SUDDIKSHANA KANNADA NEWS/ DAVANAGERE/ DATE:27-01-2025
ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರ ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿ ಅಡಿಯಲ್ಲಿ ನಡೆಯುತ್ತಿರುವ ಮಹಿಳೆಯರ ಅಹೋರಾತ್ರಿ ಧರಣಿ ವಿಚಾರವನ್ನು ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪ್ರಸ್ತಾಪಿಸಿದರು.
ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು, ವೈಜ್ಞಾನಿಕವಾಗಿ ದೇವದಾಸಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಸಮೀಕ್ಷೆ ನಡೆಸಬೇಕು ಎನ್ನುವುದು ಪ್ರತಿಭಟನಾ ನಿರತರ ಬೇಡಿಕೆಯಾಗಿದೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿಗಳು ದೇವದಾಸಿಯರ ಪುನರ್ವಸತಿ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರು.
ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆದ ಬಳಿಕ ದೇವದಾಸಿ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ದಪಡಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು
ಸಭೆಗೆ ಅಧಿಕಾರಿಗಳು ನೀಡಿರುವ ಅನುಪಾಲನಾ ವರದಿಯಲ್ಲಿ ಮುಂದಿನ ಬಾರಿ ಜಿಲ್ಲಾವಾರು ಅಂಕಿ ಅಂಶ ನಮೂದಿಸಲು ಸೂಚಿಸಲಾಯಿತು.