SUDDIKSHANA KANNADA NEWS/ DAVANAGERE/ DATE:08-08-2023
ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ (Transfer) ದಂಧೆ ಹೆಚ್ಚಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಇದು ಮುಂದುವರಿದಿದೆ. ಸುಮಾರು 300 ಅಧಿಕಾರಿಗಳ ಟ್ರಾನ್ಸಫರ್ (Transfer) ಮಾಡಲಾಗಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದೊಂದೇ ದಾಖಲೆ ತೆಗೆದು ಬಯಲಿಗೆಳೆಯುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆ (Transfer) ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹೊಟೇಲ್ ನಲ್ಲಿ ತಿಂಡಿ ತಿನಿಸುಗಳ ದರ ಪಟ್ಟಿಯಂತೆ ಹಣ ಪಡೆಯಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ದಾಖಲೆ ಸಂಗ್ರಹಿಸಿ ಒಂದೊಂದಾಗಿ ಬಯಲಿಗೆ ತರುತ್ತೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Davanagere: ಸಂಸದ ಸಿದ್ದೇಶ್ವರರ ಸಿಡಿಗುಂಡು ವಾಗ್ಬಾಣಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ “ಮಲ್ಲಗುದ್ದಿನೇಟು…”!
ಕರ್ನಾಟಕ ಗೆದ್ದ ಮಾತ್ರಕ್ಕೆ ಇಡೀ ಭಾರತ ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ. ಸಚಿವರು, ಕಾಂಗ್ರೆಸ್ ನವರು ಸರಿಯಾಗಿ ಮಾತನಾಡಬೇಕು. ಕಾಂಗ್ರೆಸ್ ಕಾರ್ಯಕರ್ತರು ಗೃಹಜ್ಯೋತಿಗೆ ಜಿಲ್ಲೆಯಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ವೇಳೆ ಗೂಂಡಾಗಳಂತೆ ವರ್ತನೆ ತೋರಿದ್ದಾರೆ. ಶಾಸಕರು ಎಂಬುದನ್ನು ಮರೆತು ಅಗೌರವದಿಂದ ಮಾತನಾಡಿದ್ದಾರೆ. ಈ ವರ್ತನೆ ಖಂಡನೀಯ ಎಂದರು.
ಒಳಮೀಸಲಾತಿ, ಮೀಸಲಾತಿ ಹೆಚ್ಚಳ ಸೇರಿದಂತೆ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ ಅವರು, ನಾವು ಒಳ್ಳೆಯ ಕೆಲಸ ಮಾಡಿದರೂ ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಹಾಗಾಗಿ ಚುನಾವಣೆಯಲ್ಲಿ ಸೋತೆವು ಎಂದು ವಿಶ್ಲೇಷಿಸಿದರು.
ಗೃಹಜ್ಯೋತಿ ಯೋಜನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ. ಶಾಸಕ ಬಿ.ಪಿ ಹರೀಶ್ ಭಾಷಣ ಮಾಡುವ ವೇಳೆ ಪ್ರಧಾನಿಯವರು ಅನ್ನಭಾಗ್ಯ ಯೋಜನೆಗೆ ಸ್ಪಂದಿಸಲಿಲ್ಲ ಎಂದು ಹೇಳಿರುವುದನ್ನು ಖಂಡಿಸಿದ್ದಕ್ಕೆ ಉತ್ತರವನ್ನು ಬಿಜೆಪಿ ಶಾಸಕರು ನೀಡಿದ್ದಾರೆ. ಶಾಸಕರು ಎಂದು ನೋಡದೆ ರಾಜ್ಯ ಗೆದ್ದಿದ್ದಕ್ಕೆ ದೇಶವನ್ನೇ ಗೆದ್ದಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಲೋಕಸಭೆಯಲ್ಲಿ ಹೀನಾಯವಾಗಿ ಸೋತಿದ್ದೀರಿ ಎಂಬುದನ್ನು ಮರೆಯಬಾರದು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಶೇಕಡಾ 40ರಷ್ಟು ಕಮೀಷನ್ ಪಡೆಯಲಾಗಿತ್ತು ಎಂಬ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ದರಪಟ್ಟಿಯಂತೆ ವರ್ಗಾವಣೆ ದಂಧೆ ನಡೆಯುತ್ತಿದೆ. ದಾವಣಗೆರೆ ಕೇವಲ ಸಿದ್ದರಾಮೋತ್ಸವ ಮಾತ್ರವಲ್ಲ ಒತ್ತುವರಿ,ಭೂಕಬಳಿಕೆ ಮಾಡಿದವರ ವಿರುದ್ಧ ಕಾರ್ಯಾಚರಣೆ ನಡೆಸುವ ಕೆಲಸವನ್ನು ಇಲ್ಲಿಂದಲೇ ಪ್ರಾರಂಭಿಸಿ ಎಂದು ಆಹ್ವಾನಿಸಿದರು.
ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ಕೊಟ್ಟಿತ್ತು. ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿ ಸೇರಿದಂತೆ 15 ಕೆಜಿ ಅಕ್ಕಿ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಕ್ಕಿ ಬದಲು ಹಣ ನೀಡಲಾಗುತ್ತದೆ ಎಂದಾಗ ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಯಾಕೆ ಹಣ ನೀಡುತ್ತಿರುವುದು ಎಂದು ಪ್ರಶ್ನಿಸಿದರು.