SUDDIKSHANA KANNADA NEWS/ DAVANAGERE/ DATE-14-06-2025
ಬೆಂಗಳೂರು: ಚಿಂತಕರ ಚಾವಡಿ ಎನಿಸಿರುವ ವಿಧಾನ ಪರಿಷತ್‌ಗೆ ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ನಾಮಕರಣ ಮಾಡಿ, ಪರಿಷತ್ ನ ಘನತೆಯನ್ನು ಎತ್ತಿ ಹಿಡಿಯಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ವಲಯಗಳಿಗೆ ನಾಮ ನಿರ್ದೇಶನ ಮಾಡಲು ಹೊರಟಿರುವ ಪಟ್ಟಿಯನ್ನು ಒಮ್ಮೆ ಗಮನಿಸಿದರೆ, ಸಾಧಕರ ಬದಲು ತಮ್ಮ ಆಸ್ಥಾನ ಕಲಾವಿದರನ್ನು ನಾಮ ನಿರ್ದೇಶನ ಮಾಡಲು ಹೊರಟಂತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಬಣ, ತಮ್ಮ ಬಣದ ಸಂಪೂರ್ಣ ಸ್ಥಾನಗಳನ್ನು ಮೋಸಗಾರರಿಗೆ, ಮತಾಂಧರಿಗೆ, ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತುವವರಿಗೆ, ಸುಳ್ಳು ಸುದ್ದಿ ಪೆಡ್ಲರ್‌ಗಳಿಗೆ ಮೀಸಲಿರಿಸಿರುವುದು ನಿಜಕ್ಕೂ ದುರಂತ ಎಂದು ಕಿಡಿಕಾರಿದೆ.
ಅದರಲ್ಲೂ ಮಾಧ್ಯಮ ವಲಯದಿಂದ ದಿನೇಶ್ ಅಮಿನ್‌ಮಟ್ಟು ಎಂಬ ಸುಳ್ಳು ಸುದ್ದಿ ಪೆಡ್ಲರ್ ಅನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಹೊರಟಿರುವುದು ವಿಧಾನ್ ಪರಿಷತ್ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ!!
ವಿಧಾನಸಭಾ ಚುನಾವಣೆಯ ದಿನ ಪತ್ರಿಕೆಯ ತುಣುಕೊಂದನ್ನು ಸುಳ್ಳು ಸುದ್ದಿಯನ್ನಾಗಿಸಿ ಹರಿಬಿಟ್ಟು, ಬಳಿಕ ಹಲವಾರು ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿನೇಶ್ ಅಮಿನ್‌ಮಟ್ಟು ಅಂತಹ ಫ್ರಾಡ್‌ಗಳನ್ನು ಬಿಟ್ಟರೆ ಕಾಂಗ್ರೆಸ್‌ನಿಂದ ಪರಿಷತ್ ಸದಸ್ಯ ಸ್ಥಾನಕ್ಕೆ ಅರ್ಹವಾಗುವ ಯಾವೊಬ್ಬ ವ್ಯಕ್ತಿಯೂ ಇಲ್ಲದಿರುವುದು ಅತ್ಯಂತ ಆಶ್ಚರ್ಯ!! ಎಂದಿದೆ.
ದಿನೇಶ್ ಅಮಿನ್‌ಮಟ್ಟು ಅವರ ಸುಳ್ಳು,ಮೋಸ, ವಂಚನೆಯ ಪ್ರಪಂಚ ಬಗೆದಷ್ಟು ಕೌತುಕ ಹಾಗೂ ಭಯಾನಕವಾಗಿದೆ. ಅತ್ಯಂತ ವಿಶ್ವಾಸಾರ್ಹ ಎಂಬ ಪತ್ರಿಕೆಯ ತುಮಕೂರು ಭಾಗದ ವರದಿಗಾರನೆಂದು ಹೇಳಿ 2400 ಚದರ ಅಡಿಯ ನಿವೇಶನವನ್ನು ಅಕ್ರಮವಾಗಿ ತಮ್ಮದಾಗಿಸಿಕೊಂಡಿದ್ದರು. ಆ ನಿವೇಶನವನ್ನು ಪಡೆಯಲು 15 ವರ್ಷಕ್ಕೂ ಹೆಚ್ಚು ಕಾಲ ತುಮಕೂರಿನಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿತ್ತು.
ಆದರೆ ತುಮಕೂರಿನಲ್ಲಿ ಕೇವಲ 2 ರಿಂದ 3 ವರ್ಷ ಸೇವೆ ಸಲ್ಲಿಸಿ, ಅದು ಸಹ ಟಚ್ ಎಂಡ್ ಗೋ ವ್ಯವಹಾರದ ರೀತಿ ತುಮಕೂರಿನಲ್ಲಿ ಉಳಿದು, ತುಮಕೂರಿನಲ್ಲಿ 15ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದೇನೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸೈಟು ನುಂಗಿದವರು ನಿಜಕ್ಕೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅರ್ಹರೇ..!! ಎಂದು ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ಎಂಬ ಪ್ರಭಾವ ಬಳಸಿ “ ದಿ ಪಾಲಿಸಿ ಫ್ರಂಟ್” ಎಂಬ ಬೇನಾಮಿ ಕಂಪನಿಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಪಾರದರ್ಶಕ ಕಾನೂನಿನ ವ್ಯಾಪ್ತಿಗೆ ಒಳಪಡದೆ, ಯಾವುದೇ ಟೆಂಡರ್ ಅನ್ನು ಸಹ ಪಡೆಯದೆ, ಬರೋಬ್ಬರಿ ₹7.20 ಕೋಟಿಯನ್ನು ಪಡೆಯಲಾಗಿದೆ.
ಆದರೆ ವಿಪರ್ಯಾಸವೆಂದರೆ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಆ ಕಂಪನಿ ನೀಡಿದ ವಿಳಾಸಕ್ಕೆ ಹೋಗಿ ಕಂಪನಿಯನ್ನು ಹುಡುಕಿದರೆ, ಆ ವಿಳಾಸದಲ್ಲಿ ಕಂಪನಿಯೇ ನಾಪತ್ತೆ!! ಫೇಸ್‌ಬುಕ್ ನಲ್ಲಿ ತಮಗಾದವರಿಗೆ ಬೈಯಲು ಫೇಕ್ ಅಕೌಂಟ್ ತೆರೆದಂತೆ , ಸರ್ಕಾರದಿಂದ ದುಡ್ಡು ಹೊಡೆಯಲು ಫೇಕ್ ಕಂಪನಿಯನ್ನೆ ಸೃಷ್ಟಿಸಿದ್ದಾರೆ ಅಮಿನ್‌ಮಟ್ಟು ಅವರು!!
ಇಷ್ಟೆಲ್ಲಾ ರಾದ್ಧಾಂತಗಳನ್ನು ಮಾಡಿರುವ ವ್ಯಕ್ತಿಯನ್ನು ಅದರಲ್ಲೂ ನಾಮ ನಿರ್ದೇಶನ ಕೋಟಾದಡಿ ಪರಿಷತ್‌ಗೆ ನಾಮ ನಿರ್ದೇಶನ ಮಾಡುವುದು ಸಂಪೂರ್ಣ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ. ಯಾವುದೇ ಅಧಿಕಾರವಿಲ್ಲದಿದ್ದಾಗ ಇಷ್ಟೊಂದು ವಂಚನೆ ಹಾಗೂ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ವ್ಯಕ್ತಿ ಪರಿಷತ್ ಗೆ ಬಂದು ಕೂತರೆ, ಕರ್ನಾಟಕದ ಸ್ವಾಸ್ಥ್ಯ ಹಾಳಾಗುವುದು ಖಂಡಿತ ಎಂದು ಎಚ್ಚರಿಸಿದೆ.
ಹೀಗಾಗಿ ದಿನೇಶ್ ಅಮಿನ್‌ಮಟ್ಟು ಅವರಂತಹ ಕಳಂಕಿತ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬಾರದು ಎಂದು ನಾವು ಆಗ್ರಹಿಸುತ್ತೇವೆ. ಒಂದು ವೇಳೆ ಭಂಡ ಹಾಗೂ ಭ್ರಷ್ಟ ಸಿದ್ದರಾಮಯ್ಯ ಅವರು ತಮ್ಮ ಮೊಂಡುತನದಿಂದ ದಿನೇಶ್ ಅವರನ್ನು ನಾಮನಿರ್ದೇಶನ ಮಾಡಿದರೆ, ರಾಜ್ಯಪಾಲರು ಅವರ ನಾಮ ನಿರ್ದೇಶನವನ್ನು ವಾಪಸ್ ಕಳುಹಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದೆ.