SUDDIKSHANA KANNADA NEWS/ DAVANAGERE/DATE:31_08_2025
ದಾವಣಗೆರೆ: ಗಣೇಶೋತ್ಸವ ಮೆರವಣಿಗೆ ವೇಳೆ ಡಿಜೆ ಸೌಂಡ್ ಸಿಸ್ಟಂ ಬಳಕೆ ನಿಷೇಧವಿದ್ದರೂ ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಕಾರಣ ದಾವಣಗೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಡಿಜೆ ಸಿಸ್ಟಂ ಹೊತ್ತೊಯ್ಯುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಆರೋಪಕ್ಕೆ ಗುರಿಯಾಗಿದ್ದ ಸಂಸದ ಸಸಿಕಾಂತ್ ಸಿಂಥಿಲ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ಯಾಕೆ?
ಇಂದು ಬೆಳ್ಳಂಬೆಳಿಗ್ಗೆ ಸುಮಾರು 1 ಗಂಟೆಯ ಸಮಯದಲ್ಲಿ ದಾವಣಗೆರೆ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಾಳು ಗೊಲ್ಲರಹಟ್ಟಿಯಲ್ಲಿ ಗಣೇಶ ಮೆರವಣಿಗೆ ಸಮಯದಲ್ಲಿ ಡಿಜೆ ಸೌಂಡ್ ಸಿಸ್ಟಂ ಹೊತ್ತೊಯ್ಯುವ ಲಾರಿ ಸಂಚರಿಸುತ್ತಿದ್ದ ಕುರಿತಂತೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಜಿಲ್ಲಾಧಿಕಾರಿ ಅವರು ಡಿಜೆ ಸೌಂಡ್ ಸಿಸ್ಟಂ ನಿಷೇಧ ಮಾಡಿದ್ದರು. ಆದರೂ ಇದನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರಿಂದ ಡಿಜೆ ಸೌಂಡ್ ಸಿಸ್ಟಂ ಇರುವ ಲಾರಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದು ಲಾರಿ ಮತ್ತು ಡಿಜೆ ಸೌಂಡ್ ಸಿಸ್ಟಂ ಸಮೇತ ಸೀಜ್ ಮಾಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಠಾಣಾ ಗುನ್ನೆ ನಂಬರ್ 292/2025 ರೀತ್ಯ ಪ್ರಕರಣ ದಾಖಲಿಸಿದೆ. ಇನ್ನು ಮುಂದೆ ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಂ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದ್ದು ಕಂಡು ಬಂದರೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.