SUDDIKSHANA KANNADA NEWS/ DAVANAGERE/ DATE:24-07-2024
ದಾವಣಗೆರೆ: ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ನೇಮಕ ಬಹುತೇಕ ಅಂತಿಮಗೊಂಡಿದೆ. ಘೋಷಣೆಯೊಂದೇ ಬಾಕಿ ಉಳಿದಿದೆ.
ಸಿಎಂ ಸಿದ್ದರಾಮಯ್ಯ ಅವರು, ನೇಮಕಕ್ಕೆ ಸಹಿ ಮಾಡಿದ್ದು, ಘೋಷಣೆಯೊಂದೇ ಉಳಿದಿದೆ. ಇಂದು ಮಧ್ಯಾಹ್ನ ಅಥವಾ ಸಂಜೆಯೊಳಗೆ ಅಧಿಕೃತವಾಗಿ ಆದೇಶ ಹೊರಡಿಸಲಾಗುತ್ತದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಮೊದಲಿನಿಂದಲೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದಿನೇಶ್ ಕೆ. ಶೆಟ್ಟಿ ಅವರು, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಜಯ್ ಕುಮಾರ್ ಅವರ ವಿರುದ್ಧ ಪಿ. ಜೆ. ಬಡಾವಣೆಯಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿನೇಶ್ ಕೆ. ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ಎರಡು ತಿಂಗಳ ಬಳಿಕ ದೂಡಾ ಅಧ್ಯಕ್ಷರ
ನೇಮಕ ಮಾಡಲು ಮುಂದಾಗಿದೆ. ಒಂದು ವರ್ಷ ಎರಡು ತಿಂಗಳು ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಈಗ ದಿನೇಶ್ ಕೆ. ಶೆಟ್ಟಿ ಹೆಸರು ಅಖೈರುಗೊಳಿಸಲಾಗಿದ್ದು, ಘೋಷಣೆ ಉಳಿದ್ದರೂ ಸಾಮಾಜಿಕ ಜಾಲತಾಣ, ವ್ಯಾಟ್ಸಪ್, ಫೇಸ್ ಬುಕ್ ನಲ್ಲಿ
ಈಗಾಗಲೇ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
1965ರ ಮಾರ್ಚ್ 17ರಂದು ಜನಿಸಿದ್ದ ದಿನೇಶ್ ಕೆ. ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರು. ದಾವಣಗೆರೆಯಲ್ಲಿಯೇ ನೆಲೆಸಿರುವ ಅವರು ಕಾಂಗ್ರೆಸ್, ವಿವಿಧ ಸಂಘಟನೆಗಳು, ಕ್ರೀಡಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು
ತೊಡಗಿಸಿಕೊಂಡಿದ್ದಾರೆ.
1989ರಲ್ಲಿ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2003ರಲ್ಲಿ ಮೊದಲ ಬಾರಿಗೆ ನಗರಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯ ಗಳಿಸಿದ್ದರು. 2006ರಲ್ಲಿ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2008ರಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ದಿನೇಶ್ ಕೆ. ಶೆಟ್ಟಿ 2009ರಲ್ಲಿ ಗೆದ್ದಿದ್ದರು. ಆಗ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದರು.
2013ರಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2015ರಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವವಿದೆ. 2016ರಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, 2016ರಲ್ಲಿ ದಾವಣಗೆರೆ ಜಿಲ್ಲಾ ಬಂಟರ ಸಂಘದ ನಿರ್ದೇಶಕರಾದರು. ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಕ್ರೀಡಾಪಟುಗಳ ಸಂಘದ ಅಧ್ಯಕ್ಷ. ಜಿಲ್ಲಾ ಫುಟ್ಬಾಲ್, ಚೆಸ್, ಕೇರಂ, ಕ್ರಿಕೆಟ್ ಕ್ಲಬ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.