ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯವು ಇದುವರೆಗೆ ಯಾಕೆ ಒಗ್ಗಟ್ಟಾಗಿಲ್ಲ ಎಂಬ ಕುರಿತಂತೆ ಯಾವ್ಯಾವ ನಾಯಕರು ಏನೇನು ಹೇಳಿದ್ರು ಗೊತ್ತಾ. ಸಮಾಜದ ಸಂಘಟನೆಯಾಗದ ಭವಿಷ್ಯದಲ್ಲಿ ಆಪತ್ತು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
READ ALSO THIS STORY: ಒಗ್ಗಟ್ಟಿನ ಮಂತ್ರ ಜಪಿಸಿದ ವೀರಶೈವ ಲಿಂಗಾಯತ ನಾಯಕರು: ಜಾತಿಗಣತಿಗೆ ವಿರೋಧ
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಪಂಚಪೀಠಾಧ್ಯಕ್ಷರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಎಲ್ಲಾ ನಾಯಕರು ಎಲ್ಲಾ ಒಳಪಂಗಡಗಳು ಒಟ್ಟಾಗದಿದ್ದರೆ ಭವಿಷ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ
ಹಾಗೂ ರಾಜಕೀಯವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿ. ಎಸ್. ಯಡಿಯೂರಪ್ಪ ಏನಂದ್ರು?
ಇಂದು ಧರ್ಮದ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಧರ್ಮೋ ರಕ್ಷಿತಿ ರಕ್ಷಿತಃ ಎಂಬಂತೆ ಧರ್ಮ ರಕ್ಷಿಸಿದರೆ ನಮ್ಮನ್ನು ರಕ್ಷಿಸುತ್ತದೆ. ಧರ್ಮದ ರಕ್ಷಣೆಗೆ ಹೋರಾಡಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ. ಐತಿಹಾಸಿಕ, ಸಾಮಾಜಿಕ ಅನೇಕ ಸವಾಲುಗಳ ಜೊತೆಗೆ ರಾಜಕೀಯ ಸವಾಲು ಸಮಾಜಕ್ಕೆ ದೊಡ್ಡದಿದೆ. ರಾಜ್ಯ ಸರ್ಕಾರವು ವೀರಶೈವ ಲಿಂಗಾಯತರನ್ನು ಒಡೆಯಲು ನಡೆಸುತ್ತಿರುವ ತಂತ್ರ, ಕುತಂತ್ರ ತಿರಸ್ಕರಿಸಿ ನಡೆಯಬೇಕಿದೆ. ಜಾತಿಗಣತಿ ಈಗಾಗಲೇ ತಿರಸ್ಕರಿಸಲಾಗಿದೆ. ಅವೈಜ್ಞಾನಿಕ, ಅಪೂರ್ಣ ಅನೇಕ ಜಾತಿಗಳನ್ನು ಬೇರ್ಪಡಿಸಲಾಗಿದೆ. ಬೇರೆ ಜಾತಿ, ಧರ್ಮಗಳಿಗೆ ಅನ್ವಯವಾಗದ್ದು ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ಆಗಿದೆ. ಇಂಥದ್ದಕ್ಕೆ ತಕ್ಕ ಪ್ರತಿಕ್ರಿಯೆ ನೀಡೋಣ. ಭವಿಷ್ಯ ದೃಷ್ಟಿಯಿಂದ ನಾವೆಲ್ಲರೂ ಜಾಗೃತರಾಗರೋಣ ಎಂದು ಹೇಳಿದರು.
ಮೀಸಲಾತಿ ಬಗ್ಗೆ ಈ ಸಮಾಗಮದಲ್ಲಿ ಸಮಗ್ರ ಚಿಂತನೆಯಾಗಲಿ. ಏಕರೂಪತೆ, ಸಂಘಟನೆ ಸೇರಿದಂತೆ ಸಮಾಜದ ಒಳಿತಿಗಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿ. ಆಚಾರ, ವಿಚಾರ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಸಮುದಾಯದ ಚೌಕಟ್ಟಿನಿಂದ ದೂರ ಸರಿಯದಂತೆ ನೋಡಿಕೊಳ್ಳಬೇಕು. ನಮ್ಮ ಆಚಾರ, ವಿಚಾರಗಳು ಹೆಮ್ಮೆ ಎಂಬ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಠ, ಧಾರ್ಮಿಕತೆ ಯಾವುದೇ ಇರಲಿ ವ್ಯಾಪಕವಾಗಿ ನಡೆಯುವಂತಾಗಬೇಕು. ನಾವೆಲ್ಲರೂ ಒಂದಾಗಿದ್ದರೆ ಎಂಥ ಸವಾಲುಗಳನ್ನು ಬೇಕಾದರೂ ಎದುರಿಸಬಹುದು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಹಿಯೂ ಒಗ್ಗಟ್ಟು ಪ್ರದರ್ಶಿಸಬೇಕಾಗಿದ್ದು, ಶಿವಶರಣರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ ಎಂದು ಯಡಿಯೂರಪ್ಪ ಸಲಹೆ ನೀಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್:
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ ಎಲ್ಲರನ್ನೂ ಸಮಾನವಾಗಿ ಕಾಣುವ ಧರ್ಮ ಇದ್ದರೆ ಅದು ವೀರಶೈವ ಲಿಂಗಾಯತ ಮಾತ್ರ. 2026ರಲ್ಲಿ ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜಾತಿಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ, ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರದ ಜಾತಿ ಗಣತಿ ಮಹತ್ವದ್ದು. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರು, ಪದಾಧಿಕಾರಿಗಳು, ಪೀಠಾಧ್ಯಕ್ಷರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿ. ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಎಂದು ನಮೂದು ಮಾಡಬೇಕು. ನೂರಾರು ಉಪಪಂಗಡಗಳಿಗೆ ಮೀಸಲಾತಿ, ಸೌಲಭ್ಯ ತೊಂದರೆ ಆಗದ ರೀತಿಯಲ್ಲಿ ಸಿಗುವಂತಾಗಬೇಕು. ಮಹಾಸಭಾ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸುಪ್ರೀಂಕೋರ್ಟ್ ನ ನ್ಯಾಯಾಧೀಶರು, ಹಿರಿಯರು ವಕೀಲರು, ಸಮಾಜದ ಹಿರಿಯರ ಸಮಿತಿ ಮಾಡಿ ಕಾನೂನು ವಿಚಾರ ತಿಳಿದುಕೊಂಡು ಮೀಸಲಾತಿ, ಜನಸಂಖ್ಯೆ, ಜಾತಿಗಣತಿ ಸೇರಿದಂತೆ ಬೇರೆ ಬೇರೆ ವಿಚಾರಗಳ ಕುರಿತಂತೆ ಸಮಗ್ರವಾಗಿ ಚರ್ಸಿಚಿ ನಿರ್ಧಾರಕ್ಕೆ ಬರುವಂತಾಗಬೇಕು. ವೀರಶೈವ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನ ಈ ಹಿಂದೆ ನಡೆದಿತ್ತು. ವೀರಶೈವ, ಲಿಂಗಾಯತವೇ ಬೇರೆ ಬೇರೆ. ಹಾಗಾಗಿ ಪ್ರತ್ಯೇಕ ಧರ್ಮಕ್ಕೆ ಹೋರಾಟ ಶುರುವಾಗಿತ್ತು. ಆಗ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಪಂಚಪೀಠಾಧ್ಯಕ್ಷರು ಎರಡೂ ಬೇರೆ ಅಲ್ಲ. ಒಂದೇ ಎಂಬ ತತ್ವಕ್ಕೆ ಅಂಟಿಕೊಂಡಿದ್ದ ಪರಿಣಾಮ ಸಮಾಜ ಈಗಲೂ ಗಟ್ಟಿಯಾಗಿದೆ. ಪಂಚ ಪೀಠಾಧ್ಯಕ್ಷರು ಒಂದೆಡೆ ಸೇರಿದ್ದು ಖುಷಿ ತಂದಿದ್ದು, ಒಗ್ಗಟ್ಟು ತೋರಿಸದಿದ್ದರೆ ಸಮಾಜಕ್ಕೆ ತೊಂದರೆ ಆಗುವುದು ಖಚಿತ ಎಂದು ಅಭಿಪ್ರಾಯಪಟ್ಟರು.
ಬಿ. ವೈ. ವಿಜಯೇಂದ್ರ ಏನಂದ್ರು?
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ ಭಾರತೀಯ ಪರಂಪರೆಗೆ ಮಠ-ಮಾನ್ಯಗಳ ಕೊಡುಗೆ ಬಹುದೊಡ್ಡದು, ಅದರಲ್ಲೂ ಕರ್ನಾಟಕದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ಮಾಡಿ ಶತ-ಶತಮಾನಗಳಿಂದಲೂ ಸಮಾಜದ ಕಣ್ಣಾಗಿ ಭಕ್ತರ ಪಾಲಿನ ಬೆಳಕಾಗಿ ಮಠಮಾನ್ಯಗಳು ಉತ್ತಮ ಸಮಾಜ ಕಟ್ಟಲು ಬಹುದೊಡ್ಡ ಸಮರ್ಪಣೆ ಮಾಡಿವೆ ಎಂದು ತಿಳಿಸಿದರು.
ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬೋಧಿಸಿದ ಧರ್ಮ ವೀರಶೈವ ಲಿಂಗಾಯತ ಸಮಾಜ, ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಈ ಧರ್ಮ ಆದ್ಯತೆ ನೀಡಿದ್ದು ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವಸಿದ್ಧಾಂತಗಳು, 12ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಬೆಳಕಿನ ದಾರಿ ತೋರಿಸುತ್ತವೆ. ಪೂಜ್ಯ ರಂಭಾಪುರಿ ಪೀಠ, ಉಜ್ಜೈನಿ ಪೀಠ, ಕೇದಾರಪೀಠ, ಕಾಶಿ ಪೀಠ, ಶ್ರೀ ಶೈಲ ಪೀಠದ ಶ್ರೀಗಳು
ಒಂದೇ ವೇದಿಕೆಯಲ್ಲಿ ನೆಲೆಗೊಂಡು ನಾಡು ಕಟ್ಟುವ ಹೊಸ ಆಯಾಮಕ್ಕೆ ಅಡಿಪಾಯ ಹಾಕಿದಂತಾಗಿದೆ ಎಂದು ಹೇಳಿದರು.
ಶಂಕರ್ ಬಿದರಿ ಹೇಳಿದ್ದೇನು?
ಕ್ರಿಶ್ಚಿಯನ್ ಸೇರಿದಂತೆ ಬೇರೆ ಬೇರೆ ಧರ್ಮಗಳಲ್ಲಿ ತಾವು ದುಡಿದ ಹಣದಲ್ಲಿ ಶೇಕಡಾ 10ರಷ್ಟು ಹಣವನ್ನು ಸಮಾಜದ ಅಭಿವೃದ್ಧಿಗೆ ನೀಡುತ್ತಾರೆ. ಅದೇ ರೀತಿಯಲ್ಲಿ ವೀರಶೈವ ಲಿಂಗಾಯತ ಸಮಾಜದವರು ತಾವು ದುಡಿದ ಶೇಕಡಾ 2ರಷ್ಟನ್ನು ಸಮಾಜದ ಉದ್ಧಾರಕ್ಕೆ ನೀಡಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಸಲಹೆ ನೀಡಿದರು.
ಸಾಮಾಜಿಕ, ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಸಮಾಜದ ಕಳಕಳಿಯೂ ಹಾಗೆಯೇ ಇದೆ ಎಂದು ಹೇಳಿದರು. ನಮ್ಮ ವೀರಶೈವ ಅಥವಾ ಲಿಂಗಾಯತ ಉಪಪಂಗಡಗಳ ಕುಟುಂಬವು ಪ್ರತಿ ವರ್ಷ ವಾರ್ಷಿಕ ಆದಾಯದ ಶೇಕಡಾ 2ರಷ್ಟು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಮುಕ್ತ ಮನಸ್ಸಿನಿಂದ ನೀಡಿ. ಇಲ್ಲದಿದ್ದರೆ ಸಮಾಜದ ಅಭಿವೃದ್ಧಿ ಬಹಳ ಕಷ್ಟ ಆಗುತ್ತದೆ. ಈ ಕಾರ್ಯ ಮಾಡೋಣ ಎಂದು ಕರೆ ನೀಡಿದರು.
ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. 2017ರಲ್ಲಿ ಒಕ್ಕೊರಲನಿಂದ ವೀರಶೈವ ಲಿಂಗಾಯತ ಮಹಾಸಭಾ ಒಪ್ಪಿದೆ. ಸೂರ್ಯ ಚಂದ್ರ ಇರುವವರೆಗೂ ಲಿಂಗಾಯತ ಮತ್ತು ವೀರಶೈವ ಒಂದೇ ಎಂದು ನಾವು ಒಪ್ಪುತ್ತೇವೆ, ಇದೇ ರೀತಿಯಲ್ಲಿ ನಡೆದುಕೊಂಡು ಹೋಗುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ. ರಾಜ್ಯ ಸರ್ಕಾರದ ಜಾತಿಗಣತಿಯು ಪುನರ್ ವಿಮರ್ಶೆಗೆ ಒಳಪಡುವ ಅವಶ್ಯಕತೆಯೇ ಇಲ್ಲ ಎಂದು ಪ್ರತಿಪಾದಿಸಿದರು.
ಸಂವಿಧಾನದಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಹಿಂದೂ ಸಮಾಜದವರು ಮತ್ತು ಕನ್ನಡ ಭಾಷಿಕರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ರಿಯಾಯಿತಿ ಇಲ್ಲ. ಅಲ್ಪಸಂಖ್ಯಾತರ ಧಾರ್ಮಿಕ, ಖರ್ಚು ವೆಚ್ಚ ಒಂದೇ ಇರುತ್ತದೆ. ಆದ್ದರಿಂದ ಭಾಷಾ, ಧಾರ್ಮಿಕ ಒಳಗೊಂಡ ಶಿಕ್ಷಣ ಸಂಸ್ಥೆಗಳಿಗೆ ಬೇಧ ಭಾವ ಮಾಡದೇ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಏಕರೂಪದ ರಿಯಾಯಿತಿ ನೀಡುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ಸಮಾಜದ ಸಂಸದರು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ್
ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾವೆಲ್ಲಾ ಶಿವನ ಆರಾಧಕರು. ಶಿವನ ಭಕ್ತರು. ಪಂಚಪೀಠಾಧ್ಯಕ್ಷರು ನಾಡಿಗೆ ಆಗಮಿಸಿ ಪಾವನಗೊಳಿಸುತ್ತಾರೆ. ಸಾಂಘಿಕ ಪರಿಕಲ್ಪನೆ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ
ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯ ವಿಚಾರ. ಪಟ್ಟಭದ್ರಾ ಹಿತಾಸಕ್ತಿಗಳು ಒಡೆದಾಳಲು ಹೊರಟಿವೆ. ನಾವೆಲ್ಲರೂ ವೀರಶೈವ ಲಿಂಗಾಯತರು ಎಂದು ಎದೆತಟ್ಟಿಕೊಳ್ಳುವುದಷ್ಟೇ ಅಲ್ಲ. ನುಡಿದಂತೆ ನಡೆಯುವಂತರಾಗಬೇಕು. ಮಾತನಾಡಿ ಹೋಗಬಾರದಂತಾಗಬಾರದು. ಜಾತಿಗಣತಿ, ಮೀಸಲಾತಿ ಸೇರಿದಂತೆ ಅನೇಕ ವಿಚಾರಗಳ ಗೊಂದಲ ಕರ್ನಾಟಕದಲ್ಲಿ ಆಗುತ್ತಿದೆ. ಭಾರತ ದೇಶದ ಮೂಲೆ ಮೂಲೆಯಲ್ಲಿ ವೀರಶೈವರು, ಲಿಂಗಾಯತರಿದ್ದಾರೆ. ಒಂದೇ ವೇದಿಕೆಯಲ್ಲಿ ತರುವ ಕೆಲಸ ಆಗಬೇಕು. ಗೊಂದಲ ಕಾರಣಕ್ಕೆ ಒಳಪಂಗಡಗಳಾಗಿವೆ. ಕಾಯಕದ ನಂತರ ಒಂದಾಗುವಂಥ ಕೆಲಸ ಆಗಬೇಕು ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಉಜ್ಜಯನಿ ಸದ್ಧರ್ಮ ಪೀಠದ ಶ್ರೀ ಜಗದ್ಗುರುಗಳಾದ ಪರಮಪೂಜ್ಯ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳು, ಶ್ರೀ ಕಾಶಿ ಜ್ಞಾನ ಪೀಠ ಪೂಜ್ಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಶ್ರೀಗಳು, ಶ್ರೀಶೈಲ ಮಹಾಸಂಸ್ಥಾನ ಪೀಠದ ಪರಮ ಪೂಜ್ಯರಾದ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು, ಪರಮಪೂಜ್ಯ ರೇಣುಕ ಶಿವಾಚಾರ್ಯ ಶ್ರೀಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ವಿಜಯಾನಂದ ಕಾಶಪ್ಪನವರ್, ವಿಧಾನ ಪರಿಷತ್ ವಿಧಾನ ಸದಸ್ಯ ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ನಾಡಿನ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸಮಾಜದ ಪ್ರಮುಖರು, ಗಣ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಬಂಧುಗಳು ಉಪಸ್ಥಿತರಿದ್ದರು.