SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಖಾಸಗಿಯವರಿಗೆ ಜಕಾತಿ ಟೆಂಡರ್ ನೀಡಬಾರದು. ಕಿರುಕುಳ, ದೌರ್ಜನ್ಯ ಮುಂದುವರಿದಿದ್ದು, ಇದನ್ನು ತಪ್ಪಿಸಬೇಕು ಎಂದು ಬೀದಿ ಬದಿ ವ್ಯಾಪಾರಸ್ಥರ ಆಗ್ರಹವಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದ ಮೇಲೆ ಜಕಾತಿ ನಿಲ್ಲಿಸಲಾಗಿದೆ. ಬರಗಾಲ ಇರುವ ಕಾರಣಕ್ಕೆ ನವೆಂಬರ್ 1 ರಿಂದ ಜಕಾತಿಯನ್ನು ಪಡೆಯುತ್ತಿಲ್ಲ. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಮಾಡಿದ ಬಳಿಕ ಸ್ಥಗಿತಗೊಳಿಸಲಾಗಿದೆ. ಆದರೂ ಬೆಳ್ಳಂಬೆಳಿಗ್ಗೆ ಹಳ್ಳಿ ಕಡೆಗಳಿಂದ ಬರುವ ರೈತರನ್ನು ಸುಲಿಗೆ ಮಾಡುವ ಪ್ರಕರಣಗಳು ಮುಂದುವರಿದಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ.
ಇನ್ನು ಬೀದಿ ಬದಿ ವ್ಯಾಪಾರಿಗಳನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಈ ಮೂಲಕ ಬೀದಿ ಬದಿ ವ್ಯಾಪಾರಿಗಳ ಪರವಾಗಿ ನಿಲ್ಲಬೇಕು. ಮಹಾನಗರ ಪಾಲಿಕೆಯಲ್ಲಿ 50 ಲಕ್ಷ ರೂಪಾಯಿ ಅನುದಾನ ಇದ್ದು, ಇದನ್ನು ಬೀದಿ ಬದಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಮೀಸಲಿಡಬೇಕು ಎಂದು ಬೀದಿ ಬದಿ ವ್ಯಾಪಾರಸ್ಥರು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ.
ಜಿಲ್ಲಾಮಟ್ಟದ ಸಮಾವೇಶ:
ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಮಟ್ಟದ ಸಮಾವೇಶ ಫೆ. 26ರಂದು ಬೆಳಗ್ಗೆ 11 ಗಂಟೆಗೆ ನಗರದ ಬೀರಲಿಂಗೇಶ್ವರ ದೇವಾಲಯದ ಅವರಣದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ದುಗ್ಗಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದಾವಣಗೆರೆಯಲ್ಲಿ ಹಲವಾರು ವರ್ಷಗಳಿಂದಲೂ ಟೆಂಡರ್ ನವರು ಮನಸ್ಸಿಗೆ ಬಂದಷ್ಟು ಜಕಾತಿಯನ್ನು ರಶೀದಿ ನೀಡದೆ ವಸೂಲಿ ಮಾಡುತ್ತಿದ್ದರು. ಇದರ ವಿರುದ್ದ ಬೀದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿ ಎಸ್ ಯು ಸಿ ಐ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಸಿ ಯಶಸ್ವಿಯಾದರು. ಈ ಹೋರಾಟದ ಫಲವಾಗಿ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ದಾವಣಗೆರೆಯ ನಗರ ಪಾಲಿಕೆಯೇ ನೇರವಾಗಿ ಜಕಾತಿಯನ್ನು ರಶೀದಿ ನೀಡಿ ಪಡೆಯುವಂತಾಯಿತು.ಫೆಬ್ರವರಿ 12ರಿಂದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಸಂಘವು ಪ್ರಾರಂಭಿಸುತ್ತಿದೆ. ಈ ಅಭಿಯಾನದಲ್ಲಿ ಬೀದಿಬದಿಗಳಲ್ಲಿ ವ್ಯಾಪಾರ ಮಾಡುವವರು ತಳ್ಳುವ ಗಾಡಿಯಲ್ಲಿ ಹಣ್ಣು ಸೊಪುö್ಪ ಮಾರುವವರು ಓಣಿ ಓಣಿಗಳಲ್ಲಿ ತಿರುಗಾಡುತ್ತಾ ತಲೆ ಮೇಲೆ ಪುಟ್ಟಿ ಹೊತ್ತು ಮಾರುವವರು ತಿಂಡಿಗಾಡಿಯವರು ಎಲ್ಲರೂ ಸದಸ್ಯತ್ವ ತೆಗೆದುಕೊಳ್ಳಲಿದ್ದಾರೆಂದರು.
ದಾವಣಗೆರೆ ನಗರ ಹಾಗೂ ಎಲ್ಲಾ ತಾಲೂಕುಗಳಲ್ಲಿ ಇರುವ ನಿಜವಾದ ಬೀದಿಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ನೀಡಬೇಕು. ಬೀದಿಬದಿಯ ವ್ಯಪಾರಸ್ಥರಿಗೆ ನೀವೇಶನ ನೀಡಬೇಕು. ಜಕಾತಿ ವಸೂಲಿ ಯನ್ನು
ಖಾಸಗಿಯವರಿಗೆ ಯಾವುದೇ ಕಾರಣಕ್ಕು ನೀಡಬಾರದು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಜಿಲ್ಲಾ ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟವನ್ನು ಮಾಡುತ್ತಿದ್ದೇವೆ. ಈ ಹಿಂದೆ ಸಾಕಷ್ಟು ಬಾರಿ ಪ್ರತ್ಯೇಕವಾಗಿ ಬೀದಿಬದಿ ವ್ಯಾಪಾರಸ್ಥರು ವಿವಿಧ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಡಿದವರ ಫಲವಾಗಿ ಹಲವಾರು ಸಮಸ್ಯೆಗಳು ಬಗೆಹರಿದಿವೆ. 2018ರಲ್ಲಿ ಸ್ಮಾರ್ಟ್ ಸಿಟಿ ನಿಗಮವು ಕೆಆರ್ ಮಾರ್ಕೆಟ್ ನಲ್ಲಿ ಕಾಮಗಾರಿಯ ನೆಪವೊಡ್ಡಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿತ್ತು. ಇದರ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಐತಿಹಾಸಿಕ ಹೋರಾಟ ಮಾಡಿ ಮಾರುಕಟ್ಟೆಯನ್ನು ಉಳಿಸಿಕೊಂಡಿದ್ದೇವೆ ಎಂದರು.
ಗೋಷ್ಠಿಯಲ್ಲಿ ಅಧ್ಯಕ್ಷ ಎಸ್. ಇಸ್ಮಾಯಿಲ್, ಉಪಾಧ್ಯಕ್ಷ ಎಚ್.ಸಿ. ಮಲ್ಲಪ್ಪ, ಶೀಲಾ ಶ್ರೀನಿವಾಸ್, ಕೆ. ಭಾರತಿ, ಪೂಜಾ ನಂದಿಹಳ್ಳಿ, ಸಲೀಂ, ಜಬೀವುಲ್ಲ, ಕೆ. ಕೃಷ್ಣಮೂರ್ತಿ ಇತರರು ಇದ್ದರು.