SUDDIKSHANA KANNADA NEWS/ DAVANAGERE/ DATE:25-07-2023
ದಾವಣಗೆರೆ: ಅವರೆಲ್ಲಾ ಕಷ್ಟಪಟ್ಟು ದುಡಿಯುವ ಯುವಕರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತವರು. ಎಲ್ಲರಿಗೂ ಅವಕಾಶ ಸಿಗುವುದು ಕಡಿಮೆ. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳುವವರು ಸಹ ಕಡಿಮೆ. ಆದ್ರೆ, ದಾವಣಗೆರೆಯ ಯುವಕರ ಡೈಮಂಡ್ (Diamond) ಯಶೋಗಾಥೆ ಇತರರಿಗೂ ಸ್ಫೂರ್ತಿ.
ಸ್ಯಾಂಡಲ್ ವುಡ್ ನಲ್ಲಿ ಎಷ್ಟೋ ಮಂದಿ ಸ್ಟಾರ್ ಆಗಿ ಮೆರೆದಿದ್ದಾರೆ. ಮೆರೆಯುತ್ತಲೇ ಇದ್ದಾರೆ. ಎಷ್ಟೋ ಸ್ಟಾರ್ ನಟರ ಮಕ್ಕಳು ಇನ್ನೂ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಲೇ ಇದ್ದಾರೆ. ಮತ್ತೆ ಕೆಲವರು ಯಶಸ್ಸಿನ ಉತ್ತುಂಗಕ್ಕೂ ಹೋಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಅನೇಕ ನಟರು ಸಿಗುತ್ತಾರೆ. ಆದ್ರೆ, ದಾವಣಗೆರೆಯ ಮಾರ್ಷಲ್ ಆರ್ಟ್ಸ್ ನ ಯುವಕರ ಸಾಧನೆ ಎಲ್ಲರೂ ಮೆಚ್ಚುವಂಥದ್ದು, ಜೊತೆಗೆ ಹುಬ್ಬೇರಿಸುವಂಥದ್ದು. ಜಾಕಿಚಾನ್ ಹಾಗೂ ಟೋನಿಜಾ ಅವರಂತೆಯೇ ಈ ಯುವಕರ ಮಾರ್ಷಲ್ ಆರ್ಟ್ಸ್ ನಿಜಕ್ಕೂ ಅಚ್ಚರಿ ಮೂಡುವಂತೆ ಸಿನಿಮಾದಲ್ಲಿ ಮೂಡಿ ಬಂದಿದೆ.
ಈ ಸುದ್ದಿಯನ್ನೂ ಓದಿ:
ಮದ್ರಾಸ್ ಐ ವೈರಾಣುಗೆ ಪಡಬೇಕಿಲ್ಲ ಭಯ: ಈ ಮುನ್ನೆಚ್ಚರಿಕೆ ವಹಿಸಿದರೆ ಸಾಕು
ಒಂದು ಸಿನಿಮಾದಲ್ಲಿ ಜಿಲ್ಲೆಯೊಂದರ ಕಲಾವಿದರು ಹೆಚ್ಚಾಗಿ ಕಾಣಿಸಿಕೊಳ್ಳುವುದು ತುಂಬಾನೇ ವಿರಳ. 15ರಿಂದ 20 ಯುವಕರು ಸಿನಿಮಾದಲ್ಲಿ ನಟಿಸಿದ್ದಾರೆ. ದಾವಣಗೆರೆಯ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದ ಯುವಕರ ಕಲೆ
ಸಿನಿಮಾರಂಗಕ್ಕೂ ಕೊಂಡೊಯ್ದಿದೆ. ಈ ಸಿನಿಮಾದಲ್ಲಿ ಯಾವುದೇ ಡ್ಯೂಪ್ ಬಳಸದೇ ನಟನೆ ಮಾಡಿರುವುದು ವಿಶೇಷ.
ಡೈಮಾಂಡ್ (Diamond) ಕ್ರಾಸ್ ಸ್ಪೆಷಾಲಿಟಿ:
ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವವರೇ ಹೆಚ್ಚು. ಆದ್ರೆ, ಈ ಚಿತ್ರದಲ್ಲಿ ನಟಿಸಿರುವ ಯುವಕರೆಲ್ಲರೂ ಹೊಸಬರೇ. ದಾವಣಗೆರೆ ಯುವಕ ಹೀರೋ ಆದರೆ, ಖಳನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆ,
ಮೇಕಪ್, ತಂತ್ರಜ್ಞತೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಸೈಬರ್ ಕ್ರೈಂ ಕಥಾಹಂದರ:
ಇನ್ನು ಸೈಬರ್ ಕ್ರೈಂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಸೈಬರ್ ಕ್ರೈಂ ಮಾಡಿದವರನ್ನು ಪತ್ತೆ ಹಚ್ಚುವುದು ಸುಲಭವಲ್ಲ. ಇಡೀ ಚಿತ್ರವು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಡೈಮಂಡ್ (Diamond) ಕ್ರಾಸ್ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ. ಇದರ ಹಿಂದೆ ಸಾಕಷ್ಟು ನೋವು, ಪರಿಶ್ರಮ, ಅಭ್ಯಾಸ, ಕಲಿಕೆ ಸೇರಿದಂತೆ ಎಲ್ಲಾ ವಿಚಾರಗಳು ಅಡಗಿವೆ. ಜುಲೈ 28ಕ್ಕೆ ಚಿತ್ರ ತೆರೆಗೆ ಬರಲಿದೆ. ಅದೂ ನೂರು ಚಿತ್ರಮಂದಿರಗಳಲ್ಲಿ. ಹೊಸಬರು ನಟಿಸಿರುವ ಚಿತ್ರವು ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿರುವುದು ಸಹ ಸಾಧನೆಯೇ ಸರಿ.
ವಿಭಿನ್ನ ಕಥೆ, ವಿಭಿನ್ನ ನಿರೂಪಣೆ:
ದಾವಣಗೆರೆಯ ಸುಮಾರು 15 ರಿಂದ 20 ಕ್ಕೂ ಹೆಚ್ಚು ಹುಡುಗರು ನಟಿಸಿದ್ದಾರೆ. ಇದೊಂದು ಡಿಫರೆಂಟ್ ಸ್ಟೋರಿ. 12 ವರ್ಷದ ಕೆಳಗೆ ದಿನಗೂಲಿ ಕಾರ್ಮಿಕರ ಮಕ್ಕಳು ಯಾರ ಸಹಾಯವಿಲ್ಲದೇ ಫೈಟಿಂಗ್ ಕಲಿತಿದ್ದಾರೆ. ರಾಮನಗರದ ಬಿಡದಿಯಲ್ಲಿ ತಿಂಗಳುಗಟ್ಟಲೇ ಕಾಲ ಸಿನಿಮಾಕ್ಕೆ ತಕ್ಕಂತೆ ಸ್ಟಂಟ್ ಮಾಡಿದ್ದಾರೆ.
ರೈಸ್ ಮಿಲ್ ಅಭ್ಯಾಸ:
ಇನ್ನು ಚಿತ್ರದಲ್ಲಿ ನಟನೆ ಮಾಡಿರುವ ಯುವಕರೆಲ್ಲರೂ ಆರ್ಥಿಕವಾಗಿ ಸಬಲರಲ್ಲ. ಸತತ ಪರಿಶ್ರಮ, ಸತತ ಅಭ್ಯಾಸ, ನಿರಂತರ ಶ್ರಮ ಇದ್ದರೆ ಮುಂದೊಂದು ದಿನ ಉತ್ತಮ ಅವಕಾಶ ಸಿಗುತ್ತದೆ ಎಂಬುದು ಈ ಯುವಕರಿಗೆ ಒಪ್ಪುತ್ತದೆ. ಹಳಯ ರೈಸ್ ಮಿಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಸೂಕ್ತ ಪರಿಕರಗಳು ಇರಲಿಲ್ಲ. ಇದನ್ನು ಗಮನಿಸಿದ ಕಲಾ ಪೋಷಕರಾದ ದಾವಣಗೆರೆಯ ಆರ್. ಟಿ. ಅರುಣ್ ಕುಮಾರ್ ಅವರು ಎಲ್ಲರ ಬೆನ್ನೆಲುಬಾಗಿ ನಿಂತಿದ್ದಾರೆ.
ಡೈಮಂಡ್ (Diamond) ಕ್ರಾಸ್ ಗೆ ಕರೆತಂದವರು:
ಅರುಣ್ ಕುಮಾರ್ ಅವರು ಯುವಕರ ಸಾಹಸ, ಮಾರ್ಷಲ್ ಆರ್ಟ್ಸ್ ಗಮನಿಸಿದರು. ಇವರನ್ನು ಸಿನಿಮಾಕ್ಕೆ ಬಳಸಿಕೊಳ್ಳುವ ಕುರಿತಂತೆ ಚಿಂತಿಸಿದರು. ಕನ್ನಡ ಚಿತ್ರರಂಗದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರ ಅಳಿಯ ರಾಮ್ ದೀಪ್ ಅವರ ಬಳಿ ಪ್ರಸ್ತಾಪ ಮಾಡಿದರು. ಯುವಕರ ಸಾಹಸ ನೋಡಿ ಎಸ್ ಅಂದರು.
ರಾಮ್ ದೀಪ್ ಹೇಳಿದ್ದೇನು…?
ಸೈಬರ್ ಹ್ಯಾಕಿಂಗ್ ಸುತ್ತ ಹೆಣೆದಿರುವ ಚಿತ್ರ. ಏಳೆಂಟು ರೈಲುಗಳು ಒಂದೇ ಕ್ರಾಸ್ ನಲ್ಲಿ ಒಟ್ಟಿಗೆ ಸಾಗಿದಾಗ ಹೇಗೆ ಡೈಮಂಡ್ (Diamond) ರೂಪ ತಾಳುತ್ತದೆಯೋ ಹಾಗೆಯೇ ಅದರ ಆಧಾರದಲ್ಲಿ ಸಾಗುವ ಕಥೆಯೇ ಡೈಮಂಡ್ (Diamond) ಕ್ರಾಸ್. ಸ್ವಲ್ಪ ಯಡವಟ್ಟಾದರೂ ಅಪಾಯ ಕಟ್ಟಿಟ್ಟ ಬುತ್ತಿ. ನಾಯಕ ಸ್ವಾರ್ಥಿಯಾಗಿದ್ದಾಗ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಸಾಗುತಿರುತ್ತದೆ. ಎಲ್ಲರಿಗೂ ಒಳಿತು ಮಾಡಬೇಕೆಂದು ಹೊರಟಾಗ ಸಮಸ್ಯೆಯ ಸುಳಿಗೆ ಹೇಗೆ ಸಿಲುಕುತ್ತಾನೆ, ಏನೆಲ್ಲಾ ಸಮಸ್ಯೆ ಅನುಭವಿಸುತ್ತಾನೆ, ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ತಿರುಳು.
ಡ್ಯೂಪ್ ಇಲ್ಲ, ಎಲ್ಲವೂ ರಿಯಲಿಸ್ಟಿಕ್:
ಎಲ್ಲಿಯೂ ಡ್ಯೂಪ್ ಬಳಸಿಲ್ಲ. ಎಲ್ಲರೂ ನೈಜವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಕಥೆಯೇ ಹೀರೋ. ಎಲ್ಲರಿಗೂ ಉತ್ತಮ ಅವಕಾಶ ಕೊಡಲಾಗಿದೆ. ಕೊಟ್ಟಿದ್ದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಎಲ್ಲರೂ ಉತ್ತಮವಾಗಿ ನಟನೆ ಮಾಡಿದ್ದಾರೆ ಎನ್ನುತ್ತೆ ಚಿತ್ರತಂಡ.
ಎಲ್ಲೆಲ್ಲಿ ಶೂಟಿಂಗ್:
ಡೈಮಂಡ್ (Diamond) ಕ್ರಾಸ್ ಸಿನಿಮಾವು ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. ಟೈಟಲ್ ಸಾಂಗ್ ಮಾತ್ರವಿದೆ.
ರಜತ್ ಅಣ್ಣಪ್ಪ ಹೇಳಿದ್ದೇನು..?
ಇನ್ನು ನನ್ನ ತಂದೆ ಟಿವಿಯಲ್ಲಿ ಸಿನಿಮಾ ಬರುವಾಗ ನೀನು ಆ ರೀತಿ ಆಗಬೇಕು ಎಂದು ಕನಸು ಕಂಡಿದ್ದರು. ನಾನು ಚಿತ್ರದಲ್ಲಿ ನಟಿಸಲು ಹೋದಾಗ ತಂದೆ ಸಿ. ಜೆ. ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲಿ ನನಗೆ ವಿಷಯ ಗೊತ್ತಾದರೆ ವಾಪಸ್ ಬರುತ್ತೇನೆ ಎಂದುಕೊಂಡು ವಿಚಾರವೇ ಹೇಳಲಿಲ್ಲ. ಕಳೆದ ಒಂದು ವರ್ಷದ ಹಿಂದೆ ತೀರಿಕೊಂಡರು. ಇಂದು ಬದುಕಿದ್ದರೆ ತೆರೆ ಮೇಲೆ ನನ್ನನ್ನು ನೋಡಿ ಖುಷಿ ಪಡುತ್ತಿದ್ದರು ಎಂದು ನಾಯಕ ನಟ ರಜತ್ ಅಣ್ಣಪ್ಪ ಹೇಳಿದರು.
ಚಿತ್ರ ಬಿಡುಗಡೆ ಸ್ವಲ್ಪ ತಡವಾಗಿದೆ. ರಾಜ್ಯಾದ್ಯಂತ ದಾವಣಗೆರೆ ಹುಡುಗರು ನಟಿಸಿರುವ ಚಿತ್ರ ಬಿಡುಗಡೆಯಾಗುತ್ತಿರುವುದು ಖುಷಿ ಕೊಟ್ಟಿದೆ. ಅವಕಾಶ ಹುಡುಕುತ್ತಿದ್ದ ವೇಳೆ ಆರ್. ಟಿ. ಅರುಣ್ ಕುಮಾರ್ ಸಹಾಯ ಮಾಡಿದ್ದಾರೆ. 20 ಹುಡುಗರು ಚಿತ್ರದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಆಕ್ಷನ್ ಚಿತ್ರ ಇದಾಗಿದ್ದು ಉತ್ತಮವಾಗಿ ಮೂಡಿಬಂದಿದೆ. ಚಿತ್ರಕ್ಕೆ ಜನರ ಸಹಕಾರ ಬೇಕು ಎಂದು ಮನವಿ ಮಾಡಿದರು.
ನಾಯಕಿ ರೂಪಿಕಾ ಏನಂದ್ರು…?
ನಾನು ಇದುವರೆಗೆ 12 ಸಿನಿಮಾಗಳಲ್ಲಿ ನಟಿಸಿದ್ದೇನೆ. ಕಿರುತೆರೆಯಲ್ಲಿಯೂ ಅದೃಷ್ಟ ಪರೀಕ್ಷಿಸಿದ್ದೆ. ಡೈಮಂಡ್ (Diamond) ಕ್ರಾಸ್ ಚಿತ್ರದಲ್ಲಿ ನನ್ನದು ಸ್ಪೆಷಲ್ ರೋಲ್. ಬೇರೆ ಸಿನಿಮಾ ಹಾಗೂ ಸೀರಿಯಲ್ ಗಳಿಗಿಂತ ಇಲ್ಲಿ ಹೆಚ್ಚು ನನಗೆ ನಟನೆ ಮಾಡಲು ಅವಕಾಶ ಸಿಕ್ಕಿದೆ. ಈ ತಂಡದ ಜೊತೆ ಕೆಲಸ ಮಾಡಲು ತುಂಬಾನೇ ಖುಷಿ ಕೊಟ್ಟಿದೆ. ಎಲ್ಲಾ ಯುವಕರು ಉತ್ತಮವಾಗಿ ನಟಿಸಿದ್ದಾರೆ. ಈ ತಂಡದ ಜೊತೆ ವರ್ಕ್ ಮಾಡಿದ್ದು ಹೊಸ ರೀತಿಯ ಅನುಭವ. ಉತ್ತಮ ಪಾತ್ರ ಸಿಕ್ಕಿದೆ ಎಂಬು ಖುಷಿ ನನಗಿದೆ. ಛಲ,ತಾಳ್ಮೆ ಇದ್ದರೆ ಏನೂ ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಡೈಮಂಡ್ (Diamond) ಕ್ರಾಸ್ ಸಿನಿಮಾ ಗುಡ್ ಎಕ್ಸಾಂಪಲ್ ಎಂದ್ರು.
ಕಂಪ್ಯೂಟರ್ ಗನ್, ಬುಲೆಡ್ ಪಾಸ್ ವರ್ಡ್:
ಕಲಾ ಪ್ರೋತ್ಸಾಹಕ ಆರ್. ಟಿ. ಅರುಣ್ ಕುಮಾರ್ ಮಾತನಾಡಿ, ದಾವಣಗೆರೆಯ ಪ್ರತಿಭೆಗಳೇ ಅಭಿನಯಿಸಿರುವ ಚಿತ್ರ ಡೈಮಂಡ್ (Diamond) ಕ್ರಾಸ್ ಇದೊಂದು ವಿಭಿನ್ನ ಕಥೆ, ಇಂದು ಕಂಪ್ಯೂಟರ್ ಗಳೇ ಗನ್ ಇದ್ದಂತೆ,ಪಾಸ್ ವರ್ಡ್ ಗಳೇ ಬುಲೆಟ್ ಆಗಿರುವ ಪರಿಸ್ಥಿತಿ ಇದೆ. ಈ ಆಧಾರದಲ್ಲಿ ಸೈಬರ್ ಕ್ರೈಂ ಕುರಿತು ಚಿತ್ರ ರೂಪಿಸಲಾಗಿದೆ. ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಒಂದಿಷ್ಟು ಟಿಕೆಟ್ ಖರೀದಿಸಿ ಜನರಿಗೆ ಚಿತ್ರ ವೀಕ್ಷಣೆಗೆ ಅವಕಾಸ ಮಾಡಿಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ದಾವಣಗೆರೆಗೆ ಚಿತ್ರದ ಪ್ರಮೋಷನ್ ಗೆ ಆಗಮಿಸಿದ್ದ ತಂಡವು ಹೆಚ್ಚಾಗಿ ದಾವಣಗೆರೆ ಹುಡುಗರ ಬಗ್ಗೆಯೇ ಮಾತನಾಡಿತು. ನಿರ್ಮಾಪಕ ಮನೀಷ್ ಮೆಹ್ತಾ ಮಾತನಾಡಿ, ಹಣ ಗಳಿಸುವುದಕ್ಕೆಂದೇ ಚಿತ್ರ ನಿರ್ಮಾಣ ಮಾಡಿಲ್ಲ. ದಾವಣಗೆರೆಯ ಯುವಕರ ಕಲೆ ಪ್ರೋತ್ಸಾಹಿಸಿದ್ದೇವೆ. ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ತಿಳಿಸಿದರು.
ಕಥೆ, ಚಿತ್ರಕಥೆ ಸಂಭಾಷಣೆ ಬರೆದ ರಾಮಚಂದ್ರ ಬಾಬು, ಕೆ.ಮನು, ರೋಹಿತ್ ಸೇರಿದಂತೆ ದಾವಣಗೆರೆಯ ಯುವಕರು ಗೋಷ್ಠಿಯಲ್ಲಿ ಹಾಜರಿದ್ದರು.
Diamond Cross, Diamond Cinema, Diamond Film Release july 28th, Diamond Cross Movie
Comments 4