ್ಷಣ ನೀಡಿ ಸೈಬರ್ ಅಪರಾಧ, ನಕಲಿ ಮಾಹಿತಿ ತಡೆಗಟ್ಟಲು ಸಹಕಾರಿಯಾಗಲಿದೆ
- ಆಪತ್ತಿನ ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ: ವಿಪತ್ತುಗಳು ಅಥವಾ ತುರ್ತು ಸಂದರ್ಭದಲ್ಲಿ ಜನಸಹಕಾರದ ಮೂಲಕ ಪೊಲೀಸರು ಶೀಘ್ರದಲ್ಲಿ ಸಹಾಯ ನೀಡಬಹುದು.
ಪ್ರಸ್ತುತ ಪೊಲೀಸ್ ಸೇವೆಯ ವ್ಯವಸ್ಥೆಯನ್ನು “ಸಕ್ರಿಯ ಸೇವೆ” (Pro-active Policing) ಒದಗಿಸುವ ವ್ಯವಸ್ಥೆಯನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಇಂತಹ ನಡೆಯಿಂದ ಪೊಲೀಸ್ ಸೇವೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಹೆಚ್ಚುವುದರೊಂದಿಗೆ, ಜನರು ಮತ್ತು ಪೋಲಿಸರು ನಿಕಟ ಸಂಬಂಧದ ಪರಿಣಾಮವಾಗಿ, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿರುವಂತಹ ವಾತಾವರಣ ರೂಪುಗೊಂಡಿರುತ್ತದೆ.