SUDDIKSHANA KANNADA NEWS/ DAVANAGERE/ DATE:29-05-2023
ದಾವಣಗೆರೆ(DAVANAGERE): ಕಾಂಗ್ರೆಸ್ (CONGRESS) ಪಕ್ಷವು ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಕೊಟ್ಟ ಭರವಸೆ ಈಡೇರಿಸುವುದಾಗಿ ಘೋಷಿಸಿತ್ತು. ಆದಷ್ಟು ಬೇಗ ಅಂದರೆ ಒಂದು ವಾರದೊಳಗೆ ಗ್ಯಾರಂಟಿ ಜಾರಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡೋಣ. ಸರ್ಕಾರ ಮೊಂಡುತನ ಪ್ರದರ್ಶಿಸಿದರೆ ಪೊರಕೆ ಚಳವಳಿ ನಡೆಸೋಣ ಎಂದು ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ಹೊನ್ನಾಳಿ (HONNALI) ಕ್ಷೇತ್ರದಲ್ಲಿ ಸೋಲು ಕಂಡ ಕೆಲ ದಿನಗಳ ಕಾಲ ಬೇಸರದಲ್ಲಿದ್ದ ರೇಣುಕಾಚಾರ್ಯ ಮತ್ತೆ ಫೀಲ್ಡಿಗಿಳಿದಿದ್ದಾರೆ. ಹೋದ ಕಡೆಗಳಲ್ಲಿ, ಗ್ರಾಮಗ್ರಾಮಗಳಲ್ಲಿಯೂ ಕಾಂಗ್ರೆಸ್ ಸರ್ಕಾರದ ಭರವಸೆ ಈಡೇರಿಸದಿರುವ ಕುರಿತಂತೆಯೇ ಮಾತನಾಡುತ್ತಿದ್ದಾರೆ. ಜೊತೆಗೆ ಜನರಿಗೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುವ ರೀತಿಯ ವಾತಾವರಣ ನಿರ್ಮಾಣ ಮಾಡಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಗ್ರಾಮ ಗ್ರಾಮಗಳಲ್ಲಿ ಜನರಿಗೆ ಮಾಹಿತಿ:
ಸರ್ಕಾರದ ಭರವಸೆಗಳ ವಿರುದ್ದ ಫೀಲ್ಡಿಗಿಳಿದಿರುವ ರೇಣುಕಾಚಾರ್ಯ, ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕುಗಳ ಗ್ರಾಮಗಳಲ್ಲಿ ಭರವಸೆಗಳ ವಿರುದ್ಧ ಜನಾಂದೋಲನ ಮಾಡಲು ಮುಂದಾಗಿದ್ದಾರೆ. ಕೆಲ ದಿನಗಳ ಕಾಲ ಮಾತ್ರ ಗಡುವು ನೀಡುವುದಾಗಿ ಹೇಳಿರುವ ರೇಣುಕಾಚಾರ್ಯ, ಯಾರು ಕೂಡ ವಿದ್ಯುತ್ ಕರೆಂಟ್ ಬಿಲ್ ಕಟ್ಟದಂತೆ ಮನವಿ ಮಾಡಿದ್ದಾರೆ.
ಬಿಲ್ ಕಟ್ಟಲು ಹೇಳಿದ್ರೆ ನನಗೆ ಫೋನ್ ಮಾಡಿ:
ಯಾರಾದರೂ ಕರೆಂಟ್ ಬಿಲ್ ಕಟ್ಟುವಂತೆ ಹೇಳಿದರೆ ತಮಗೆ ಕರೆ ಮಾಡಿ ತಿಳಿಸಿ. ಅದೇ ರೀತಿಯಲ್ಲಿ ಬಸ್ ಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣ ಮಾಡಲು ಅನುವು ಮಾಡಿಕೊಡುವುದಾಗಿ ಹೇಳಿದ್ದಾರೆ. ಯಾರೂ ಕೂಡ ದುಡ್ಡು ಕೊಡಬೇಡಿ ಎಂದು ಅವಳಿ ತಾಲೂಕಿನ ಜನರಲ್ಲಿ ಮನವಿ ಮಾಡಿದ್ದಾರೆ.
ಹಳ್ಳಿ ಹಳ್ಳಿಗೂ ತೆರಳಿ ಮಹಿಳೆಯರು, ವೃದ್ಧೆಯರ ಜೊತೆ ಮಾತುಕತೆ ನಡೆಸುವ ರೇಣುಕಾಚಾರ್ಯ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರೂ ಸಹ ಚುನಾವಣೆಗೆ ಮುನ್ನ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು ಇಷ್ಟು ದಿನ ಆದರೂ ಯಾಕೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಸುಳ್ಳು ಭರವಸೆ ನೀಡಿ ಕೈ ಅಧಿಕಾರಕ್ಕೆ:
ಸಿಎಂ ಸಿದ್ದರಾಮಯ್ಯ ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ್ದರು. 200 ಉಚಿತ ವಿದ್ಯುತ್ ಯೂನಿಟ್ ಎಂದಿದ್ದರು. ಈಗ ಯಾಕೆ ನೀವು ಕಟ್ಟಬೇಕು. ಡಿಸಿಎಂ ಡಿ. ಕೆ. ಶಿವಕುಮಾರ್ ಹೆಣ್ಣು ಮಕ್ಕಳು ಅತ್ತೆ ಮನೆಗೂ ಹೋಗಬಹುದು, ಗಂಡನ ಮನೆಗೂ ಹೋಗಬಹುದು, ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು. ಫ್ರೀ.. ಫ್ರೀ.. ಎಂದಿದ್ದರು. ಬೆಂಗಳೂರು, ಮೈಸೂರು ಎಲ್ಲಾ ಕಡೆ ಓಡಾಡಬಹುದು. ಯಾರಾದರೂ ಸರ್ಕಾರಿ ಬಸ್ ಗಳಿಗೆ ಹೋದರೆ ನಾವು ಹಣ ಕೊಡುತ್ತೇವೆ ಎಂದಿದ್ದರು. ಮನೆಯೊಡತಿಗೆ 2000 ರೂಪಾಯಿ ನೀಡುತ್ತೇವೆ ಎಂದಿದ್ದಾರೆ. ಸಿಲಿಂಡರ್ ಗೆ 500 ರೂಪಾಯಿ ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಉಚಿತ ಕೊಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದಾರೆ. ಸಾಲ ಮಾಡಿ ನಿಮಗೆ ಕೊಡಬೇಕು. ಈಗಲೇ 2 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಮತ್ತೆ ಸಾಲ ಮಾಡಲು ಹೊರಟಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಕು. ವರ್ಷಕ್ಕೆ ಲಕ್ಷ ಕೋಟಿ ರೂಪಾಯಿ ಬೇಕು. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅನ್ನು ಪ್ರಶ್ನಿಸಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ಆಸೆ, ಆಮೀಷವೊಡ್ಡಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಇದು ನನ್ನ ತಾಲೂಕು. ನಾನು ಚುನಾವಣೆಯಲ್ಲಿ ಸೋತಿರಬಹುದು. ಅದಕ್ಕೆ ನಾನು ಹೊಟ್ಟೆ ಉರಿಸಿಕೊಳ್ಳುವುದಿಲ್ಲ. ಕೆಲಸ ಮಾಡಲಿ. ಜನರಿಗೆ ಸುಳ್ಳು ಹೇಳುವವರನ್ನು
ಬಿಡಬೇಡಿ. ಭರವಸೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ. ನೀವೆಲ್ಲರೂ ಬನ್ನಿ. ಸರ್ಕಾರಕ್ಕೆ ಪೊರಕೆ ತೆಗೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಸಿ ಮುಟ್ಟಿಸೋಣ ಎಂದು ಹೇಳಿದರು.
ದುಡ್ಡು ಕೊಡಬೇಡಿ, ಬಿಲ್ ಕಟ್ಬೇಡಿ:
ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಗ್ರಾಮ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ರೇಣುಕಾಚಾರ್ಯ ಹೋದ ಕಡೆಗಳಲ್ಲಿ ಬಸ್ ಪ್ರಯಾಣಕ್ಕೆ ದುಡ್ಡು ಕೊಡಬೇಡಿ. ಕರೆಂಟ್ ಬಿಲ್ ಕಟ್ಬೇಡಿ ಎಂದು ಹೇಳುತ್ತಲೇ ಸಾಗುತ್ತಿದ್ದಾರೆ. ಸರ್ಕಾರಿ ಬಸ್ ನಲ್ಲಿ ಎಲ್ಲಿ ಬೇಕಾದರೂ ಹೋಗಬಹುದು. ಭರವಸೆ ಕೊಟ್ಟಿದ್ದಾರೆ. ಒಂದು ವಾರ ನೋಡ್ತೇವೆ, ಇಲ್ಲಾಂದ್ರೆ ಪೊರಕೆ ಚಳವಳಿ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಪುನರುಚ್ಚರಿಸುತ್ತಿದ್ದಾರೆ.
ಯಾವುದೋ ಕಾರಣಕ್ಕೋ ಹಿನ್ನೆಡೆ ಆಗಿರಬಹುದು. ಸಿದ್ದರಾಮಯ್ಯ ಅವರು ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ಫ್ರೀ ಎಂದಿದ್ದಾರೆ. ಷರತ್ತುಗಳು ತುಂಬಾನೇ ಇವೆ. ಷರತ್ತುಗಳನ್ವಯ ಮಾತ್ರ ನೀಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರಕ್ಕೆ ಬರುವ
ಮುನ್ನ ಒಂದು ಮಾತು, ಬಂದ ಮೇಲೆ ಮತ್ತೊಂದು ರೀತಿಯ ಮಾತು. ಇದನ್ನೆಲ್ಲಾ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.